ಇಟ್ನಾಗರ್: ಅರುಣಾಚಲ ಪ್ರದೇಶದ ಕಮೆಂಗ್ ವಿಭಾಗದಲ್ಲಿ ಸೋಮವಾರ ಗಸ್ತು ತಿರುಗುವಾಗ ಹಿಮಪಾತಕ್ಕೆ ಸಿಲುಕಿದ್ದ ಏಳು ಯೋಧರು ಸಾವನ್ನಪ್ಪಿರುವುದಾಗಿ ಭಾರತೀಯ ಸೇನೆ ಮಂಗಳವಾರ ತಿಳಿಸಿದೆ.
ಹಿಮದೊಳಗಿದ್ದ ದೇಹಗಳನ್ನು ಹೊರಗೆ ತೆಗೆಯಲಾಗಿದ್ದು, ಹತ್ತಿರದ ಸೇನಾ ಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ.
ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿರುವ ಮಮ್ಮಿ ಹಟ್ ಪ್ರದೇಶದಲ್ಲಿ ಸೇನೆಯ 19 ಜೆಎಕೆ ರೈಫೆಲ್ಸ್‌ನ ಯೋಧರು ಗಸ್ತು ತಿರುಗುವ ವೇಳೆ ಹಿಮಪಾತ ಉಂಟಾಗಿತ್ತು.
ಯೋಧರ ಸಾವಿನ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂತಾಪ ಸೂಚಿಸಿದ್ದು, “ವೀರ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆ ಎಂದೆಂದಿಗೂ ನೆನಪಿನಲ್ಲಿರುತ್ತದೆ’ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು, “ಯೋಧರ ಸಾವು ನೋವು ತಂದಿದೆ. ಅವರು ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಮರೆಯಲಾಗದು’ ಎಂದಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿ ಹಲವರು ಯೋಧರ ಸಾವಿಗೆ ಸಂತಾಪ ಸೂಚಿಸಿದ್ದಾರೆ.