ಬೀಜಿಂಗ್ : ವಿಶ್ವ ವಿಖ್ಯಾತ ಇ ಕಾಮರ್ಸ್ ಉದ್ಯಮ ಸಂಸ್ಥೆಯಾಗಿರುವ ಆಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಕಂಪೆನಿಯ ಸಹ ಸ್ಥಾಪಕ, ಕಾರ್ಯನಿರ್ವಾಹಕ ಅಧ್ಯಕ್ಷ, ಬಿಲಿಯಾಧಿಪತಿ, 55ರ ಹರೆಯದ, ಜ್ಯಾಕ್ ಮಾ ಅವರು ಸೆ.10ರ ಸೋಮವಾರ ತಾನು ನಿವೃತ್ತನಾಗುವುದಾಗಿ ಪ್ರಕಟಿಸಿ ವಿಶ್ವಾದ್ಯಂತದ ತನ್ನ ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿದ್ದಾರೆ.
ನಿವೃತ್ತಿಯ ಬಳಿಕ ತಾನು ಶಿಕ್ಷಣ ಮತ್ತು ದಾನ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ವಿಶ್ರಾಂತ ಜೀವನ ನಡೆಸುವುದಾಗಿ ಅವರು ಹೇಳಿದ್ದಾರೆ.
ಮಾ ಅವರು ಮಾಜಿ ಟ್ರಾವೆಲ್ ಗೈಡ್, ಇಂಗ್ಲಿಷ್ ಶಿಕ್ಷಕ ಮತ್ತು ಸ್ವ ಘೋಷಿತ “ಚೈನಾಸ್ ಫಾರೆಸ್ಟ್ ಗಂಪ್’. ನಿವೃತ್ತಿಯ ಬಳಿಕವೂ ತಾನು ಕಂಪೆನಿಯ ನಿರ್ದೇಶಕರ ಮಂಡಳಿಯಲ್ಲಿ ಉಳಿಯುವುದಾಗಿಯೂ ಕಂಪೆನಿಯ ಆಡಳಿತೆಗೆ ಮಾರ್ಗದರ್ಶಕನಾಗಿ ಕೆಲಸ ಮಾಡುವುದಾಗಿಯೂ ಜ್ಯಾಕ್ ಮಾ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ತನ್ನ ನಿವೃತ್ತಿಯ ಯುಗಾಂತ್ಯವಲ್ಲ; ಯುಗಾರಂಭ ಎಂದು ಮಾರ್ಮಿಕವಾಗಿ ನುಡಿದಿರುವ ಜ್ಯಾಕ್ ಮಾ, ತನ್ನ ನಿವೃತ್ತಿಯ ನಿರ್ಧಾರವು ವಿಲಕ್ಷಣಕಾರಿಯಾದುದೆಂದು ಹೇಳಿಕೊಂಡಿದ್ದಾರೆ.
ಅಂದ ಹಾಗೆ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯನ್ನು ಚೀನದ್ಲಿ ಕಮ್ಯುನಿಸ್ಟ್ ಪಾರ್ಟಿ ಸೆನ್ಸಾರ್ ಮಂಡಳಿ ಬ್ಲಾಕ್ ಮಾಡಿದೆ. ಹಾಗಾಗಿ ಆಲಿಬಾಬಾದಿಂದ ಇಂದು ಶನಿವಾರ ಯಾವುದೇ ಅಧಿಕೃತ ಹೇಳಿಕೆ ಇನ್ನೂ ಬಂದಿಲ್ಲ.