Advertisement

ಅಲಿಗಢದ ಉದ್ವಿಗ್ನ ಇಂಟರ್ನೆಟ್‌ ಸೇವೆ ಸ್ಥಗಿತ

04:55 PM Jun 13, 2019 | Team Udayavani |

ಅಲಿಗಢ: ಉತ್ತರಪ್ರದೇಶದ ಅಲಿಗಢದಲ್ಲಿ 3 ವರ್ಷದ ಬಾಲಕಿಯ ಭೀಕರ ಕೊಲೆ ಪ್ರಕರಣ ಸಂಬಂಧ ಉಂಟಾಗಿರುವ ಉದ್ವಿಗ್ನ ಸ್ಥಿತಿ ಇನ್ನೂ ತಣ್ಣಗಾಗಿಲ್ಲ.

Advertisement

ಮಗುವಿನ ಬೀಭತ್ಸ ಕೊಲೆ ಖಂಡಿಸಿ ಮಹಾಪಂಚಾಯತ್‌ ನಡೆಸಲು ಬಲಪಂಥೀಯ ಸಂಘಟನೆಗಳು ನಡೆಸಿದ ಯತ್ನಕ್ಕೆ ರವಿವಾರ ಪೊಲೀಸರು ಅಡ್ಡಿಪಡಿಸಿದ ಅನಂತರ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಟಪ್ಪಾಲ್‌ ಪ್ರದೇಶದಲ್ಲಿ ಇಂಟರ್ನೆಟ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಹೆಚ್ಚುವರಿ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಟಪ್ಪಾಲ್‌ನಲ್ಲಿ ಕೋಮು ಹಿಂಸಾಚಾರ ನಡೆಯುವ ಸಾಧ್ಯತೆ ಇರುವ ಕಾರಣ, ನಿಗಾ ವಹಿಸಲಾಗಿದೆ. ಅಲ್ಲದೆ ಇಲ್ಲಿ ನಿಷೇಧಾಜ್ಞೆ ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸುತ್ತಿದ್ದು, ಅಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಿದ್ದೇವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪರಿಹಾರಕ್ಕೆ ಕಾಂಗ್ರೆಸ್‌ ಒತ್ತಾಯ: ಇದೇ ವೇಳೆ, ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ರಕ್ಷಣೆ ಒದಗಿಸಬೇಕೆಂದು ಕಾಂಗ್ರೆಸ್‌ನ ದಿಲ್ಲಿ ಘಟಕವು ಕೋರಿದೆ. ಜತೆಗೆ, ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದೆ. ಸಂತ್ರಸ್ತೆಯ ತಂದೆಯು ಆರೋಪಿಯಿಂದ ಪಡೆದಿದ್ದ 10 ಸಾವಿರ ರೂ. ಮರುಪಾವತಿ ಮಾಡಲಿಲ್ಲ ಎಂಬ ಕಾರಣಕ್ಕೆ, ಆರೋಪಿಯು ಬಾಲಕಿಯನ್ನು ಅಪಹರಿಸಿ, ಭೀಕರವಾಗಿ ಹತ್ಯೆಗೈದಿದ್ದ.

ಪ್ರಧಾನಿಗೆ ಪತ್ರ
ಉತ್ತರಪ್ರದೇಶದ ಅಲಿಗಢದಲ್ಲಿ 3 ವರ್ಷದ ಬಾಲಕಿಯ ಭೀಕರ ಹತ್ಯೆಗೆ ಸಂಬಂಧಿಸಿ, ತಪ್ಪಿತಸ್ಥರಿಗೆ ಮರಣ ದಂಡನೆ ವಿಧಿಸುವಂತೆ ಆಗ್ರಹಿಸಿ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಸೋಮವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. 12ರೊಳಗಿನ ಹೆಣ್ಣುಮಕ್ಕಳ ಅತ್ಯಾಚಾರಿ ಗಳಿಗೆ ಗಲ್ಲುಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ, ಸರಕಾರವು ಇಂಥ ಹೀನ ಕೃತ್ಯಗಳನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next