ಆಲೀಗಢ : ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರು ಕ್ಯಾಂಪಸ್ ಗೆ ಭೇಟಿ ನೀಡಿರುವರೆಂಬ ಬಗ್ಗೆ ಟಿವಿ ಚ್ಯಾನಲ್ ಸಿಬಂದಿ ಮತ್ತು ಕೆಲವು ವಿದ್ಯಾರ್ಥಿಗಳ ನಡುವೆ ಮಾತಿನ ಜಗಳ ಉಂಟಾದುದನ್ನು ಅನುಸರಿಸಿ ಇಂದು ಆಲೀಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಯಿತು.
ಎಬಿವಿಪಿ ಸದಸ್ಯರೊಬ್ಬರು ತಮ್ಮ ಮೇಲೆ ಹಲ್ಲೆಯಾಯಿತೆಂದು ದೂರು ನೀಡಿದ ಹಿನ್ನೆಲೆಯಲ್ಲಿ ವಿವಿ ವಿದ್ಯಾರ್ಥಿ ಸಂಘಟನೆ ನಾಯಕನೂ ಸೇರಿದಂತೆ 12 ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಕೇಸನ್ನು ಹಾಕಲಾಯಿತು. ಇದನ್ನು ಅನುಸರಿಸಿ ತರಗತಿ ಬಹಿಷ್ಕರಿಸುವ ಕರೆ ನೀಡಲಾಯಿತು.
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಿವಿ ಆವರಣವನ್ನು ತಲುಪುವ ಐಜಿ ಖಾನ್ ರಸ್ತೆಯನ್ನು ಮುಚ್ಚಿದರು. ಅಧಿಕೃತ ಮೂಲಗಳ ಪ್ರಕಾರ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್‌ನೆಟ್ ಸೇವೆಯನ್ನು ನಿಲ್ಲಿಸಲಾಯಿತು.
ಪ್ರತಿಭಟನೆಯ ನಡುವೆಯೇ ವಿವಿ ಆವರಣದಲ್ಲಿ ಕ್ಷಿಪ್ರ ಕಾರ್ಯಪಡೆ ದಳವನ್ನು ನಿಯೋಜಿಸಲಾಯಿತು. ಎಬಿವಿಪಿ ಸದಸ್ಯರೊಬ್ಬರ ಬೈಕಿಗೆ ಬೆಂಕಿ ಹಚ್ಚಲಾಯಿತೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆದರೆ ಈ ಘಟನೆ ಓವೈಸಿ ಭೇಟಿಗೆ ಸಂಬಂಧಿಸಿ ನಡೆದಿರುವುದೇ ಎಂದು ಗೊತ್ತಾಗಿಲ್ಲ.
ಸಂಸದ ಓವೈಸಿ ವಿವಿ ಕ್ಯಾಂಪಸ್ ಗೆ ಭೇಟಿ ನೀಡುವುದನ್ನು ನಿಷೇಧಿಸಬೇಕು ಎಂದು ಕೆಲವು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಿದ್ದರು. ಆದರೆ ಓವೈಸಿ ಇಂದು ವಿವಿಗೆ ಭೇಟಿ ನೀಡಿಲ್ಲ ಎನ್ನಲಾಗಿದೆ.