ಬೀಜಿಂಗ್: ಜನಪ್ರಿಯ ಆಲಿಬಾಬಾ ಗ್ರೂಪ್ ನ ಸಂಸ್ಥಾಪಕರಾದ ಜಾಕ್ ಮಾ ಕಳೆದೆರೆಡು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಾಂಘೈ ಮತ್ತು ಹಾಂಗ್ ಕಾಂಗ್ ನಲ್ಲಿ Ant ಗ್ರೂಪ್ ನ ಐಪಿಒ(initial public offering) ಹಠಾತ್ ಅಮಾನತುಗೊಳಿಸಿದ ನಂತರ ಚೀನಾ ಸರ್ಕಾರ ಜಾಕ್ ಮಾ ಮೇಲೂ ಕಣ್ಣಿಟ್ಟಿತ್ತು.
ಇದೀಗ ಜಾಕ್ ಮಾ ಕಳೆದೆರೆಡು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ್ದರಿಂದ ಚೀನಾ ಮಾಧ್ಯಮಗಳು ಅವರು ಕಣ್ಮರೆಯಾಗಿದ್ದಾರೆ ಎಂದೇ ವರದಿ ಮಾಡಿದೆ. ಏತನ್ಮಧ್ಯೆ ಜಾಕ್ ಮಾ, ಸ್ವತಃ ತೀರ್ಪುಗಾರರಾಗಿರುವ ‘ಆಫ್ರಿಕಾ ಬ್ಯುಸಿನೆಸ್ ಹೀರೋಸ್ ‘ ಟ್ಯಾಲೆಂಟ್ ಶೋ ಒಂದರ ಅಂತಿಮ ಎಪಿಸೋಡ್ ನಲ್ಲೂ ಕಾಣಿಸಿಕೊಳ್ಳದೆ ಇರುವುದು ಈ ಅನುಮಾನಗಳಿಗೆ ಇನ್ನಷ್ಟು ಪುಷ್ಠಿ ದೊರೆತಿದೆ. ಈ ಶೋ ನಲ್ಲಿ ಜಾಕ್ ಮಾ ಬದಲಿಗೆ ಆಲಿಬಾಬಾ ಸಂಸ್ಥೆಯ ಕಾರ್ಯನಿರ್ವಹಣಾ ಅಧಿಕಾರಿಯೊಬ್ಬರು ಭಾಗಿಯಾಗಿದ್ದರು.
ಅಲಿಬಾಬಾ ಮತ್ತು ಟೆನ್ಸೆಂಟ್ ಹೋಲ್ಡಿಂಗ್ಸ್‌ನಂತಹ ಕಂಪೆನಿಗಳು ನೂರಾರು ಮಿಲಿಯನ್ ಬಳಕೆದಾರರನ್ನು ಗಳಿಸಿದ ನಂತರ ನಿಯಂತ್ರಕರಿಂದ ಹೆಚ್ಚಿನ ಒತ್ತಡವನ್ನು ಎದುರಿಸುತ್ತಿದ್ದು, ಇದು ಚೀನಾದ ದೈನಂದಿನ ಜೀವನದ ಪ್ರತಿಯೊಂದು ಅಂಶಗಳ ಮೇಲೆ ಪ್ರಭಾವ ಬೀರಿದೆ ಎಂದೇ ವರದಿಯಾಗಿದೆ. ಕಳೆದ ತಿಂಗಳು, ಚೀನಾದ ಆ್ಯಂಟಿ ಟ್ರಸ್ಟ್ ಅಧಿಕಾರಿಗಳು ಜಾಕ್ ಮಾ ಅವರ ಇ-ಕಾಮರ್ಸ್ ಸಂಘಟಿತ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಬಗ್ಗೆ ತನಿಖೆ ಆರಂಭಿಸಿದ್ದರು.
ಇದನ್ನೂ ಓದಿ: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಕೇಸ್: ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಗೆ ಜಾಮೀನು
ಆಕ್ಟೋಬರ್ 24ರಂದು ಚೀನಾ ಸರ್ಕಾರದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಜಾಕ್ ಮಾ, ಚೀನಾದ ಕಮ್ಯುನಿಷ್ಟ್ ಸರ್ಕಾರದ ಹಣಕಾಸು ನಿರ್ವಹಣೆ ಮತ್ತು ಬ್ಯಾಂಕ್ ಗಳನ್ನು ಕಟುವಾಗಿ ಟೀಕಿಸಿದ್ದರು. ಮಾತ್ರವಲ್ಲದೆ ಶಾಂಘೈನಲ್ಲಿ ಜಾಕ್ ಮಾ ಮಾಡಿದ್ದ ಭಾಷಣವೊಂದು ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಜಾಕ್ ಮಾ ಅವರ Ant ಸಂಸ್ಥೆಯ ಐಪಿಓ( ಸುಮಾರು 37 ಮಿಲಿಯನ್ ಡಾಲರ್ ಮೌಲ್ಯ)ವನ್ನು ಅಮಾನತು ಮಾಡಿ ಶಾಂಘೈ ಷೇರು ವಿನಿಮಯ ಕೇಂದ್ರವು ಹೊಡೆತ ನೀಡಿತ್ತು.
ಇದೀಗ ಜಾಕ್ ಮಾ ಕಣ್ಮರೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅಲಿಬಾಬಾ ವಕ್ತಾರ, ಜಾಕ್ ಮಾ ಕಾರ್ಯಕ್ರಮ ವೇಳಾಪಟ್ಟಿಯಲ್ಲಿ ಸಮಸ್ಯೆಯಾದ ಕಾರಣ ಆಫ್ರಿಕಾ ಬ್ಯುಸಿನೆಸ್ ಹೀರೋಸ್ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಯಾವದೇ ಪಕ್ಷದೊಂದಿಗೆ ವಿಲೀನವಿಲ್ಲ, 2023ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ: ಎಚ್ ಡಿಕೆ