Advertisement

ಮಾತೇ ಮುತ್ತು;  ಮಾತೇ ಮೃತ್ಯು

12:35 AM May 08, 2021 | Team Udayavani |

ಈ ಪ್ರಪಂಚದಲ್ಲಿ ಮಾನವ ಇತರೆಲ್ಲ ಜೀವಿಗಳಿಗಿಂತ ವಿಭಿನ್ನನಾಗಿ, ಶ್ರೇಷ್ಠನಾಗಿ ಗುರುತಿಸಿಕೊಳ್ಳಲು ಪ್ರಮುಖ ಕಾರಣ ಎಂದರೆ ಆತನಿಗೆ ಪ್ರಕೃತಿದತ್ತ ವಾಗಿ ಬಂದಿರುವ ಬುದ್ಧಿಶಕ್ತಿಯೇ ಕಾರಣ. ಹಾಗೆಂದ ಮಾತ್ರಕ್ಕೆ ಉಳಿದ ಪ್ರಾಣಿ

Advertisement

ಗಳಿಗೆ ಈ ಶಕ್ತಿ ಇಲ್ಲ ಎಂದಲ್ಲ.   ಬುದ್ಧಿಮತ್ತೆ ಯಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಮಾನವ ನಿಗೆ ಸಾಧ್ಯವಿದೆ. ಇನ್ನು ಮಾತು ಮಾನವನಿಗೆ ದೇವರು ನೀಡಿರುವ ಇನ್ನೊಂದು ಮಹತ್ವದ ಕೊಡುಗೆ. ಆದರೆ ಮಾತು ಎಷ್ಟು ಅಮೂಲ್ಯವೋ ಅಷ್ಟೇ ಅಪಾಯಕಾರಿಯೂ ಹೌದು. ಈ ಅದ್ಭುತ ಶಕ್ತಿಯ ಕಾರಣದಿಂದಾಗಿಯೇ ಮನುಷ್ಯನು ಸೃಷ್ಟಿಯ ಉಳಿದ ಪ್ರಾಣಿಗಳಿ ಗಿಂತ ಭಿನ್ನನಾಗಿರುವುದು. ಮಾತಿನಿಂದಲೇ ಓರ್ವನ ವ್ಯಕ್ತಿತ್ವವನ್ನು ನಿರ್ಧರಿಸಬಹುದು. ಮಾನವ ಮೀನಿನಂತೆ ಈಜುವುದನ್ನು, ಹಕ್ಕಿಯಂತೆ ಹಾರುವುದನ್ನು, ಗ್ರಹಗಳ ಲೋಕದಲ್ಲಿ ತೇಲುವುದನ್ನು ಕಲಿತ. ಆದರೆ ಯಾರೊಡನೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯುವಲ್ಲಿ ಸೋತ ಎಂದು ಎಷ್ಟೋ ಬಾರಿ ನಮಗೆ ಅನಿಸುವುದಿದೆ. ಮಾತುಗಾರಿಕೆ ಎಲ್ಲರಿಗೂ ಸಿದ್ಧಿಸಲಾರದು. ಅದೂ ಒಂದು ಕಲೆ.

“ನಾಲಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು’ ಎನ್ನುವ ಹಾಗೆ ನಾವಾಡುವ ಒಂದು ಮಾತು ಒಳ್ಳೆಯ ಸಂಬಂಧವನ್ನು ಬೆಸೆಯಲೂಬಹುದು. ಒಂದು ಮಧುರವಾದ ಸಂಬಂಧವನ್ನು ಮುರಿಯಲೂಬಹುದು. ನಾವಾಡುವ ಒಂದು ಪ್ರೇರಣೆಯ ಮಾತು ಎಲ್ಲವನ್ನೂ ಕಳೆದುಕೊಂಡು ಹತಾಶನಾದ ಒಬ್ಬ ವ್ಯಕ್ತಿಯಲ್ಲಿ ಆಶಾಭಾವನೆಯನ್ನು ಮೂಡಿಸಬಹುದು, ಅದೇ ಒಂದು ಕುಹಕದ ಮಾತು ಗೆಲುವಿನ ತುತ್ತ ತುದಿಯಲ್ಲಿ ಇದ್ದವನನ್ನೂ ಪಾತಾಳಕ್ಕೆ ತಳ್ಳಬಹುದು.

ಮಂಥರೆಯ ಚಾಡಿಮಾತು ರಾಮಾಯಣವನ್ನೇ ಸೃಷ್ಟಿಸಿತು, ಕೃಷ್ಣನ ನೀತಿಮಾತು ಪಾಂಡವರನ್ನು ಗೆಲುವಿನ ದಡ ಸೇರಿಸಿತು. ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಹಲವು ಸಾಮ್ರಾಜ್ಯಗಳ ಅಳಿವು-ಉಳಿವಿಗೆ ಮಾತೇ ಕಾರಣವಾಗಿದ್ದನ್ನು ತಿಳಿಯಬಹುದು. ಧನನಂದನ ಒಂದು ಮಾತು ಚಾಣಕ್ಯನಿಂದ ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ನಾಂದಿಯಾಯಿತು. ಶಕುನಿಯ ಕುಹಕದ ಮಾತು ದುರ್ಯೋಧನನ ವಿನಾಶಕ್ಕೆ ಕಾರಣವಾದರೆ ಅದೇ ಗೌತಮನ ಪ್ರೀತಿಯ ಮಾತು ಅಂಗುಲಿಮಾಲನ ಮನಃಪರಿವರ್ತನೆಗೆ ಕಾರಣವಾಯಿತು. ನಾವಾಡುವ ಒಂದು ಮಾತು ಐಸ್‌ ಕ್ರೀಂ ತಿಂದಷ್ಟೇ ಮನಸ್ಸಿಗೆ ತಂಪಾಗಲೂಬಹುದು ಇಲ್ಲವೆ ಸೂಜಿಯ ಮೊನೆ ಚುಚ್ಚಿದ ಅನುಭವವನ್ನು ನೀಡಬಹುದು.

ನಾವಾಡುವ ಮಾತು ಹಿತವಾಗಿ ರಬೇಕು, ಮಿತವಾಗಿರಬೇಕು ಹದವಾದ ತೂಕದಿಂದ ಕೂಡಿರಬೇಕು. ಮಾತು ಹಗುರವಾಗಿರಲೂ ಬಾರದು, ಭಾರವಾಗಿರಲೂ ಬಾರದು. ಯಾರೊಂದಿಗೆ, ಯಾವಾಗ, ಎಲ್ಲಿ, ಎಷ್ಟು ಮಾತನಾಡಬೇಕು ಎಂಬುದನ್ನು ತಿಳಿದಿರಬೇಕು. ಮಾತು ಅತಿಯಾದರೆ ವಾಚಾಳಿ, ಬಾಯಿ ಚಪಲ ಎನ್ನುತ್ತಾರೆ. ಕಡಿಮೆಯಾ ದರೆ ಮೂಕ ಎನ್ನುತ್ತಾರೆ. ಕೆಲವರು ಕಠಿನ ಹೃದಯಿಗಳಾದರೂ ತಮ್ಮ ನಾಜೂಕಿನ ಮಾತಿನ ಮೂಲಕ ಒಳ್ಳೆಯವರೆಂದೆನಿಸಿ ಕೊಳ್ಳುತ್ತಾರೆ. ಇನ್ನು ಕೆಲವರು ಮೃದು ಮನಸ್ಸಿನವರಾದರೂ ಮಾತನಾಡಲು ಬಾರದೆ ಕೆಟ್ಟವರಾಗಿಬಿಡುತ್ತಾರೆ.

Advertisement

ಮಾತನಾಡುವುದು ಒಂದು ಕಲೆ, ಅದು ಎಲ್ಲರಿಗೂ ಸುಲಭವಾಗಿ ಸಿದ್ದಿಸದು. “ಎಲುಬಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ’ ಎಂದು ದಾಸ ಶ್ರೇಷ್ಠರು ಹೇಳಿದ ಹಾಗೆ ಕೆಲವು ಸಂದರ್ಭಗಳಲ್ಲಿ ಮೂಕನೆನಿಸಿದರೂ ಪರವಾಗಿಲ್ಲ. ಪರರ ಮನಸ್ಸಿಗೆ ನೋವುಂಟು ಮಾಡುವಂತೆ ಮಾತನಾಡಬಾರದು. ಬಾಯಿಯಿಂದ ಹೊರಬಿದ್ದ ಮಾತು ಮತ್ತು ಬಿಲ್ಲಿನಿಂದ ಹೊರಟ ಬಾಣ ಹಿಂದಿರುಗಿಬಾರದು. ಮಾತನಾಡುವ ಮೊದಲು ಎರಡೆರಡು ಬಾರಿ ಯೋಚಿಸಿ ಮಾತನಾಡಬೇಕು. ಕೆಲವರು ಮಾತನ್ನೇ ಬಂಡವಾಳವಾಗಿ ಮಾಡಿಕೊಂಡಿರುತ್ತಾರೆ “ಮಾತೆ ಸಕಲಸಂಪದವು’ ಎಂಬಂತೆ ಮೋಹಕ ಮಾತಿನಿಂದಲೇ ಎಲ್ಲವನ್ನು ಸಂಪಾದಿಸಿ ಕೊಳ್ಳುತ್ತಾರೆ. ಅದೇ ಮಾತಿನಿಂದಲೆ ಸಕಲವನ್ನು ಕಳೆದುಕೊಂಡದ್ದೂ ಇದೆ. ಕೇವಲ ಒಂದು ಮಾತು ಜೀವಕ್ಕೆ ಕುತ್ತು ತಂದ ಹಲವು ಘಟನೆಗಳನ್ನು ನೋಡಬಹುದು. ಅದಕ್ಕೆ ಹೇಳುವುದು “ಮಾತೇ ಮುತ್ತು, ಮಾತೇ ಮೃತ್ಯು’ ಎಂದು. ಮಾತು ಹಿತಮಿತವಾಗಿದ್ದರೆ ಆರೋಗ್ಯಕ್ಕೂ ಒಳ್ಳೆಯದು, ಸಂಬಂಧಕ್ಕೂ ಒಳ್ಳೆಯದು. ಮಾತಿನ ಮೂಲಕ ಒಳ್ಳೆಯ ಸಂಬಂಧಗಳನ್ನು ಬೆಸೆಯೋಣ.

 

- ಭಾಸ್ಕರ ಪೂಜಾರಿ, ನಡೂರು

Advertisement

Udayavani is now on Telegram. Click here to join our channel and stay updated with the latest news.

Next