ಉಡುಪಿ: ಅಲೆವೂರು ಗುಡ್ಡೆಯಂಗಡಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಯುವಜನ ಸೇವೆ, ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿ.ಪಂ.ನ ಸಂಯುಕ್ತ ಆಶ್ರಯದಲ್ಲಿ ರವಿವಾರ ಜೋಡುರಸ್ತೆ ದೊಡ್ಡಮನೆ ಗದ್ದೆಯಲ್ಲಿ ಸಮಿತಿಯ 12ನೇ ವರ್ಷದ ಕೆಸರ್ಡ್ ಒಂಜಿ ದಿನ ಗ್ರಾಮೀಣ ಕ್ರೀಡಾಕೂಟವು ರಗಿತು.
ಶಾಸಕ ವಿನಯ್ ಕುಮಾರ್ ಸೊರಕೆ ಕ್ರೀಡೋತ್ಸವವನ್ನು ಉದ್ಘಾಟಿಸಿ, ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತುಳುನಾಡಿನ ಪ್ರಸಿದ್ಧ ಕ್ರೀಡೆ ಕಂಬಳದ ಪ್ರಾಮುಖ್ಯತೆ ಬಗ್ಗೆ ತಿಳಿಸಿ ರಾಷ್ಟ್ರಪತಿಯವರಿಂದ ಕ್ರೀಡೆಗೆ ಸುಗ್ರೀವಾಜ್ಞೆ ಹೊರಡಿಸುವಲ್ಲಿ ಕರಾವಳಿಯ ಜನಪ್ರತಿನಿಧಿಗಳ ಹಾಗೂ ಕಂಬಳ ಹೋರಾಟಗಾರರ ಪ್ರಯತ್ನ ಶ್ಲಾಘನೀಯ ಎಂದರು.
ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಹಿಮ್ಮುಖ ಓಟ, ಪಿರಮಿಡ್ ರಚನೆ, ಮೂಟೆ ಓಟ, ವಿಶೇಷವಾಗಿ ಮಾನವ ನಿರ್ಮಿತ ಕಂಬಳದ ಸ್ಫರ್ಧೆಗಳು ನಡೆದವು.
ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಬಹುಮಾನ ವಿತರಿಸಿ ಮಾತನಾಡಿ, ಕೃಷಿ ಪ್ರಧಾನ ದೇಶದಲ್ಲಿ ಗದ್ದೆಗಳಿಂದ ದೂರ ಸರಿಯುತ್ತಿರುವ ಯುವಕ ಯುವತಿಯರನ್ನು ಸ್ಪರ್ಧೆಯ ನೆಪದಲ್ಲಾದರೂ ಮತ್ತೆ ಗದ್ದೆಗೆ ಇಳಿಸಿ ಅವರಿಗೆ ಮಣ್ಣಿನ ಫಲವತ್ತತೆಯನ್ನು ತಿಳಿಯಪಡಿಸಿರುವುದು ಉತ್ತಮ ಎಂದರು.
ಜಿ.ಪಂ. ಅಧ್ಯಕ್ಷ ದಿನಕರ್ ಬಾಬು, ಅಲೆವೂರು ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ್ ನಾಯಕ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಎ. ಹರೀಶ್ ಕಿಣಿ, ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಪ್ರೇಮ್‌ಪ್ರಸಾದ್ ಶೆಟ್ಟಿ, ಪೂನಂ ಶೆಟ್ಟಿ, ಕೊರಂಗ್ರಪಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಅಲೆವೂರು ದೊಡ್ಡಮನೆ ಶ್ರೀಧರ ಶೆಟ್ಟಿ, ತೆಂಕುಮನೆ ಹರೀಶ್ ಕೆ. ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ (ಮುನ್ನ), ಜಲೇಶ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಯತೀಶ್ ಕುಮಾರ್ ಉಪಸ್ಥಿತರಿದ್ದರು.
ಸಮಿತಿಯ ಪ್ರಚಾರ ಕಾರ್ಯದರ್ಶಿ ಎ. ರಾಜೇಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸುಖೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.