ಭೋಪಾಲ್: ಸುಮಾರು 500 ಮಂದಿ ಸರ್ಕಾರಿ ಕಿರಿಯ ವೈದ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ ಪರಿಣಾಮ ಮಧ್ಯಪ್ರದೇಶದ ರೇವಾ, ಭೋಪಾಲ್, ಇಂದೋರ್, ಗ್ವಾಲಿಯರ್ ಹಾಗೂ ಜಬಲ್ ಪುರ್ ನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಂಡಿದೆ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿದೆ.
ಸ್ಟೈಫಂಡ್ ಹಾಗೂ ಉಪಕರಣಗಳ ಬೇಡಿಕೆಗೆ ಆಗ್ರಹಿಸಿ ಮಂಗಳವಾರ ಮಧ್ಯಪ್ರದೇಶದ ಹಲವು ಸರ್ಕಾರಿ ಆಸ್ಪತ್ರೆಗಳ ಕಿರಿಯ ವೈದ್ಯರು ರಾಜೀನಾಮೆ ನೀಡಿದ್ದಾರೆ.
ಎಎನ್ ಐ ವರದಿ ಪ್ರಕಾರ, ರೇವಾ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆ ಹಾಗೂ ಭೋಪಾಲ್ ಗಾಂಧಿ ಸ್ಮಾರಕ ಆಸ್ಪತ್ರೆ ಸೇರಿದಂತೆ ಐದು ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರುಗಳಾಗಿದ್ದಾರೆ ಎಂದು ವಿವರಿಸಿದೆ.
ಸರ್ಕಾರಿ ಕಾಲೇಜಿನ ವೈದ್ಯರುಗಳು ಯಾವುದೇ ತರಗತಿಗಳಿಗೆ ಹಾಜರಾಗಿಲ್ಲ ಎಂದು ಜ್ಯೂನಿಯರ್ ಡಾಕ್ಟರ್ಸ್ ಅಸೋಸಿಯೇಶನ್(ಜೆಯುಡಿಎ)ನ ರಾಜ್ಯಾಧ್ಯಕ್ಷ ಸಚೇತ್ ಸಕ್ಸೇನಾ ತಿಳಿಸಿದ್ದಾರೆ.
ಕಿರಿಯ ವೈದ್ಯರು ತಮ್ಮ ಹಾಸ್ಟೆಲ್ ರೂಮ್ ಗಳನ್ನು ಕೂಡಾ ಖಾಲಿ ಮಾಡಿದ್ದು, ಸುಮಾರು 500 ಮಂದಿ ಕಿರಿಯ ವೈದ್ಯರು ಸೋಮವಾರದಿಂದ ಬಂದ್ ನಡೆಸುವುದಾಗಿ ತಿಳಿಸಿರುವುದಾಗಿ ಸಕ್ಸೇನಾ ವಿವರಿಸಿದ್ದಾರೆ.ಕಿರಿಯ ವೈದ್ಯರ ಮುಷ್ಕರದಿಂದಾಗಿ ಪ್ರಮುಖ ನಗರಗಳಲ್ಲಿ ವೈದ್ಯಕೀಯ ಸೇವೆ ಮೇಲೆ ಪರಿಣಾಮ ಬೀರಿದೆ ಎಂದು ವರದಿ ತಿಳಿಸಿದೆ.