ವಾಷಿಂಗ್ಟನ್: ಜರ್ಮನಿಯ ಯುವ ಟೆನಿಸಿಗ ಅಲೆಕ್ಸಾಂಡರ್ ಜ್ವೆರೇವ್ 50ನೇ “ವಾಷಿಂಗ್ಟನ್ ಓಪನ್ ಎಟಿಪಿ ಟೆನಿಸ್’ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯದ ಮತ್ತೂಬ್ಬ ಯುವ ಆಟಗಾರ್ ಅಲೆಕ್ಸ್ ಡಿ ಮಿನೌರ್ ವಿರುದ್ಧ 6-2, 6-4 ಗೆಲುವು ಸಾಧಿಸಿದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ ರಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಅನಂತರದ ಸ್ಥಾನವನ್ನು ಅಲಂಕರಿಸಿರುವ ಜ್ವೆರೇವ್, ಈ ವರ್ಷ ಗೆದ್ದ 3ನೇ ಹಾಗೂ ಟೆನಿಸ್ ಬಾಳ್ವೆಯ 9ನೇ ಪ್ರಶಸ್ತಿ ಇದಾಗಿದೆ.
“ನನ್ನ ಪಾಲಿಗೆ ಇದೊಂದು ಅಮೋಘ ವಾರ. ಪಂದ್ಯಾವಳಿಯೊಂದರ 50ನೇ ವರ್ಷಾಚರಣೆಯ ಕೂಟವನ್ನು ಗೆಲ್ಲುವುದು ನಿಜಕ್ಕೂ ಸ್ಮರಣೀಯ. ಪ್ರಶಸ್ತಿ ಉಳಿಸಿಕೊಳ್ಳುವ ಮೂಲಕ ನನ್ನ ಮಾನಸಿಕ ದೃಢತೆಯನ್ನು ಸಾಬೀತುಪಡಿಸಿದಂತಾಗಿದೆ. ನಾನೀಗ ಸ್ವಲ್ಪ ಪ್ರಬುದ್ಧನಾಗಿಯೂ ಕಾಣಿಸುತ್ತಿದ್ದೇನೆ’ ಎಂದು ಜ್ವೆರೇವ್ ಪ್ರತಿಕ್ರಿಯಿಸಿದ್ದಾರೆ.
ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ಪಾಲಿಗೆ ಇದು 2ನೇ ಎಟಿಪಿ ಫೈನಲ್ ಆಗಿತ್ತು. 19ರ ಹರೆಯದ ಮಿನೌರ್ ಇದಕ್ಕೂ ಮುನ್ನ ತವರಿನ “ಸಿಡ್ನಿ ಓಪನ್ ಟೂರ್ನಿ’ಯ ಫೈನಲ್ ತಲುಪಿ ಅಲ್ಲಿ ಡ್ಯಾನಿಲ್ ಮೆಡ್ವೆಡೇವ್ ವಿರುದ್ಧ ಸೋಲನುಭವಿಸಿದ್ದರು.ಈ ಕೂಟಕ್ಕೂ ಮುನ್ನ 72ನೇ ರ್‍ಯಾಂಕಿಂಗ್‌ನಲ್ಲಿದ್ದ ಮಿನೌರ್ ಫೈನಲ್ ಸಾಧನೆಯ ಬಳಿಕ 45ಕ್ಕೆ ನೆಗೆದಿದ್ದಾರೆ.
ಕುಜ್ನೆತ್ಸೋವಾ ಚಾಂಪಿಯನ್
ಇದೇ ಕೂಟದ ವನಿತಾ ಪಂದ್ಯಾವಳಿಯಲ್ಲಿ 2 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತೆ, ರಶ್ಯದ ಸ್ವೆತ್ಲಾನಾ ಕುಜ್ನೆತ್ಸೋವಾ ಕ್ರೊವೇಶಿಯಾದ ಡೋನಾ ವೆಕಿಕ್ ಅವರನ್ನು 4-6, 7-6 (9-7), 6-2 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನೆತ್ತಿದರು.
33ರ ಹರೆಯದ ಕುಜ್ನೆತ್ಸೋವಾ ಪಾಲಿಗೆ ಇದು 2ನೇ ವಾಷಿಂಗ್ಟನ್ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ ಅವರು 2014ರಲ್ಲಿ ಚಾಂಪಿಯನ್ ಆಗಿದ್ದರು.