ಹೈದರಾಬಾದ್:ಪಶು ವೈದ್ಯೆ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಶುಕ್ರವಾರ ನಸುಕಿನ ವೇಳೆ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ. ಏತನ್ಮಧ್ಯೆ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲಿಯೇ ನಾಲ್ವರೂ ಆರೋಪಿಗಳು ಸಾವನ್ನಪ್ಪಿರುವುದು ಕಾಕತಾಳೀಯ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮುಂಜಾನೆ ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ಯಾಕೆ?
ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ನಂತರ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಂದ ಘಟನೆ ಬಗ್ಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಆರೋಪಿಗಳನ್ನು ಬಹಿರಂಗವಾಗಿ ನೇಣಿಗೇರಿಸಬೇಕೆಂದು ಹೈದರಾಬಾದ್, ತೆಲಂಗಾಣದಲ್ಲಿ ಸಾರ್ವಜನಿಕರು ಆಗ್ರಹಿಸಿದ್ದರು. ಸಾರ್ವಜನಿಕರ ಆಕ್ರೋಶ, ಪ್ರತಿಭಟನೆಯಿಂದ ಆರೋಪಿಗಳನ್ನು ಕೋರ್ಟ್ ಗೆ ಕರೆದೊಯ್ಯಲು ಪೊಲೀಸರಿಗೆ ಸಾಧ್ಯವಾಗಿಲ್ಲವಾಗಿತ್ತು. ಕೊನೆಗೆ ನ್ಯಾಯಾಧೀಶರನ್ನು ಪೊಲೀಸ್ ಠಾಣೆಗೆ ಹಿಂಬಾಗಿಲಿನಿಂದ ಕರೆತರಲಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹಗಲು ಹೊತ್ತು ಸ್ಥಳ ಮಹಜರಿಗೆ ಕರೆದೊಯ್ದರೆ ಹೆಚ್ಚಿನ ತೊಂದರೆ ಎಂದು ಪರಿಗಣಿಸಿ ಶುಕ್ರವಾರ ಮುಂಜಾನೆ 3.30ಕ್ಕೆ ಚಟಾನ್ ಪಲ್ಲಿ ಸೇತುವೆ ಬಳಿ ಕರೆದೊಯ್ದಿದ್ದರು.
ಭಯಬಿದ್ದ ಆರೋಪಿಗಳು ಡಿಸಿಪಿ ರಿವಾಲ್ವರ್ ಕಸಿದು ದಾಳಿಗೆ ಯತ್ನಿಸಿದ್ದರು:
ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈದ ನಂತರ ಚಾಪೆಯಲ್ಲಿ ಸುತ್ತಿ ಚಟಾನ್ ಪಲ್ಲಿ ಸೇತುವೆ ಬಳಿ ತಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಕನ್ನಡಿಗ ಪೊಲೀಸ್ ಕಮಿಷನರ್ ವಿಶ್ವನಾಥ ಸಜ್ಜನರ್ ನೇತೃತ್ವದ ಪೊಲೀಸ್ ತಂಡ ಆ ಸ್ಥಳದ ಮಹಜರು ನಡೆಸಲು ಆರೋಪಿಗಳನ್ನು ಕರೆತಂದಿದ್ದರು.
ಈ ಸಂದರ್ಭದಲ್ಲಿ ಆರೋಪಿಗಳು ಡಿಸಿಪಿಯ ರಿವಾಲ್ವರ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದರು. ಅಲ್ಲದೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಮುಂದಾದಾಗ ಎನ್ ಕೌಂಟರ್ ನಡೆದಿದ್ದು, ಚಟಾನ್ ಪಲ್ಲಿ ಸೇತುವೆ ಸ್ಥಳದಲ್ಲಿಯೇ ಮಹಮ್ಮದ್ ಆರೀಫ್, ಜೊಲ್ಲು ಶಿವ, ಜೊಲ್ಲು ನವೀನ್, ಚನ್ನಕೇಶವಲು ಬಲಿಯಾಗಿದ್ದಾರೆ.