ಬೆಂಗಳೂರು: ಚೀನಾದ ವುಹಾನ್ ನಗರದಲ್ಲಿ ಪತ್ತೆಯಾಗಿರುವ ನೋವೆಲ್ ಕೊರೋನಾ ವೈರಸ್ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಸೂಚನೆ ನೀಡಿದ್ದಾರೆ.
ಬೆಂಗಳೂರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಗುರುವಾರ ಸಭೆ ನಡೆಸಿದ ಇಲಾಖೆಯ ಹಿರಿಯ ಅಧಿಕಾರಿಗಳು, ಚೀನಾದ ವುಹಾನ್ ನಗರ, ಜಪಾನ್, ತೈವಾನ್, ದಕ್ಷಿಣ ಕೋರಿಯಾ ಭಾಗದಿಂದ ಕರ್ನಾಟಕಕ್ಕೆ ಬರುವವರ ಮೇಲೆ ನಿಗಾವಹಿಸಿ ಆರೋಗ್ಯ ತಪಾಸಣೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.
ಶನಿವಾರ ವುಹಾನ್ ನಗರದಿಂದ ನಾಲ್ವರು ಬೆಂಗಳೂರಿಗೆ ಬಂದಿದ್ದು ಅವರ ಆರೋಗ್ಯ ತಪಾಸಣೆ ಸಹ ನಡೆಸಲಾಗಿದ್ದು ವೈರಸ್ ಸೋಂಕು ತಾಕಿಲ್ಲ ಎಂದು ದೃಢಪಟ್ಟಿದೆ ಎಂದು ಹೇಳಲಾಗಿದೆ.
ಇದೇ ರೀತಿ ಆ ಭಾಗದಿಂದ ಬರುವ ಪ್ರವಾಸಿಗರು ಸೇರಿದಂತೆ ಪ್ರಯಾಣಿಕರಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡರೆ ಆರೋಗ್ಯ ತಪಾಸಣೆಗೆ ಒಳಪಡುವಂತೆ ವಿಮಾನ ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿದೆ.
ಸೋಂಕು ಪತ್ತೆಯಾದರೆ ಚಿಕಿತ್ಸೆಗಾಗಿ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ, ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಇಲಾಖೆ ವತಿಯಿಂದ ವಿಶೇಷ ಕೊಠಡಿ ಕಾಯ್ದಿರಿಸಲಾಗಿದೆ.