Advertisement

ಭೂಮಿ ಮೇಲೆ “ಏಲಿಯನ್‌ ಸಸ್ಯ’!

07:30 AM Apr 12, 2018 | |

ಭೂಮಿ ಮೇಲೆ ಅನ್ಯಗ್ರಹದ ಸಸ್ಯ ಬೆಳೆಯುತ್ತಿದೆಯೇ ಎಂದು ಅಚ್ಚರಿ ಪಡದಿರಿ. ಅನ್ಯಗ್ರಹದಲ್ಲಿ ಜೀವದ ಪಸೆಯೇ ಇಲ್ಲಿಯವರೆಗೂ ನಮಗೆ ಸಿಕ್ಕಿಲ್ಲ. ಹಾಗೆಂದ ಮೇಲೆ ಇನ್ನು ಅನ್ಯಗ್ರಹದಲ್ಲಿ  ಸಸ್ಯ ಇರುವ ಮಾಹಿತಿ ಎಲ್ಲಿಂದ ಸಿಗಬೇಕು? ಅದರ ಮೇಲೆ ಆ ಅನ್ಯಗ್ರಹದ ಸಸ್ಯ ಭೂಮಿಯ ಮೇಲೆ ಬೆಳೆಯುವುದೆಂತು? ಹಾಗಾಗಿ ಈ ಸಸ್ಯದ ಹೆಸರು ಮಾತ್ರ “ಏಲಿಯನ್‌ ಸಸ್ಯ’. ಆದರೆ ಇದು ನಿಜಕ್ಕೂ ಏಲಿಯನ್‌ ಗ್ರಹದಿಂದ ಬಂದದ್ದಲ್ಲ.

Advertisement

ಹೆಸರು ಬಂದಿದ್ದು ಹೇಗೆ?

ಈ ಸಸ್ಯಕ್ಕೆ ಏಲಿಯನ್‌ ವಿಶೇಷಣ ಅಂಟಿದ್ದರ ಹಿಂದೆ ಒಂದು ಕತೆಯಿದೆ. ಮೊದಲ ನೋಟಕ್ಕೆ ಈ ಸಸ್ಯ ಕಾಲ್ಪನಿಕ ಏಲಿಯನ್‌ ಜೀವಿಯನ್ನು ನೆನಪಿಸುತ್ತದೆ. ಅದೇ ಕಾರಣಕ್ಕೆ ಏಲಿಯನ್‌ ಸಸ್ಯ ಎನ್ನುವ ಹೆಸರು ಬಂದಿತು. ಅದರ ವೈಜ್ಞಾನಿಕ ಹೆಸರು “ಕ್ಯಾಲ್ಸಿಯೋಲೇರಿಯಾಯೂನಿಫ್ಲೋರಾ’. ಇದು ನಿತ್ಯಹರಿದ್ವರ್ಣ ಪ್ರದೇಶ ಹಾಗೂ ದಕ್ಷಿಣಅಮೇರಿಕ ಪ್ರದೇಶಗಳಲ್ಲಿ ಬೆಳೆಯುವ ಆರ್ಕಿಡ್‌ಜಾತಿಯ ಸಸ್ಯ.


ಹ್ಯಾಪಿ ಏಲಿಯನ್‌
ದಕ್ಷಿಣಧೃವ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಈ ಏಲಿಯನ್‌ ಸಸ್ಯಗಳು ಪರ್ವತ ಪ್ರದೇಶಗಳಲ್ಲಿ ಯಥೇತ್ಛವಾಗಿ ಬೆಳೆಯುತ್ತವೆ. ಬೇರುಗಳು ಆಳಲ್ಲದ, ಕೇವಲ 4 ರಿಂದ 5 ಇಂಚುಗಳಷ್ಟು ಎತ್ತರಕ್ಕೆ ಮಾತ್ರ ಬೆಳೆಯುವ ಈ ಸಸ್ಯಗಳ ಹೂಗಳು ಎರಡು ಅಂಗುಲದಷ್ಟು ಉದ್ದವಿರುತ್ತವೆ. ಹೂಗಳು ಪ್ರಾರಂಭದಲ್ಲಿ ಕೇಸರಿ ಅಥವಾ ಹಳದಿ ಬಣ್ಣದಿಂದ ಕೂಡಿರುತ್ತನೆ, ಆದರೆ ಬೆಳೆದಂತೆಲ್ಲಾ ಗಾಢಕೆಂಪು ಬಣ್ಣಕ್ಕೆ ತಿರುಗುತ್ತವೆ. ಹೂಗಳು ನೋಡಲು ನಗುವ ಏಲಿಯನ್‌ನಂತೆ ಕಾಣುವುದರಿಂದ ಈ ಹೂಗಳಿಗೆ “ಹ್ಯಾಪಿ ಏಲಿಯನ್‌ಆರ್ಕಿಡ್‌’ ಗಳೆಂದೂ ಕರೆಯುವರು. ತೆಳುವಾದ ನಾಲಗೆ ಆಕಾರದ ಎಲೆಗಳಿಂದ ಕೂಡಿರುವ ಈ ಸಸ್ಯದ ಕಾಂಡಗಳು ಉದ್ದವಾಗಿರುವುದೇ ಹೆಚ್ಚು.

ಚಾರ್ಲ್ಸ್‌ ಡಾರ್ವಿನ್‌ ಕಣ್ಣಿಗೆ ಬಿದ್ದಿತ್ತು!
ಜೀವಕಾಸವಾದದ ಪಿತಾಮಹ ಚಾರ್ಲ್ಸ್‌ ಡಾರ್ವಿನ್‌ 1831ರಿಂದ 1836ರ ಸಮಯದಲ್ಲಿ ದಕ್ಷಿಣಅಮೇರಿಕಾ ಭಾಗಗಳಿಗೆ ಯಾನ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಮೊಟ್ಟಮೊದಲ ಬಾರಿಗೆ ಈ ಪ್ರಭೇದದ ಸಸ್ಯವನ್ನು ಪತ್ತೆಹಚ್ಚಿದರು. ಇದರ ಹೂಗಳಲ್ಲಿ ಕಂಡುಬರುವ ದಳಗಳು ಚಪ್ಪಲಿ ರೆಕ್ಕೆಗಳನ್ನು ಹೋಲುವುದರಿಂದ ಇದನ್ನು “ಡಾರ್ವಿನ್‌ ಸ್ಲಿಪ್ಪರ್‌ ಹೂವಿನ ಸಸ್ಯ’  ಎಂದೂ ಕರೆಯಲಾಗುತ್ತದೆ. ಆದರೆ ಈಗ ಏಲಿಯನ್‌ ಸಸ್ಯ ಎಂದೇ ಹೆಸರುವಾಸಿ. ತುಸುದೂರದಿಂದ ನೋಡಿದರೆ ಬಂಡೆಗಳ ಮೇಲೆ ಸಾಲಾಗಿ ಸಾಗುತ್ತಿರುವ ಕೇಸರಿ ಬಣ್ಣದ ಪೆಂಗ್ವಿನ್‌ಗಳಂತೆ ಗೋಚರಿಸುವ ಈ ಸಸ್ಯಗಳು ಸದಾಕಾಲ ತಂಪು ಹವೆಯನ್ನು ಬಯಸುತ್ತವೆ. ಉಷ್ಣಾಂಶ ಹೆಚ್ಚಿರುವ ಪ್ರದೇಶದಲ್ಲಿ ಇವು ಬೆಳೆಯುವುದಿಲ್ಲ. 

ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next