Advertisement
ಬರೇ ಕರೆಂಟ್ ಬಿಲ್ ಕಟ್ಟುತ್ತ, ತೆರಿಗೆ ರಿಟರ್ನ್ಸ್ ಸಲ್ಲಿಸುತ್ತ, ಒಂದಷ್ಟು ಆಸ್ತಿಪಾಸ್ತಿ ಸಂಗ್ರಹಿಸಿ ಮೋಜು ಮಸ್ತಿ ಮಾಡಿ ಎದ್ದು ಹೋಗುವುದಕ್ಕಲ್ಲ ಎನ್ನುತ್ತಾರೆ ಧನಾತ್ಮಕ ಜೀವನ ಪ್ರತಿಪಾದಕ ಗೌರ್‌ಗೋಪಾಲ ದಾಸ್.
Related Articles
Advertisement
ನಾವು ಯಾರೇ ಆಗಿರಬಹುದು; ನಮ್ಮ ಸುತ್ತಮುತ್ತಲಿನ ಸಮಾಜಕ್ಕೆ, ಪರಿಸರಕ್ಕೆ, ರಾಜ್ಯಕ್ಕೆ, ದೇಶಕ್ಕೆ ನಮ್ಮ ವ್ಯಕ್ತಿತ್ವದ ಗರಿಷ್ಠ ವಾದುದನ್ನು ಕೊಡುಗೆಯಾಗಿ ನೀಡುವುದು ನಮ್ಮ ಬದುಕಿನ ಉದ್ದೇಶವಾಗಬೇಕು.
ನಮ್ಮಿಂದ ನಮ್ಮ ಸುತ್ತ ಏನಾದರೂ ಬದಲಾವಣೆ ಆಗಬೇಕು, ಸಕಾರಾತ್ಮಕ ಬೆಳವಣಿಗೆ ಹರಡಬೇಕು. ಈ ಬದಲಾವಣೆ ಸಣ್ಣಪುಟ್ಟ ಸಂಗತಿಗಳಿಂದ ಆರಂಭವಾಗಲಿ.
ದೀರ್ಘ ಪ್ರಯಾಣವೂ ಆರಂಭವಾಗುವುದು ಪುಟ್ಟ ಹೆಜ್ಜೆಯ ಮೂಲಕ ಎಂಬ ಮಾತೇ ಇದೆಯಲ್ಲ! ಮೊದಲಿಗೆ ನಮ್ಮ ಸುತ್ತಮುತ್ತಲ ಪರಿಸರ ಚೆನ್ನಾಗಿರುವುದಕ್ಕೆ ಕಾರಣವಾಗೋಣ.
ನಮ್ಮ ಗೆಳೆಯ-ಗೆಳತಿಯರು ಲವಲವಿಕೆಯಿಂದ ಇರುವುದನ್ನು ಸಾಧ್ಯವಾಗಿಸೋಣ. ಧನಾತ್ಮಕ ಬದಲಾವಣೆ ಎಂಬ ನಂದಾದೀಪಕ್ಕೆ ಒಮ್ಮೆ ಎಣ್ಣೆ ಹೊಯ್ದು ಬತ್ತಿ ಸರಿಪಡಿಸಿ ಬೆಳಗಿದರೆ ಮತ್ತೆ ನಿರಂತರ ನಸುಬೆಳಕು ಬೀರುತ್ತಾ ಇರುತ್ತದೆ.
ನಮ್ಮ ಮನೆ, ನಮ್ಮ ಸಮಾಜ, ನಮ್ಮ ಸಂಸ್ಥೆ, ನಮ್ಮ ರಾಜ್ಯ, ದೇಶ… ಎಲ್ಲವೂ ಮನುಷ್ಯರಿಂದ ನಿರ್ಮಾಣವಾದದ್ದು.ಇಲ್ಲೆಲ್ಲ ಇರುವುದು ಮನುಷ್ಯರು; ನಿರ್ಜೀವ ಕಲ್ಲುಬಂಡೆಗಳಲ್ಲ. ಮನುಷ್ಯರ ವ್ಯಕ್ತಿತ್ವವನ್ನು, ಒಳಗನ್ನು ಸಕಾರಾತ್ಮಕತೆಯ ಕಡೆಗೆ ತಿರುಗಿಸಿದರೆ ಮನೆ, ಸಂಸ್ಥೆ, ರಾಜ್ಯ, ದೇಶವನ್ನೂ ಬದಲಾಯಿಸಲು ಸಾಧ್ಯವಾಗುತ್ತದೆ. ಹೊಸ ಕಾನೂನು ತರುವುದು, ನಿಯಮಗಳನ್ನು ಹೇರುವುದರಿಂದ ದೊಡ್ಡ ಪರಿಣಾಮವೇನೂ ಆಗುವುದಿಲ್ಲ.
ಹಾಗಾಗಿ ನಾವೇ ಬದಲಾಗಬೇಕು. ನಾವು ಮತ್ತು ನಮ್ಮ ಸುತ್ತಮುತ್ತ ಆರಂಭವಾಗುವ ಬದಲಾವಣೆ ದೊಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ. ಇವತ್ತು ನಾವು ನಮ್ಮ ಉದ್ಯೋಗ, ಕಚೇರಿ, ಮನೆ, ಸಂಸಾರ ಎಂದೆಲ್ಲ ಎಷ್ಟರ ಮಟ್ಟಿಗೆ ಕಳೆದು ಹೋಗಿದ್ದೇವೆ ಎಂದರೆ, ಅದಷ್ಟೇ ಸತ್ಯ ಎಂದುಕೊಂಡು ಬಿಟ್ಟಿರುತ್ತೇವೆ. ಉದ್ಯೋಗದಲ್ಲಿ ಮುಂಭಡ್ತಿ, ಹೊಸ ಮನೆ, ಮಕ್ಕಳಿಗೆ ಒಳ್ಳೇ ವಿದ್ಯಾಭ್ಯಾಸ ಮಾತ್ರ ಯಶಸ್ಸು ಎಂದುಕೊಳ್ಳುತ್ತೇವೆ. ಇದರಿಂದಾಗಿ ನಮಗೆ ನಮ್ಮ ಆಂತರಿಕ ಸತ್ವದ ಅರಿವು ಆಗುತ್ತಿಲ್ಲ. ನಮ್ಮಲ್ಲಿ ಹಣ ಇದ್ದರೂ ಅಂತಸ್ತು ಇದ್ದರೂ ಸಂತೃಪ್ತಿ ಇಲ್ಲದಿರುವುದಕ್ಕೆ ಇದೇ ಕಾರಣ. ಹಣ, ಮನೆ, ಅಂತಸ್ತು, ಅಧಿಕಾರ ಎಲ್ಲವೂ ಬೇಕು ನಿಜ. ಆದರೆ ಅವೇ ಎಲ್ಲವೂ ಎಂದು ಭಾವಿಸದಿರೋಣ. ನಮ್ಮ ಸುತ್ತಮುತ್ತ, ನಮ್ಮ ಮನೆ, ನಮ್ಮ ಸಮುದಾಯದಲ್ಲಿ ಒಳ್ಳೆಯ ಬದಲಾವಣೆಗಳು ಆಗುವಂತೆ ನಮ್ಮ ನಮ್ಮ ಪರಿಮಿತಿಯಲ್ಲಿಯೇ ಪ್ರಯತ್ನಿಸೋಣ. ಹನಿಗೂಡಿದರೆ ಹಳ್ಳ ಎಂಬಂತೆ ಎಲ್ಲರೊಳಗೂ ಇಂತಹ ಒಂದು ಬದಲಾವಣೆ ಸಂಭವಿಸಿದರೆ ಅದರ ಒಟ್ಟು ಪರಿಣಾಮ ಬಹಳ ದೊಡ್ಡದಾಗಿರುತ್ತದೆ. ಹಾಗಾಗಿ ಒಳಿತಿನ ಮಹಾ ಪರಿವರ್ತನೆಯು ಮೊತ್ತಮೊದಲಾಗಿ ಆಗಬೇಕಾದ್ದು ನಮ್ಮೊಳಗೆಯೇ ಎಂಬುದನ್ನು ಅರಿತು ಮುನ್ನಡೆಯೋಣ. (ಸಂಗ್ರಹ)