ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹತ್ಯೆಗೆ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ಹಾಗೂ ಪಾಕಿಸ್ತಾನ ಮೂಲದ ಗೂಡಚಾರ ಸಂಸ್ಥೆ ಐಎಸ್‌ಐ ಸಂಚು ರೂಪಿಸಿದೆ ಎಂಬ ಸ್ಫೋಟಕ ವಿಚಾರ ಸಂಬಂಧ ಕರ್ನಾಟಕದಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ.
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿ ಹಿಂಪಡೆದಿರುವುದಕ್ಕೆ ಉಗ್ರ ಸಂಘಟನೆ ಈ ಮೂಲಕ ಪ್ರತೀಕಾರಕ್ಕೆ ಮುಂದಾಗಿದ್ದು, ಅಲ್ಲದೆ, ತನ್ನ ಕಾರ್ಯಕರ್ತರ ಮೂಲಕ ದೇಶದ ಕೆಲವಡೆ ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ, ಅಮೃತಸರ, ಪಾಠಣ್‍ಕೊಟ್ ಸೇರಿ ದೇಶದ ಪ್ರಮುಖ ಸ್ಥಳಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಈ ಬೆನ್ನಲ್ಲೇ ಬೆಂಗಳೂರು ಸೇರಿ ರಾಜ್ಯದಲ್ಲಿಯೂ ಅಲರ್ಟ್ ಘೋಷಣೆ ಮಾಡಲಾಗಿದೆ. ಗುಪ್ತಚರ ದಳ, ಆಂತರಿಕ ಭದ್ರತಾ ದಳ, ಸ್ಥಳೀಯ ಪೊಲೀಸರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಮುಖವಾಗಿ ಬೆಂಗಳೂರಿಗೆ ಆಗಮಿಸುವ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಬೇಕು. ಜತೆಗೆ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ನಗರ ಹಾಗೂ ರಾಜ್ಯದಲ್ಲಿರುವ ಸ್ಲಿಪರ್ ಸೆಲ್‌ಗಳ ಕಾರ್ಯಚಟುವಟಿಕೆಗಳ ಮೇಲೆ ಹದ್ದಿನಕಣ್ಣಿಡಬೇಕು.
ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಳ ಮಾಡುವುದರ ಜತೆಗೆ, ಆ ವ್ಯಾಪ್ತಿಯ ಪೊಲೀಸ್ ಠಾಣೆ ಸಿಬ್ಬಂದಿ ಬಿಟ್ ವ್ಯವಸ್ಥೆ ಅಧಿಕ ಮಾಡುವಂತೆ ಸೂಚಿಸಲಾಗಿದೆ. ಈ ನಡುವೆ ಕರಾವಳಿ ಭದ್ರತಾ ಪಡೆಗೂ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದು, ಜಲಮಾರ್ಗವಾಗಿ ಆಗಮಿಸುವ ವ್ಯಕ್ತಿಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು, ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರ ಹಿನ್ನೆಲೆ ಪರಿಶೀಲಿಸಬೇಕು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.