Advertisement

ಸಂವಿಧಾನದಲ್ಲಿರುವ ಎಲ್ಲಾ ಅಂಶಗಳೂ ಪ್ರಸ್ತುತ

09:03 PM Nov 26, 2019 | Lakshmi GovindaRaj |

ಚಾಮರಾಜನಗರ: ಭಾರತೀಯ ಸಂವಿಧಾನವು ದೂರ ದೃಷ್ಟಿಕೋನವನ್ನು ಹೊಂದಿದೆ. ಹೀಗಾಗಿಯೇ ಇಂದಿಗೂ ಅದರಲ್ಲಿರುವ ಎಲ್ಲಾ ಅಂಶಗಳೂ ಪ್ರಸ್ತುತವಾಗಿವೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಡಿ.ವಿನಯ್‌ ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ನ್ಯಾಯಾಂಗ ಇಲಾಖೆ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಹಾಗೂ ಮೂಲಭೂತ ಕರ್ತವ್ಯಗಳ ಕುರಿತು ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರೂ ಸಂವಿಧಾನ ಒಪ್ಪುತ್ತಾರೆ: ಇಂದಿನ ಯುಗದಲ್ಲಿ ತಂತ್ರಜ್ಞಾನ ಎಂಬುದು ಸರ್ವವ್ಯಾಪಿಯಾಗಿದೆ. ಹೀಗಿದ್ದೂ ಅದು ಯಾವ ರೀತಿಯಲ್ಲೂ ಸಂವಿಧಾನವನ್ನು ಭಾದಿಸಿಲ್ಲ. ಸಂವಿಧಾನವನ್ನು ಎಲ್ಲರೂ ಒಪ್ಪುತ್ತಾರೆ, ಪಾಲಿಸುತ್ತಾರೆ. ಇದು ಭಾರತೀಯ ಸಂವಿಧಾನದ ವೈಶಿಷ್ಟéತೆ. ಭಗವದ್ಗೀತೆಯಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂಬ ವಾಕ್ಯ ಬರುತ್ತದೆ. ಧರ್ಮವನ್ನು ಪಾಲಿಸಿದಲ್ಲಿ, ಧರ್ಮ ಕಾಪಾಡುತ್ತದೆ ಎಂಬುದು ಇದರ ಸಾರಾಂಶ. ಆದರೆ, ಭಾರತದಲ್ಲಿ ಪ್ರಜಾಪ್ರಭುತ್ವ, ಸಂವಿಧಾನವೇ ಧರ್ಮ. ಅದರ ನೈಜ ಪಾಲನೆಯಿಂದ ಎಲ್ಲರಿಗೂ ಒಳಿತೇ ಆಗಲಿದೆ. ಇದರಿಂದ ದೇಶವು ಅಭಿವೃದ್ಧಿ ಸಾಧಿಸಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂವಿಧಾನ ಆಡಳಿತದ ಮೂಲ: ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ರಮೇಶ್‌ ಮಾತನಾಡಿ, ಸಂವಿಧಾನ ಭಾರತೀಯ ಆಡಳಿತ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಮೂಲಾಧಾರವಾಗಿದೆ. ಹೀಗಾಗಿ ಅದಕ್ಕೆ ಯಾವುದೇ ರೀತಿ ಧಕ್ಕೆ ಉಂಟಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಬೇಕು. ಜತೆಗೆ ಸಂವಿಧಾನದ ಮಹತ್ವ ಮತ್ತು ಪ್ರಸ್ತುತತೆಯನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಹೇಳಿದರು.

ಕರ್ತವ್ಯಗಳ ಪಾಲನೆಗೆ ಮುಂದಾಗಿ: ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಪಿ.ದೇವರಾಜು ಅವರು, ಯಾವ ದೇಶದಲ್ಲೂ ಇರದಂತ ವಿಶಿಷ್ಟ ಸಂವಿಧಾನವನ್ನು ಭಾರತ ಹೊಂದಿದೆ. ಕಾರಣ ಇದನ್ನು ದೇಶದಲ್ಲಿರುವ ವೈವಿಧ್ಯತೆಯ ಆಧಾರದಲ್ಲಿ ರಚಿಸಲಾಗಿದೆ. ಇಂತಹ ಸಮರ್ಥ ಸಂವಿಧಾನ ಸೃಷ್ಟಿಸಿದ ಶ್ರೇಯಸ್ಸು ಡಾ. ಬಿ.ಆರ್‌ ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ.

Advertisement

ಇದನ್ನು ಗೌರವಿಸಿ, ಅದರಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಸಂವಿಧಾನ ನೀಡಿರುವ ಹಕ್ಕುಗಳ ಬಗೆಗಷ್ಟೇ ಚಿಂತಿಸದೇ, ಕರ್ತವ್ಯಗಳ ಪಾಲನೆಗೂ ಮುಂದಾಗಬೇಕು. ಸಂವಿಧಾನದ ಆದರ್ಶವನ್ನು ಮೈಗೂಡಿಸಿಕೊಂಡು, ಅದರಂತೆ ಜ್ಞಾನವನ್ನು ದೇಶದ ಅಭಿವೃದ್ಧಿಯಲ್ಲಿ ವಿನಿಯೋಗಿಸಬೇಕು ಎಂದು ತಿಳಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸಂವಿಧಾನದ ಮುನ್ನುಡಿ ಬೋಧಿಸಿ, ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ, ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹಮ್ಮದ್‌ ರೋಷನ್‌ ಷಾ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಸ್ಮಿತಾ, ಸಿದ್ದಾರ್ಥ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ರಂಗಸ್ವಾಮಿ, ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಲೋಲಾಕ್ಷಿ, ಜಿಲ್ಲಾ ಸರ್ಕಾರಿ ವಕೀಲ ಎಚ್‌.ಎನ್‌.ಲೋಕೇಶ್‌, ಜಿಲ್ಲಾ ನ್ಯಾಯಾಂಗ ಇಲಾಖೆಯ ವಿ.ಯಂಕನಾಯಕ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಹರವೆ, ಉಪಾಧ್ಯಕ್ಷ ಎಂ.ಶಿವರಾಮು, ಜಂಟಿ ಕಾರ್ಯದರ್ಶಿ ಬಿ. ಮಂಜು ಉಪಸ್ಥಿತರಿದ್ದರು.

ಭಾರತದಂತಹ ವೈವಿಧ್ಯತೆ ಹೊಂದಿದ ರಾಷ್ಟ್ರಕ್ಕೆ ಸಂವಿಧಾನ ರಚಿಸುವುದು ಕಷ್ಟದ ಕಾರ್ಯವಾಗಿತ್ತು. ಅದನ್ನು ಸಾಧಿಸುವಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಯಶಸ್ವಿಯಾದರು. ಅವರು ಕೊಡುಗೆಯಾಗಿ ನೀಡಿರುವ ಈ ಸಂವಿಧಾನವನ್ನು ಪ್ರತಿಯೊಬ್ಬರೂ ಸರಿಯಾದ ರೀತಿಯಲ್ಲಿ ಪಾಲಿಸಿ, ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು.
-ಗಣಪತಿ ಜಿ. ಬಾದಾಮಿ, ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ

Advertisement

Udayavani is now on Telegram. Click here to join our channel and stay updated with the latest news.

Next