Advertisement

ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೆಗೆ ಸಕಲ ಸಿದ್ಧತೆ

12:04 PM Apr 02, 2018 | Team Udayavani |

ನಗರ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂಭ್ರಮದ ಜಾತ್ರೆಗೆ ಗೊನೆ ಮುಹೂರ್ತ ನಡೆದಿದ್ದು, ಸಿದ್ಧತೆಗಳು ಗರಿಗೆದರಿಕೊಂಡಿವೆ. ಈಗಾಗಲೇ ಲೋಕಾರ್ಪಣೆಗೊಂಡ ರಾಜಗೋಪುರದಿಂದ ದೇವಸ್ಥಾನದ ಕಳೆ ಇಮ್ಮಡಿಸಿದೆ. ಗದ್ದೆಯ ಧ್ವಜ ಇರುವ ಜಾಗಕ್ಕೆ ಇಂಟರ್‌ಲಾಕ್‌ ಅಳವಡಿಸುವ ಕಾರ್ಯ ನಡೆಯುತ್ತಿದೆ. ರಥಬೀದಿಯ ಇಕ್ಕೆಲಗಳಲ್ಲಿ ಬೀದಿ ದೀಪ ಅಳವಡಿಸುವ ಕೆಲಸವೂ ಚಾಲ್ತಿಯಲ್ಲಿದೆ. ಇದರ ಜತೆಗೆ ಇನ್ನೊಂದಷ್ಟು ಸಿದ್ಧತೆಗಳು ವೇಗ ಪಡೆಯುತ್ತಿವೆ.

Advertisement

ವರ್ಷಂಪ್ರತಿ ನಡೆಯುವಂತೆ ಏಪ್ರಿಲ್‌ 1ರಂದು ಗೊನೆ ಮುಹೂರ್ತ. ಏಪ್ರಿಲ್‌ 10ರಂದು 9.53ರ ವೃಷಭ ಲಗ್ನದಲ್ಲಿ ಧ್ವಜಾರೋಹಣ. ರಾತ್ರಿ ಅಂಕುರಾರ್ಪಣೆ, ಬಲಿ ಹೊರಟು ಉತ್ಸವ, ಬಳಿಕ ಪೇಟೆ ಸವಾರಿ. ಬೊಳುವಾರು ಶ್ರೀ ರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ಸವಾರಿ.

ಏ. 11ರಂದು ರಾತ್ರಿ ಉತ್ಸವ, ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಸವಾರಿ. ಏ. 12ರಂದು ರಾತ್ರಿ ಉತ್ಸವ, ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು ಏಳ್ನಾಡುಗುತ್ತು, ಬೈಪಾಸ್‌ ಹೆದ್ದಾರಿ ರಾಧಾಕೃಷ್ಣ ಮಂದಿರ ಸವಾರಿ, ಏ. 13ರಂದು ರಾತ್ರಿ ಉತ್ಸವ, ಪೇಟೆ ಸವಾರಿ, ಕೋರ್ಟ್‌ ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರುಬೈಲ್‌ ಸವಾರಿ, ಏ. 14ರಂದು ಮೇಷ ಸಂಕ್ರಮಣ, ರಾತ್ರಿ ಉತ್ಸವ, ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್‌ ಸವಾರಿ ನಡೆಯಲಿದೆ.

ಏ. 15ರಂದು ಮಧ್ಯಾಹ್ನ ಸೌರಮಾನ ಯುಗಾದಿ (ವಿಷು) ಆಚರಣೆ ನಡೆಯಲಿದೆ. ಬೆಳಿಗ್ಗೆ ಉತ್ಸವ, ವಸಂತ ಕಟ್ಟೆಪೂಜೆ, ರಾತ್ರಿ ಉತ್ಸವ, ಬಂಡಿ ಉತ್ಸವ (ಚಂದ್ರಮಂಡಲ), ಬಳಿಕ ಬನ್ನೂರು, ಅಶೋಕನಗರ, ರೈಲ್ವೇ ಮಾರ್ಗ, ಕೊಂಬೆಟ್ಟು, ಸಕ್ಕರೆಕಟ್ಟೆ ಸವಾರಿ ನಡೆಯಲಿದೆ.

ಏ. 16ರಂದು ರಾತ್ರಿ ಉತ್ಸವ, ಬಲ್ನಾಡು ಶ್ರೀ ದಂಡನಾಯಕ- ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು ಭೇಟಿ, ಪಾಲಕಿ ಉತ್ಸವ, ಸಣ್ಣರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ ಜರಗಲಿದೆ.

Advertisement

ಏ. 17ರಂದು ಬೆಳಿಗ್ಗೆ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ರಾತ್ರಿ 7.30ರ ನಂತರ ಉತ್ಸವ, ಸಿಡಿಮದ್ದು (ಪುತ್ತೂರು ಬೆಡಿ) ಪ್ರದರ್ಶನ, ಬ್ರಹ್ಮರಥೋತ್ಸವ, ಬಂಗಾರ್‌ ಕಾಯರ್‌ಕಟ್ಟೆ ಸವಾರಿ, ಶ್ರೀ ದಂಡನಾಯಕ- ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನ.

ಏ. 18ರಂದು ಬೆಳಿಗ್ಗೆ ಬಾಗಿಲು ತೆಗೆಯುವ ಮುಹೂರ್ತ, 8.30ರಿಂದ ತುಲಾಭಾರ ಸೇವೆ, ಸಂಜೆ 3.30ರಿಂದ ವೀರಮಂಗಲ ಅವಭೃತ ಸ್ನಾನಕ್ಕೆ ಸವಾರಿ ನಡೆಯಲಿದೆ. ಏ. 19ರಂದು ಬೆಳಿಗ್ಗೆ ಧ್ವಜಾವರೋಹಣ, ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ಪ್ರಾರಂಭ, ಹುಲಿಭೂತ, ರಕ್ತೇಶ್ವರ ನೇಮ, ಏ. 20ರಂದು ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿ ದೈವಗಳ ನೇಮ ನಡೆಯಲಿದೆ.

ಚುನಾವಣೆಯ ಇತಿಹಾಸ 
ಕಳೆದ ಕೆಲ ವರ್ಷಗಳಿಂದ ಪುತ್ತೂರು ಜಾತ್ರೆಯ ಸಂದರ್ಭವೇ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುತ್ತಿದೆ. 2013ರ ವಿಧಾನಸಭೆ ಚುನಾವಣೆ ಮೇ 5ರಂದು ನಡೆದಿದ್ದು, ಪುತ್ತೂರು ಜಾತ್ರೆ ಸಂದರ್ಭ ನೀತಿ ಸಂಹಿತೆ ಜಾರಿಯಲ್ಲಿತ್ತು. 2014ರ ಲೋಕಸಭೆ ಚುನಾವಣೆ ಏ. 17ರಂದು ನಡೆದಿದ್ದು, ಆ ದಿನ ಪುತ್ತೂರು ದೇವರ ಬ್ರಹ್ಮರಥೋತ್ಸವ. ಈ ಬಾರಿ ಮತ್ತೆ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಜಾತ್ರಾ ಸಿದ್ಧತೆಗಳು ಚುನಾವಣಾ ನೀತಿ ಸಂಹಿತೆ ನಡುವೆಯೇ ನಡೆಯುತ್ತಿದೆ.

ಜಾತ್ರಾ ಸಂಭ್ರಮ
ಪುತ್ತೂರು ಜಾತ್ರೆಗೆ ಹೊರ ಊರುಗಳಿಂದಲೂ ಭಕ್ತರು ಆಗಮಿಸುತ್ತಾರೆ. ಪುತ್ತೂರು ಒಂದು ರೀತಿಯ ಹೊಸ ಕಳೆಯಿಂದ ಶೋಭಿಸುತ್ತಿರುತ್ತದೆ. 10 ದಿನಗಳ ಜಾತ್ರೆಯಲ್ಲಿ ಪುತ್ತೂರಿನ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಮುಂದಿನ 20 ದಿನಗಳು ಜಾತ್ರೆಯ ವಾತಾವರಣ. ಇದರ ಜತೆಗೆ ವ್ಯವಹಾರಗಳು ತಳುಕು ಹಾಕಿಕೊಳ್ಳುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next