ಅಳಿಕೆ : ಕೆಲವೊಮ್ಮೆ ಕಂದಾಯ ಇಲಾಖೆಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳದೇ ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ. ಲೋಪಗಳನ್ನು ಸರಿಪಡಿಸಿ, ಜಾಗರೂಕರಾದಾಗ ಯಾವುದೇ ಗೊಂದಲ ಉಂಟಾಗುವುದಿಲ್ಲ ಎಂದು ಅಳಿಕೆ ಗ್ರಾ.ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅವರು ಹೇಳಿದರು.
ಅವರು ಗುರುವಾರ ಕಂದಾಯ ಇಲಾಖೆಯ ವತಿಯಿಂದ ಅಳಿಕೆ ಗ್ರಾ.ಪಂ. ಸಭಾಂಗಣದಲ್ಲಿ ಅಳಿಕೆ, ಕೇಪು, ಪುಣಚ, ಮಾಣಿಲ, ಪೆರುವಾಯಿ ಗ್ರಾಮಗಳ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು ಮಾತನಾಡಿ, ಕಂದಾಯ ಇಲಾಖೆಯ ವ್ಯವಸ್ಥೆಯನ್ನು ಬಳಸಿಕೊಳ್ಳಲು ಪ್ರತಿಯೊಬ್ಬರೂ ಮುಂದೆ ಬರಬೇಕು. ಸರಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದರು.
ಮಾಣಿಲ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಮಾತನಾಡಿ, ಅಧಿಕಾರಿಗಳು, ಜನಪ್ರತಿನಿಧಿ ಗಳು ಒಟ್ಟಾಗಿ ಪ್ರಾಮಾಣಿಕ ವಾಗಿ ಕಾರ್ಯನಿರ್ವಹಿಸಬೇಕು. ತಾಳ್ಮೆ ಮತ್ತು ಹೊಂದಾಣಿಕೆ ಯಿಂದ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಪೆರುವಾಯಿ ಗ್ರಾ. ಪಂ. ಅಧ್ಯಕ್ಷ ರಾಲ್ಫ್ ಡಿ’ಸೋಜಾ ಮಾತನಾಡಿ, ಕಂದಾಯ ಇಲಾಖೆ ಜನರು ಅತೀ ಹೆಚ್ಚು ಬಳಸುವ ವ್ಯವಸ್ಥೆ ಯಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಗೊಂದಲಗಳು ಕಡಿಮೆಯಾಗಿವೆ ಎಂದರು. ಪುಣಚ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಅಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ, ಉಪತಹಶೀಲ್ದಾರ್ ರವಿಶಂಕರ್, ಕಂದಾಯ ನಿರೀಕ್ಷಕ ದಿವಾಕರ, ಅಳಿಕೆ ಗ್ರಾಮ ಸಹಾಯಕ ಜಗನ್ನಾಥ್ ಎರುಂಬು ಉಪಸ್ಥಿತರಿದ್ದರು. ಗ್ರಾಮಕರಣಿಕ ಪ್ರಕಾಶ್ ಸ್ವಾಗತಿಸಿದರು. ಸದಾಶಿವ ಶೆಟ್ಟಿ ಅಳಿಕೆ ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ ನಿರೂಪಿಸಿದರು.