ಹೊಸದಿಲ್ಲಿ : ಸರಕಾರದ ವಿವಿಧ ಸೇವೆಗಳು ಮತ್ತು ಜನಕಲ್ಯಾಣ ಯೋಜನೆಗಳ ಲಾಭವನ್ನು ಪಡೆಯುವುದಕ್ಕೆ ಆಧಾರ್ ಜೋಡಿಸುವ ಗಡುವನ್ನು ಸುಪ್ರೀಂ ಕೋರ್ಟ್ ಮಾರ್ಚ್ 31ರ ವರೆಗೆ ವಿಸ್ತರಿಸಿ ಇಂದು ಶುಕ್ರವಾರ ಮಧ್ಯಾಂತರ ಆದೇಶ ಹೊರಡಿಸಿದೆ.
ಮೊಬೈಲ್ ಸೇವೆಗಳಿಗೆ ಆಧಾರ್ ಜೋಡಿಸುವ ಈಗಿನ ಫೆ.6ರ ಗಡುವನ್ನು ಕೂಡ ಸುಪ್ರೀಂ ಕೋರ್ಟ್ ಮಾಚ್ 31ರ ವರೆಗೆ ವಿಸ್ತರಿಸಿದೆ. ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠ ಇಂದು ಈ ಮಧ್ಯಾಂತರ ಆದೇಶ ಹೊರಡಿಸಿತು.
ಮುಂದಿನ ಆದೇಶ ಹೊರಡಿಸುವ ತನಕ, ಆಧಾರ್ ಕಾರ್ಡ್ ಹೊಂದಿಲ್ಲದವರು ಬ್ಯಾಂಕ್ ಖಾತೆಯನ್ನು ತೆರೆಯಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯ ಸರಕಾರದ ಯೋಜನೆಗಳಿಗೆ ಆಧಾರ್ ಜೋಡಿಸುವ ಅಂತಿಮ ಗಡುವನ್ನು ಕೂಡ ಮಾರ್ಚ್ 31ರ ವರೆಗೆ ನ್ಯಾಯಾಲಯ ವಿಸ್ತರಿಸಿದೆ.
ಆಧಾರ್ ಸಿಂಧುತ್ವ ಕುರಿತಾದ ಮುಂದಿನ ವಿಚಾರಣೆಯನ್ನು ಜನವರಿಯಲ್ಲಿ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಸರಕಾರ ಹೊಸ ಮತ್ತು ಹಳೆಯ ಬ್ಯಾಂಕ್ ಖಾತೆಗಳಿಗೆ ಹಾಗೂ 50,000 ಮತ್ತು ಅದಕ್ಕೆ ಮೀರಿದ ಹಣಕಾಸು ವ್ಯವಹಾರಗಳಿಗೆ ಆಧಾರ್ ಜೋಡಿಸುವುದನ್ನು ಕಡ್ಡಾಯ ಮಾಡಿದೆ. ಈ ವರೆಗಿನ ಗಡುವು 2017ರ ಡಿ.31 ಆಗಿತ್ತು.