ಬಾಲಿಶ ಹೇಳಿಕೆಗಳಿಂದ ಟ್ರೋಲ್ ಆಗುತ್ತಿರುವ ನಟಿ ಅಲಿಯಾ ಭಟ್, ಈ ಬಾರಿ ತನ್ನ “ಹೃದಯವಂತಿಕೆ’ಯ ಕಾರ್ಯದಿಂದ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೌದು, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಬಡ ಮತ್ತು ಅನಾಥ ಮಕ್ಕಳ ನೆರವಿಗೆ ಮುಂದಾಗಿರುವ ಅಲಿಯಾ ಭಟ್ ಇದಕ್ಕಾಗಿ ಹೊಸ ಕಾರ್ಯಕ್ರಮವನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಅಂದ ಹಾಗೆ, ಇದಕ್ಕೆಲ್ಲ ಕಾರಣ ಅಲಿಯಾ ಇತ್ತೀಚೆಗೆ ಖುದ್ದಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳನ್ನು ನೋಡಿದ ಪರಿಣಾಮವಂತೆ! ಇತ್ತೀಚೆಗೆ ಅಲಿಯಾ ಅವರು ಮುಂಬೈನ ಪ್ರಸಿದ್ಧ ಜರ್ಬಾಯಿ ವಾಡಿಯಾ ಆಸ್ಪತ್ರೆಯಲ್ಲಿ ನಡೆದ “ಆರ್ಟ್ ಫಾರ್ ದಿ ಹಾರ್ಟ್’ ಎಂಬ ಪ್ರದರ್ಶನದ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಹೃದಯ ಸಂಬಂಧಿ ಕಾಯಿಲೆಯಿಂದ ಮಕ್ಕಳನ್ನು ನೋಡಿದ ಅಲಿಯಾ ಅವರ ಬಗ್ಗೆ ವೈದ್ಯರಲ್ಲಿ ವಿಚಾರಿಸಿದ್ದಾರೆ. ಬಳಿಕ ವೈದ್ಯರು ಮಕ್ಕಳ ಹೃದಯ ಸಂಬಂಧಿ ಕಾಯಿಲೆಗಳ ಗಂಭೀರತೆಯನ್ನು ವಿವರಿಸಿದ ಮೇಲೆ, ಅಲಿಯಾ ಅಂಥ ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಬಗ್ಗೆ ಮಾತನಾಡುವ ಅಲಿಯಾ ಭಟ್, “ಮಕ್ಕಳು ದೊಡ್ಡವರಿಗಿಂದ ಹೃದಯವಂತರಾಗಿರುತ್ತಾರೆ. ಅಂಥ ಮಕ್ಕಳ ಹೃದಯದ ನೋವಿಗೆ ಸ್ಪಂದಿಸುವುದು ನಮ್ಮೆಲ್ಲರ ಜವಾಬ್ದಾರಿ. ಅದಕ್ಕಾಗಿ ನಾನು ಇಂಥ ಮಕ್ಕಳ ಪರವಾಗಿ ನಿಲ್ಲುತ್ತೇನೆ. ಇನ್ನೊಂದು ವಿಷಯ ಅಂದ್ರೆ, ಮಕ್ಕಳು ದೊಡ್ಡವರಿಗಿಂತ ಹೆಚ್ಚು ಪಾಸಿಟಿವ್ ಆಗಿರುತ್ತಾರೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಏಕೆಂದರೆ ಅವರ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಇರುವುದಿಲ್ಲ. ಇದೇ ಕಾರಣಕ್ಕೆ ಅವರು ಬೇಗ ಗುಣಮುಖರಾಗುತ್ತಾರೆ. ಆದರೆ ಅವರಿಗೆ ಸಮಯಕ್ಕೆ ಸರಿಯಾದ ಸೂಕ್ತ ಚಿಕಿತ್ಸೆ ಸಿಗಬೇಕು ಅಷ್ಟೇ’ ಎಂದು ಹೇಳಿದ್ದಾರೆ.
ಇನ್ನು ಅಲಿಯಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಎಕ್ಸಿಬಿಷನ್ ಪೇಟಿಂಗ್ ಪ್ರದರ್ಶನ (ಎಕ್ಸಿಬಿಷನ್) ಕೂಡ ಆಯೋಜಿಸಿದ್ದು, ಇದರಿಂದ ಬಂದ ಹಣವನ್ನು ಮಕ್ಕಳ ಚಿಕಿತ್ಸೆಗೆ ಉಪಯೋಗಿಸಲಾಗುತ್ತದೆ ಎಂದು ಅಲಿಯಾ ಭಟ್ ತಿಳಿಸಿದ್ದಾರೆ. ಒಟ್ಟಾರೆ ಪುಟಾಟಿ ಮಕ್ಕಳ ಹೃದಯದ ಬಗ್ಗೆ ಕಾಳಜಿ ತೆಗೆದುಕೊಂಡು ಒಂದೊಳ್ಳೆ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ಅಲಿಯಾ ಭಟ್‌ಗೆ, ಇಲ್ಲಿಯವರೆಗೆ ಕಾಲೆಳೆಯುತ್ತಿದ್ದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಲಿಯಾ “ಹೃದಯವಂತೆ’ ಎಂದು ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ.