Advertisement

ಯುಪಿಐ ಆಧಾರಿತ ವಹಿವಾಟುಗಳಿಗೆ ಶುಲ್ಕ ವಿಧಿಸುವಂತಿಲ್ಲ: ಸಿಬಿಡಿಟಿ

08:18 PM Sep 06, 2020 | Karthik A |

ಹೊಸದಿಲ್ಲಿ: ನಿಧಾನವಾಗಿ ಹಣದಿಂದ ದೂರ ಸರಿಯುತ್ತಿರುವ ಆರ್ಥಿಕತೆಯಲ್ಲಿ ಡಿಜಿಟಲ್‌ ಪಾವತಿ ಪ್ರಕ್ರಿಯೆ ಬಲವಾಗುತ್ತಿದ್ದು, ಈ ವಿಧಾನವನ್ನು ಮತ್ತಷ್ಟು ಉತ್ತೇಜಿಸಲು ಕೇಂದ್ರ ಹೊಸ ನಿಯಮವನ್ನು ಜಾರಿ ಮಾಡಿದೆ.

Advertisement

ಹೌದು ಇ-ಪೇಮೆಂಟ್‌ ಕ್ಷೇತ್ರವನ್ನು ಸದೃಢಗೊಳಿಸಲು ಮುಂದಾಗಿರುವ ಸರಕಾರ, ಬ್ಯಾಂಕ್‌ಗಳು ಗ್ರಾಹಕರಿಗೆ ಏಕೀಕೃತ ಪಾವತಿ ಇಂಟರ್‌ಫೇಸ್‌ (ಯುಪಿಐ) ಆಧಾರಿತ ವಹಿವಾಟುಗಳಿಗೆ ಶುಲ್ಕ ವಿಧಿಸುವಂತಿಲ್ಲ ಎಂದು ಪುನರುಚ್ಚರಿಸಿದೆ.

ಪಾವತಿ ಅಥವಾ ಹಣ ವರ್ಗಾವಣೆಗೆ ಯುಪಿಐ ಸೌಲಭ್ಯ ಬಳಸುವ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚ ಭರಿಸದೆ ವಹಿವಾಟು ನಡೆಸಬಹುದಾಗಿದ್ದು, ರುಪೇ ಕಾರ್ಡ್‌, ಭೀಮ…ನಂತಹ ಯುಪಿಐ ಮೂಲಕ ವಹಿವಾಟು ನಡೆಸಿದ್ದಕ್ಕೆ ಶುಲ್ಕ ವಿಧಿಸಿದ್ರೆ, ಹಿಂದಿರುಗಿಸುವಂತೆ ಬ್ಯಾಂಕ್‌ಗಳಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.

ಜನವರಿ 1ರ ಬಳಿಕ ಯುಪಿಐ ವ್ಯವಹಾರಕ್ಕೆ ಇದು ಅನ್ವಯವಾಗಲಿದ್ದು, ಎಲೆಕ್ಟ್ರಾನಿಕ್‌ ವಹಿವಾಟು,ಇ-ಪೇಮೆಂಟ್‌ ವಿಧಾನದಲ್ಲಿ ಹೆಚ್ಚುವರಿ ಶುಲ್ಕ ವಿಧಿಸದಂತೆ ಬ್ಯಾಂಕ್‌ಗಳಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ಏನಿದು ಪ್ರಕರಣ ?
ಡಿಜಿಟಲ್‌ ಪಾವತಿ ಉತ್ತೇಜಿಸಲು 2020ರ ಜನವರಿ 1ರಿಂದ ರುಪೇ ಮತ್ತು ಯುಪಿಐ ಪ್ಲಾಪ್‌ಫಾರ್ಮ್ಗಳ ವಹಿವಾಟಿನ ಮೇಲೆ ಯಾವುದೇ ಎಂಡಿಆರ್‌ ಶುಲ್ಕ ಅನ್ವಯಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2019ರ ಡಿಸೆಂಬರ್‌ನಲ್ಲಿ ಘೋಷಿಸಿದ್ದರು.
ಕೆಲವು ಖಾಸಗಿ ಬ್ಯಾಂಕ್‌ಗಳು ಯುಪಿಐ ಪೀರ್‌-ಟು-ಪೀರ್‌ (ಪಿ2ಪಿ) ಪಾವತಿಗಳಿಗೆ (ಅಥವಾ ಹಣ ವರ್ಗಾವಣೆಗೆ) ನಿಗದಿತ ಮಾನದಂಡ ವಿರುದ್ಧವಾಗಿ ಶುಲ್ಕ ವಿಧಿಸುತ್ತಿವೆ ಎಂದು ವರದಿಯಾಗಿದೆ.

Advertisement

ಕಾನೂನಿಗೆ ವಿರುದ್ಧವಾಗಿ ಹೇಗೆ ಶುಲ್ಕ ವಿಧಿಸುತ್ತಿದ್ದೇವು ?
ಐಐಟಿ ಬಾಂಬೆಯ ಆಶಿಶ್‌ ದಾಸ್‌ ಪ್ರಕಟಿಸಿದ ವರದಿ ಅನ್ವಯ, “ಯುಪಿಐ ಪಾವತಿಗಳು’ ಉಚಿತವಾಗಿದ್ದರೂ ಬ್ಯಾಂಕ್‌ಗಳು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಕಾನೂನನ್ನು ವ್ಯಾಖ್ಯಾನಿಸಿ ವರ್ಗಾವಣೆಗೆ ಶುಲ್ಕ ವಿಧಿಸುತ್ತಿವೆ.

ಎಷ್ಟು ಶುಲ್ಕ ವಿಧಿಸುತ್ತಿದ್ದವು?
ಖಾಸಗಿ ಬ್ಯಾಂಕ್‌ಗಳಾದ ಹೆಚ್‌ಡಿಎಫ್ಸಿ, ಆಕ್ಸಿಸ್‌, ಐಸಿಐಸಿಐ ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್‌ ತಮ್ಮ ವೆಬ್‌ಸೈಟ್‌ಗಳಲ್ಲಿ ಗ್ರಾಹಕರು ಕೇವಲ 20 ಉಚಿತ ಯುಪಿಐ ಪೀರ್‌-ಟು-ಪೀರ್‌ ವಹಿವಾಟುಗಳನ್ನು ಮಾತ್ರ ಮಾಡಬಹುದಾಗಿದೆ. ನಿಗದಿತ ಮಿತಿ ಮೀರಿದ ಪ್ರತಿ ವಹಿವಾಟಿಗೆ 2.5 ರಿಂದ 5 ರೂ. (ಜಿಎಸ್‌ಟಿ ಹೊರತುಪಡಿಸಿ). ಉದಾ: ಕೋಟಾಕ್‌ ಮಹೀಂದ್ರಾ ಬ್ಯಾಂಕ್‌ ಯುಪಿಐ ವಹಿವಾಟಿಗೆ ರೂ .2.5ರೂ. ಮತ್ತು 1,000 ರೂ.ಗಳ ವಹಿವಾಟಿನ ಮೊತ್ತದ ಮೇಲೆ 5 ರೂ. ವಿಧಿಸಲಿದೆ. ವಹಿವಾಟಿನ ಸಂಖ್ಯೆಯ ಹೆಚ್ಚಳದೊಂದಿಗೆ ಅದು ವಿಧಿಸುವ ದರವು ಹೆಚ್ಚಾಗಬಹುದು.

ಲಾಕ್‌ಡೌನ್‌ ವೇಳೆ ಜಾರಿಯಾದ ನಿಯಮ ?
ಲಾಕ್‌ಡೌನ್‌ ಅವಧಿಯಲ್ಲಿ ಖಾಸಗಿ ಬ್ಯಾಂಕ್‌ಗಳು ಈ ಶುಲ್ಕ ವಿಧಿಸಲು ಪ್ರಾರಂಭಿಸಿದವು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪಾವತಿ ವಹಿವಾಟುಗಳ ಸಂಖ್ಯೆ ಅನೇಕ ಪಟ್ಟು ಹೆಚ್ಚಾಯಿತು. ಐಸಿಐಸಿಐ ಬ್ಯಾಂಕ್‌ ಮತ್ತು ಹೆಚ್‌ಡಿಎಫ್ಸಿ ಬ್ಯಾಂಕ್‌ ಈ ಶುಲ್ಕ 2020ರ ಮೇ 3ರಿಂದ ವಿಧಿಸಲು ಪ್ರಾರಂಭಿಸಿದ್ರೆ, ಆಕ್ಸಿಸ್‌ ಬ್ಯಾಂಕ್‌ ಮತ್ತು ಕೋಟಾಕ್‌ ಮಹೀಂದ್ರಾ ಬ್ಯಾಂಕ್‌ ಕ್ರಮವಾಗಿ 2020ರ 1 ಜೂನ್‌ ಮತ್ತು 2020ರ 1 ಏಪ್ರಿಲ್‌ನಿಂದ ಶುಲ್ಕ ಹೇರತೊಡಗಿದವು.

ಬ್ಯಾಂಕ್‌ಗಳು ಈ ಆರೋಪಗಳನ್ನು ಹೇಗೆ ಸಮರ್ಥಿಸುತ್ತಿವೆ?
ಖಾಸಗಿ ಬ್ಯಾಂಕ್‌ಗಳು ಕ್ಷುಲ್ಲಕ ಯುಪಿಐ ವಹಿವಾಟು ತಡೆಗಟ್ಟಲು ಈ ಶುಲ್ಕಗಳನ್ನು ಪರಿಚಯಿಸಿವೆ ಎಂದು ಹೇಳಲಾಗುತ್ತಿದ್ದು, ಕೆಲವು ಅಪ್ಲಿಕೇನ್‌ಗಳು ಪ್ರತಿಫ‌ಲಗಳ ಆಮಿಷ ಮತ್ತು ಪ್ರಯೋಜನಗಳ ಮೂಲಕ ಜನರಲ್ಲಿ ಡಿಜಿಟಲ್‌ ಹಣ ವರ್ಗಾವಣೆ ಉತ್ತೇಜಿಸುತ್ತಿವೆ. ಇದು ಗ್ರಾಹಕರ ನಡುವೆ ಪಾವತಿ ಹಾಗೂ ಮರುಪಾವತಿಗೆ ಕಾರಣವಾಗುತ್ತಿದ್ದು, ಪಾವತಿ ವ್ಯವಸ್ಥೆಯ ಮೇಲೆ ಹೆಚ್ಚಿನ ಹೊರೆ ಸೃಷ್ಟಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next