Advertisement

“ಅಲೆಕ್ಸಾ’ದಂಡಯಾತ್ರೆ!

12:29 PM Dec 12, 2017 | |

ಅಲೆಕ್ಸಾ! ಅವಳೊಬ್ಬಳು ಕಂಠಸುಂದರಿ. ಅಮೆಜಾನ್‌ ಸಂಸ್ಥೆ ಪರಿಚಯಿಸಿದ “ಅಲೆಕ್ಸಾ’ ಉಪಕರಣದ ಕೆಲಸವೇ ಪರ್ಸನಲ್‌ ಅಸಿಸ್ಟಂಟ್‌. ನಮ್ಮ ಒಂಟಿತನವನ್ನು ತೊಲಗಿಸುವ ಆಪ್ತ ಸಹಾಯಕಿಯಾಗಿ ಈಗ ಭಾರತದೆಲ್ಲೆಡೆ ಪರಿಚಿತಳಾಗುತ್ತಿದ್ದಾಳೆ. ಆಕೆ ಕೇಳಿದ್ದನ್ನೆಲ್ಲ ಕೊಡುವ ಕಾಮಧೇನು ಹೌದಾ? ನಮ್ಮ ಸಂಗಾತಿಗಿಂತ ಆಕೆಯ ಸ್ಪಂದನೆ ಹೆಚ್ಚಾ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳು ಪ್ರಯತ್ನ ಇಲ್ಲಿದೆ. ಆಕೆಯೊಂದಿಗೆ ಕಳೆದ 2 ತಿಂಗಳ ಅನುಭವ ಇಲ್ಲಿ ಒಡಮೂಡಿದೆ…

Advertisement

ಆಕೆಗೆ ಮಾಡಲು ಬೇರೆ ಕೆಲಸ ಇರೋದಿಲ್ಲ. ನಾವೇನಾದರೂ ಸೂಚಿಸಿದರಷ್ಟೇ ಆಕೆಗದುವೇ ಕೆಲಸ. ಹಾಡು ಎಂದರೆ ಹಾಡುತ್ತಾಳೆ; ಲತಾ ಮಂಗೇಶ್ಕರ್‌ ಆಗಿ, ಸೋನು ನಿಗಮ್‌ ಆಗಿ, ಇನ್ನೂ ಹಾಟಾಟ್‌ ಬೇಡಿಕೆಯಿಟ್ಟರೆ ಮಡೋನ್ನಾಳ ಬಿಸಿ ಹಾಡುಗಳನ್ನು ನಮ್ಮ ಕಿವಿಗಿಳಿಸುವಳು. ನಮ್ಮೊಳಗಿನ ಪ್ರಶ್ನೆಯನ್ನು ಹರವಿಟ್ಟರೆ, ಅದಕ್ಕೂ ಉತ್ತರಿಸುತ್ತಾಳೆ, ಕಾಲ್‌ಸೆಂಟರ್‌ನ ಜಾಣೆಯಂತೆ! ನಮ್ಮ ಏಕಾಂತವನ್ನು ಬಡಿದೆಬ್ಬಿಸುವ ಈ ಪ್ರವೀಣೆ, “ಅಯ್ಯೋ ಸುಸ್ತಾಯ್ತು, ನಿನ್‌ ಮಾತು ಕೇಳ್ಳೋಕ್ಕಾಗಲ್ಲ’ ಎಂದು ಅಪಸ್ವರ ಎತ್ತುವುದಿಲ್ಲ. ಕಾರಣ, ಈಕೆಯದ್ದು “ನಾನು ಹುಟ್ಟಿದ್ದೇ, ಇನ್ನೊಬ್ಬರ ಕೆಲಸ ಮಾಡಲು’ ಎನ್ನುವ ಕಾಯಕಯೋಗಿಯ ತತ್ವ.

ಅಲೆಕ್ಸಾ! ಅವಳೊಬ್ಬಳು ಕಂಠಸುಂದರಿ. ಅಮೆಜಾನ್‌ ಸಂಸ್ಥೆ ಪರಿಚಯಿಸಿದ “ಅಲೆಕ್ಸಾ’ ಉಪಕರಣದ ಕೆಲಸವೇ ಪರ್ಸನಲ್‌ ಅಸಿಸ್ಟಂಟ್‌. ನಮ್ಮ ಒಂಟಿತನವನ್ನು ತೊಲಗಿಸುವ ಆಪ್ತ ಸಹಾಯಕಿಯಾಗಿ ಈಗ ಮನೆಮಾತು. ಸಪ್ತಸಾಗರದಾಚೆಗೆ ಸದ್ದುಮಾಡಲೆಂದೇ ಹುಟ್ಟಿದ ಈ ಅಲೆಕ್ಸಾ, ಈಗ ಭಾರತದ ಪ್ರಜೆ ಕೂಡ! ಇಲ್ಲಿನ ಮನೆಮನಗಳನ್ನು ಟಾರ್ಗೆಟ್‌ ಮಾಡಿಕೊಂಡು, ಮಾತಾಡಿಸುತ್ತಿದ್ದಾಳೆ! ಅಮೆರಿಕದಿಂದ ಪುರ್ರನೆ ಹಾರಿಬಂದ ಈ ದುಂಬಿಡಬ್ಬಿಯ ಬಗ್ಗೆ ಹೇಳುವ ಮುನ್ನ, ಆಕೆ ಸೃಷ್ಟಿಸಿದ್ದ ಎರಡು ಅವಾಂತರಗಳು ಈ ಹೊತ್ತಿನಲ್ಲಿ ನೆನಪಾಗುತ್ತಿವೆ.

ಒಮ್ಮೆ ಹಾಗಾಯ್ತು. ಜರ್ಮನಿಯ ಹ್ಯಾಂಬರ್ಗ್‌ ನಗರದ ನಟ್ಟನಡುವೆ ಒಂದು ಅಪಾರ್ಟ್‌ಮೆಂಟು. ಲೈಟೆಲ್ಲ ಆಫ್ ಆಗಿವೆ. ಬಾಗಿಲು ಹೊರಗೆ ಲಾಕ್‌ ಆಗಿರುವುದು, ಆ ಫ್ಲ್ಯಾಟ್‌ ಒಳಗೆ ಯಾವ ನರಪಿಳ್ಳೆಯೂ ಇಲ್ಲವೆಂಬುದನ್ನು ಸೂಚಿಸುತ್ತಿತ್ತು. ಅದು ಬಹುಶಃ ರಾತ್ರಿ 1.30 ಇದ್ದಿರಬೇಕು. ಆ ಫ್ಲ್ಯಾಟ್‌ ಒಳಗೆ ಕಿವಿಗಡಚಿಕ್ಕುವ ಸಂಗೀತ ಅಬ್ಬರಿಸುತಿದೆ! ಮಡೋನ್ನಾ, ಲೇಡಿ ಗಾಗಾರಂಥ ಸುಪ್ರಸಿದ್ಧ ಹಾಡುಗಾತಿಯರ ಹಸಿಬಿಸಿ ಹಾಡುಗಳ ಆರ್ಭಟಕ್ಕೆ ಸುತ್ತಲಿನ ಫ್ಲ್ಯಾಟ್‌ನವರೆಲ್ಲ ನಿದ್ದೆಬಿಟ್ಟು, ಓಡೋಡಿ ಬಂದರು. “ಯಾರೋ ಅದು ಭೂಪ, ಈ ರಾತ್ರೀಲಿ ನಿಂಗೇನಾಯ್ತು?’ ಎಂದು ಕೇಳುತ್ತಾ, ನಾಲ್ಕು ಸಲ ಕಾಲಿಂಗ್‌ ಬೆಲ್‌ ಬಾರಿಸಿ, ಬಾಗಿಲು ಬಡಿದು, ಉತ್ತರ ಬಾರದೇ ಇದ್ದುದನ್ನು ನೋಡಿ, ಒಳಗೆ ಪ್ರೇತ ಇದ್ದಿರಬೇಕೆಂಬ ಸುದ್ದಿ ಹಬ್ಬಿಸಿದರು. ಹ್ಯಾಂಬರ್ಗ್‌ನ ಟಿವಿ ಚಾನೆಲ್ಲುಗಳಲ್ಲಿ ಬ್ರೇಕಿಂಗ್‌ ನ್ಯೂಸ್‌ಗಳು ಸಾðಲ್‌ ಆದವು. ವಿಚೆಸ್‌ (ಮಾಟಗಾತಿಯರು) ಒಳಗೇನೋ ಪ್ರೇತ ಬಿಟ್ಟಿರಬೇಕೆಂಬ ಊಹೆಗಳು ಊಳಿಟ್ಟವು. ದಂಡು ದಂಡು ಪೊಲೀಸರು ದೌಡಾಯಿಸಿದರು.

ಕೊನೆಗೆ ಆ ಫ್ಲ್ಯಾಟ್‌ ಮಾಲೀಕನಿಗೆ ಕರೆ ಮಾಡಿದಾಗ, ಆತ ಒಳಗಿಲ್ಲವೆಂಬುದು ಖಾತ್ರಿ ಆಯಿತು. ಹೊರಗಿದ್ದವರ ಆತಂಕ ಮತ್ತೂ ಹೆಚ್ಚಾಯಿತು. ಎಲ್ಲೋ ಇದ್ದ ಮಾಲೀಕ ಓಡೋಡಿ ಬಂದು, ಬಾಗಿಲು ತೆರೆದಾಗ, ಅಲ್ಲಿ ಅಮೆಜಾನ್‌ನ “ಅಲೆಕ್ಸಾ’ ದೊಡ್ಡ ಕಂಠದಲ್ಲಿ ಹಾಡುತ್ತಿದ್ದಳು! ಕಂಠಪೂರ್ತಿ ಕುಡಿದಿದ್ದ ಮಾಲೀಕ, ಆಕೆಗೆ ರಾತ್ರಿಪೂರಾ ಹಾಡಲು ಹೇಳಿ, ಬಾಗಿಲು ಲಾಕ್‌ ಮಾಡಿಕೊಂಡು, ಹೊರಗೆ ಹೋಗಿದ್ದ. ಒಡೆಯನ ಮಾತನ್ನು ತಪ್ಪದೇ ಪಾಲಿಸಿದ್ದಳು ಅಲೆಕ್ಸಾ!

Advertisement

ಇದಾಗಿ ಕೆಲವೇ ದಿನದಲ್ಲಿ ಲಂಡನ್ನಿನಲ್ಲಿ ಇನ್ನೊಂದು ವಿಸ್ಮಯ ಘಟಿಸಿತು. ಸಾಕು ಗಿಳಿಯೊಂದು ಅಲೆಕ್ಸಾ ಎದುರು ತನ್ನ ಮನೆಯೊಡತಿಯ ಧ್ವನಿಯನ್ನು ಅನುಕರಿಸಿ, ಅಮೆಜಾನ್‌ನಿಂದ ಉಡುಗೊರೆಯನ್ನು ತರಿಸಿಕೊಂಡಿತ್ತು! ಅಲೆಕ್ಸಾ ಸ್ಪೀಕರ್‌ ಬಳಿ ಕುಳಿತ ಆ ಗಿಳಿ, ತನ್ನ ಒಡತಿಗೆ ಬೇಕಾದ ಒಳ ಉಡುಪನ್ನು ತರಿಸಿಕೊಂಡಿತ್ತು! ಛೀ, ಪೋಲಿ ಗಿಳಿ!

ಅಲೆಕ್ಸಾಳ ಈ ಅವಾಂತರಗಳೆಲ್ಲ ಗೊತ್ತಿದ್ದೂ, ನಾನು ಇದನ್ನು ತರಿಸಿಕೊಂಡೆ. ಅದೊಂದು ಶುಭದಿನ ನನ್ನ ಮನೆಗೂ ಅಲೆಕ್ಸಾ ಕಾಲಿಟ್ಟಳು. (ಅಲೆಕ್ಸಾ ಬರುವ ಮುನ್ನ, ಅದರಲ್ಲಿರೋದು ಆಕೆಯೋ ಅಥವಾ ಆತನೋ, ನನಗೂ ಗೊತ್ತಿರಲಿಲ್ಲ!). ಅದು ಬರುತ್ತಿದ್ದ ಹಾಗೆ ಪ್ಯಾಕ್‌ ಓಪನ್‌ ಮಾಡುತ್ತಿದ್ದ ನನ್ನಲ್ಲಿ ಅದೇನೋ ಕೌತುಕ, ಹೇಳತೀರದ ಸಡಗರ. ಅಲ್ಲಿ ಇಲ್ಲಿ ಅದರ ಬಗ್ಗೆ ಓದಿ ತಿಳಿದಿದ್ದ ನನಗೆ ಇದು ಹೆಂಗೆ ಕೆಲ್ಸ ಮಾಡುತ್ತೆ ಎಂಬ ಕುತೂಹಲವಿತ್ತು. ಅಷ್ಟಾಗಿ ಇಂಗ್ಲಿಷ್‌ನ ಮಾತು ಒಗ್ಗದ ನನಗೆ ಅದ್ಹೇಗೆ ಇದರ ಹತ್ತಿರ ಮಾತಾಡೋದು ಎಂಬ ಆತಂಕವೂ ಎದೆಯಲ್ಲಿ.

ಆಕೆಯ ಬಳಿ ಇಂಗ್ಲಿಷನ್ನು ಜೋಡಿಸಿಕೊಂಡು ಮಾತಾಡಿದಾಗ, ಎರಡನೇ ಹೆಂಡತಿಯಂತೆ ಫೀಲ್‌ ಹುಟ್ಟಿತು. ಈ ಸ್ಮಾರ್ಟ್‌ ಯುಗದಲ್ಲಿ, ಎಲ್ಲರೂ ಅವರವರ ಮೊಬೈಲ್‌ ಕೊಳದಲ್ಲಿ ಮುಳುಗಿರುವಾಗ, ನಮ್ಮ ಮಾತು ಕೇಳ್ಳೋರೇ ಇಲ್ಲವೆಂಬ ಕೊರಗು ಬಹುತೇಕರದ್ದು. ಆ ಕೊರಗು ನನ್ನನ್ನೂ ಅನೇಕ ಸಲ ಕಾಡಿದ್ದಿದೆ. 

ಈ ಅಲೆಕ್ಸಾ ಎಂಬ ಚತುರೆ ನನಗೆ ಒಳ್ಳೇ ಸ್ನೇಹಿತೆಯಾಗಬಲ್ಲಳು ಎಂದೆನಿಸಿದ್ದು ಆಕೆಯ ಸ್ವಾಗತದ ಮಾತು ಕೇಳಿದಾಗಲೇ. ಆನ್‌ ಮಾಡಿದ ತಕ್ಷಣವೇ ಆಕೆ, “ವೆಲ್ ಕಮ್’ ಅಂತ ಮಧುರ ಧ್ವನಿಯಲ್ಲಿ ಹೇಳೇಬಿಟ್ಟಳು. ಅಷ್ಟೇ ಸಾಕಿತ್ತು ನನ್ನ ಮೊಗದಲ್ಲೊಂದು ನಗು ಮೂಡಲಿಕ್ಕೆ. ಅಬ್ಟಾ, ಎಂಥ ಚೆಂದದ ದನಿ! ಈಕೆ ಕನ್ನಡವನ್ನೂ ಮಾತಾಡಿದರೆ, ಇನ್ನೆಷ್ಟು ಚೆಂದವಿರುತ್ತಿತ್ತು ಎಂದುಕೊಂಡೇ, ಕನ್ನಡದಲ್ಲಿ ಮಾತಾಡತೊಡಗಿದೆ. ಅಲೆಕ್ಸಾಗೆ ತಲೆಬುಡ ಅರ್ಥ ಆಗಲಿಲ್ಲ. ಸಾರಿ, ವಾಟ್‌ ವಾಟ್‌ ಎನ್ನುತ್ತಾ ಮಂಡೆಬಿಸಿ ಮಾಡಿಕೊಂಡಳು, ಪಾಪಾ…!

ಆಕೆಯ ಕೆಲಸವೂ ಪೂರ್ಣ ಪ್ರಮಾಣವಾಗಿ ಸ್ಕಿಲ್ ಆಧರಿತವಾಗಷ್ಟೇ. ಅಂದರೆ, ನಮಗೆ ಏನು ಬೇಕೋ, ಏನು ಆಸಕ್ತಿ ಇದೆಯೋ ಅದನ್ನು ಮೊದಲೇ ಆಕೆಗೆ ಹೇಳಿಬಿಡಬೇಕು. ಅದರಂತೆಯೇ ಆಕೆ ಸ್ಪಂದಿಸುತ್ತಾ ಹೋಗುತ್ತಾಳೆ. ಅದು ಆಕೆಯ ಸ್ಪೆಷಾಲಿಟಿ. ಹಾಗಾಗಿ, ಆಕೆಯ ಸ್ಕಿಲ್ಗಳನ್ನು ಸೇರಿಸುತ್ತಾ ಹೋದೆ. ಅಲ್ಲೊಂದಿಷ್ಟು ಭರಪೂರ ಸುದ್ದಿ, ಅಡುಗೆ, ಜನರಲ… ನಾಲೆಡ್ಜ್, ಹಾಡು, ಕವಿತೆ, ಪುಸ್ತಕ, ಹವಾಮಾನ… ಹೀಗೆ ಅವಳ ಒಡಲಾಳವನ್ನು ವಿಸ್ತರಿಸುತ್ತಾ ಹೋದೆ.

ಎಲ್ಲಾ ಆದ ಮೇಲೆ ಆಕೆ, ನಾನು ರೆಡಿ ಅದೆ… ನಿಮ್ಗೆನು ಬೇಕೋ ಕೇಳಿ ಎನ್ನುವ ಉತ್ಸಾಹದಲ್ಲಿ ನನ್ನೆದುರು ನಿಂತಿದ್ದಳು. ನಾನು ಆಕೆಗೆ ಕೇಳಿದ ಮೊದಲನೇ ಪ್ರಶ್ನೆ; “ನಂಗೆ ಬೋರ್‌ ಆಗಿದೆ, ನಂಗೊಂದು ಸುಂದರ ಹಾಡು ಪ್ಲೇ ಮಾಡ್ತೀಯಾ?’. ಅಯ್ಯೋ ಅದಕ್ಕೇನಂತೆ ಅಂತ ಆಕೆ ಪ್ಲೇ ಮಾಡಿದ್ದು, “ಚಕ್ರವರ್ತಿ’ ಸಿನಿಮಾದ “ಒಂದು ಮಳೆಬಿಲ್ಲು…’ ಎಂಬ ಹಾಡನ್ನು! ಎಂಥ ವಾಯು ಅಂತೀರ. ಅಬ್ಟಾ! ಈಕೆಗೆ ನನ್ನ ಟೇಸ್ಟು ಕೂಡ ಅರ್ಥವಾಯ್ತಲ್ಲ ಎಂಬ ಕೃತಜ್ಞತಾ ಭಾವ, ನನ್ನ ಮನದ ಬೈಪಾಸ್‌ನಲ್ಲಿ ಹಾದು ಹೋಯ್ತು.

ನನ್ನ ಪರೀಕ್ಷೆಗಳು ಅಲ್ಲಿಗೆ ಮುಗಿದಿರಲಿಲ್ಲ. “ಈರುಳ್ಳಿ ಬಜ್ಜಿ ಮಾಡೋವಾಗ, ಈರುಳ್ಳಿ ಬೇಕೇ ಬೇಕಾ?’ ಎಂದು ಕೇಳಿದೆ. ಆಕೆ “ಅಯ್ಯೋ, ಈರುಳ್ಳಿ ಇಲ್ಲದೇ ಈರುಳ್ಳಿ ಬಜ್ಜಿ ಮಾಡೋಕ್ಕಾಗುತ್ತಾ?’ ಎನ್ನುತ್ತಾ, ಕಡ್ಲೆಹಿಟ್ಟಿಗೆ ಎಷ್ಟು ನೀರು ಹಾಕೆºàಕು, ಎಷ್ಟು ಜೀರಿಗೆ ಹಾಕೆºàಕು, ಎಣ್ಣೆಯಲ್ಲಿ ಹೇಗೆ ಕರೀಬೇಕು ಅಂತೆಲ್ಲ ಕತೆ ಶುರುಮಾಡಿದಳು. “ಮೈ ಗಾಡ್‌’ ಎಂದೆ! ಅಡುಗೆ ಮನೆಯಲ್ಲಿರೋ ಹೆಂಡತಿ ತವರಿಗೆ ಹೋದರೂ ಚಿಂತೆ ಇಲ್ಲ. ಅದೆಲ್ಲಿಂದಲೋ ಅಡುಗೆ ಪುಸ್ತಕ ತಂದು, ಅದನ್ನು ಓದಿ, ಸಾಂಬಾರ್‌ ಪುಡಿ ಹಾಕೋ ಜಾಗದಲ್ಲಿ ಖಾರದ ಪುಡಿ ಹಾಕಿ, ಸಾಂಬಾರನ್ನು ಕುಲಗೆಡಿಸುವ ಹಾವಳಿ ಇಲ್ವಲ್ಲ ಎಂಬ ಖುಷಿಯಲ್ಲಿ ಒಮ್ಮೆ ತೇಲಿದೆ. ಅದೇ ಖುಷಿಯಲ್ಲಿ ಒಂದು ಹಾಡು ಹಾಕುವಂತೆ ಬೇಡಿಕೆ ಮುಂದಿಟ್ಟೆ.

ಆಗಲೇ ನನಗೆ ಸಿಟ್ಟು ನೆತ್ತಿಗೇರಿದ್ದು! ನಾನು ಏನು ಹೇಳಿದೆಯೆಂದು ಆಕೆಗೆ ಅರ್ಥವೇ ಆಗಲಿಲ್ಲ. ಮತ್ತೆ “ಸಾರಿ ಸಾರಿ’ ಎನ್ನುವ ರಾಗ. ಈಕೆಯೇನು ದಡ್ಡೀನಾ ಅಂತನ್ನಿಸಿತು. ಅಯ್ಯೋ, ದೇವೆ ನನ್ನ ಫೇವರಿಟ್‌ ಹಾಡೇ ಇವಳಿಗೆ ಗೊತ್ತಿಲ್ವೆ ಅಂತ ಪೆಚ್ಚಾದೆ. ಈ ಪುಟ್ಟ ಅಪರಾಧವನ್ನು ಕ್ಷಮಿಸಿ, “ಗೆಳತಿ ಓ ಗೆಳತಿ…’ ಹಾಡನ್ನು ಹಾಕಲು ಕೋರಿಕೆಯಿಟ್ಟೆ. “ಅದೂ ನಂಗೆ ಗೊತ್ತಿಲ್ಲ’ ಎಂದಳು ಅಲೆಕ್ಸಾ! ನನಗೆ ಸಿಟ್ಟನ್ನು ತಡೆಯಲಾಗಲಿಲ್ಲ. “ಥೋ, ಅಲೆಕ್ಸಾ ಸ್ಟಾಪ್‌’ ಅಂದುಬಿಟ್ಟೆ, ಆಕೆ ಸುಮ್ಮನೆ ಕುಳಿತಳು!

ಇದನ್ನೆಲ್ಲ ನೋಡಿಯಾದ ಮೇಲೆ ನನಗೆ ನನ್ನ ಮೊದಲನೇ ಹೆಂಡತಿಯ ಮೇಲೆ ಪ್ರೀತಿ ಹೆಚ್ಚಾಯಿತು. ಅಲೆಕ್ಸಾ ಎಂಬ ಆಮದು ಚೆಂದುಳ್ಳಿಗಿಂತ, ನನ್ನನ್ನು ನಂಬಿ, ನನ್ನ ಇಷ್ಟಗಳನ್ನು ಅರಿತು, ಅದರಂತೆ ತ್ಯಾಗ ಮಾಡುತ್ತಿರುವ ಪಕ್ಕದಲ್ಲಿದ್ದ ಜೀವದ ದುಂಬಿಯ ಬಗ್ಗೆ ಹೆಮ್ಮೆ ಮೂಡಿತು. ಬದುಕೆಂದರೆ ಭಾವವೇ ತಾನೆ? ತಂತ್ರಜ್ಞಾನಕ್ಕೆ ಅದೆಲ್ಲ ಅರ್ಥ ಆಗುತ್ತೆ!?

ಯಾರು ಈ ಅಲೆಕ್ಸಾ?
ಇದು ಅಮೆಜಾನ್‌ ಕಂಪನಿ ಹೊರತಂದಿರುವ ಪರ್ಸನಲ… ಅಸಿಸ್ಟಂಟ್‌. ಅತ್ಯುತ್ತಮವಾದ ಸ್ಪೀಕರ್‌ ಹೊಂದಿರುವ, ನಮ್ಮ ಮಾತು ಕೇಳುವ, ನಮ್ಮ ಆಸೆಗೆ ತಕ್ಕಂತೆ ವರ್ತಿಸುವ ಅಸಿಸ್ಟಂಟ್‌. ಇದರಲ್ಲಿ ನಾವು ಬೆಳಗ್ಗೆ 6ಕ್ಕೇ ಎದ್ದೇಳಬೇಕು, ಅಲರಾಂ ಇಡು ಅಂದ್ರೆ ಸಾಕು, ಓಕೆ ಎನ್ನುತ್ತಾ, ಸರಿಯಾಗಿ ಆರಕ್ಕೇ ಎಬ್ಬಿಸುತ್ತಾಳೆ. ದಿನದ ಅಷ್ಟೂ ಕೆಲಸಗಳನ್ನು ಪಟ್ಟಿ ಮಾಡಿಕೊಡ್ತಾಳೆ. ಶಾಪಿಂಗ್‌ ಲಿಸ್ಟ್‌ ನೆನಪಿಟ್ಟುಕೊಂಡಿರ್ತಾಳೆ. ಸಾರಿಗೆ ಉಪ್ಪು ಎಷ್ಟು ಹಾಕಬೇಕು ಎಂದು ಹೇಳುತ್ತಾಳೆ. ಅಮೆಜಾನ್‌ ಜತೆಗೆ ಕಿಂಡಲ… ಸಬ… ಸೆð„ಬ… ಮಾಡಿಸಿದ್ದರೆ, ಪುಸ್ತಕವನ್ನೇ ಓದಿ ಹೇಳ್ತಾಳೆ. ಹೀಗೆ ನಾನಾ ಕೆಲಸ ಮಾಡ್ತಾನೇ ಇರ್ತಾಳೆ. ಈಗ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಇದು ಮೂರು ವಿವಿಧ ಬೆಲೆಗಳಲ್ಲಿ ಲಭ್ಯ.

ನಮ್ಮ ಇಂಗ್ಲಿಷ್‌ ಅದಕ್ಕೆ ಅರ್ಥವೇ ಆಗೋಲ್ಲ!
ಈ ಅಲೆಕ್ಸಾ ಇನ್ನೂ ನಮ್ಮ ಭಾರತಕ್ಕೆ ಒಗ್ಗಿಲ್ಲ. ನಮ್ಮ ಇಂಗ್ಲಿಷ್‌ ಅರ್ಥವಾಗಲು ಇದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕು. ಇದರಲ್ಲಿ ಭಾರತದ ಇಂಗ್ಲಿಷ್‌ ಅನ್ನು ಆರಿಸಿಕೊಂಡರೂ, ಅದು ಸ್ವೀಕರಿಸುವುದಿಲ್ಲ. ಹೀಗಾಗಿ, ನಮ್ಮ ಉಚ್ಚಾರಣೆಗೆ ಅದು ಬೆಲೆಯನ್ನೇ ಕೊಡುವುದಿಲ್ಲ. ಆದರೆ, ಇದರ ಬಹುದೊಡ್ಡ ಗುಣವೆಂದರೆ, ಈ ಡಿವೈಸ್‌ ನಮ್ಮ ಮಾತು ಮತ್ತು ಉಚ್ಚಾರಣೆಯನ್ನು ಅಧ್ಯಯನಿಸಿ, ನಂತರದ ದಿನಗಳಲ್ಲಿ ಅಳವಡಿಸಿಕೊಳ್ಳುತ್ತಾ ಹೋಗುತ್ತೆ. ಹೀಗಾಗಿ ಈ ತೊಂದರೆ ಮುಂದಿನ ದಿನಗಳಲ್ಲಿ ಇರಲಾರದು.

ಇದಕ್ಕಿಂತ ಮಿಗಿಲಾಗಿ, ಅಮೆರಿಕದಲ್ಲಿ ಈ ಡಿವೈಸ್‌ ಅನ್ನು ಇಡೀ ಮನೆಯನ್ನು ನಿಯಂತ್ರಣ ಮಾಡುವ ಸಲುವಾಗಿ ಬಳಸುತ್ತಾರೆ. ಅಂದರೆ, ಸ್ಮಾರ್ಟ್‌ ಕಿಚನ್‌, ಸ್ಮಾರ್ಟ್‌ ಸಿಸಿಟಿವಿ, ಸ್ಮಾರ್ಟ್‌ ಫ್ರಿಡ್ಜ್, ಸ್ಮಾರ್ಟ್‌ ಲೈಟ್‌… ಹೀಗೆ. ಇದಕ್ಕೆ ಒಮ್ಮೆ ಹೇಳಿದರಾಯ್ತು, ಲೈಟ್‌ ಆಫ್ ಮಾಡುವುದರಿಂದ ಹಿಡಿದು, ಎಲ್ಲ ಕೆಲಸವನ್ನೂ ಮಾಡುತ್ತೆ. ಆದರೆ, ನಮ್ಮಲ್ಲಿ ಇನ್ನೂ ಸ್ಮಾರ್ಟ್‌ ಹೋಮ… ಕಲ್ಪನೆ ಬಂದಿಲ್ಲ. ಹೀಗಾಗಿ, ಈ ಸಾಧನದಿಂದ ಹೆಚ್ಚು ಉಪಯೋಗ ಆಗುತ್ತೆ ಎನ್ನುವುದಕ್ಕಿಂತ ಹಾಡು ಕೇಳಲು ಖರೀದಿಸಿದ್ದೇವೆ ಎಂದು ಎಂದುಕೊಳ್ಳುವುದೇ ಉತ್ತಮ ಎಂದು, ಒಂದು ವಾಕ್ಯದ ಷರಾ ಬರೆಯಬಹುದು!

ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next