Advertisement

ಅಲೆಮಾರಿ ಸಮುದಾಯ ನಿವಾಸಿಗಳಿಗೆ ಹಕ್ಕು ಪತ್ರ ನೀಡಿ

01:54 PM Feb 11, 2020 | Suhan S |

ಬಳ್ಳಾರಿ: ನಗರದ ಐದನೇ ವಾರ್ಡ್‌ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಅಲೆಮಾರಿಜನಾಂಗದವರಿಗೆ ಕೂಡಲೇ ನಿವೇಶನಗಳಿಗೆ ಹಕ್ಕುಪತ್ರ ಸೇರಿ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

Advertisement

ಬಳ್ಳಾರಿ ಮಹಾನಗರ ಪಾಲಿಕೆಯ 5ನೇ ವಾರ್ಡ್‌ ವ್ಯಾಪ್ತಿಯಲ್ಲಿನ ಕಾಕರ್ಲತೋಟ ಬಳಿಯ ಹನುಮಾನ್‌ ನಗರದಲ್ಲಿ ಅಲೆಮಾರಿ ಜನಾಂಗದ ನಿವಾಸಿಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಇಲ್ಲಿನ ಕಾಕರ್ಲತೋಟದ ಹನುಮಾನ್‌ ನಗರದಲ್ಲಿ ಹಲವಾರು ವರ್ಷಗಳಿಂದ ಅಲೆಮಾರಿ ಜನಾಂಗದ ಸುಡುಗಾಡು ಸಿದ್ದರು, ಬುಡುಗ ಜಂಗಮರು ವಾಸಿಸುತ್ತಿದ್ದಾರೆ. ಕೇವಲ ಗುಡಿಸಲು, ಟೆಂಟುಗಳಲ್ಲೇ 47 ಕುಟುಂಬಗಳು ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಜೀವನ ಸಾಗಿಸುತ್ತಿವೆ. ಕಳೆದ 15 ವರ್ಷಗಳ ಹಿಂದೆಯೇ ಕೊಳಚೆ ನಿರ್ಮೂಲನೆ ಮಂಡಳಿಯಿಂದ ಸರ್ಕಾರಿ ಜಮೀನಿನಲ್ಲಿ ವಾಸವಿರುವ ಸುಡುಗಾಡು ಸಿದ್ದರ 35 ಕುಟುಂಬಗಳಿಗೆ ಮತ್ತು ಬುಡುಗ ಜಂಗಮ ಸಮುದಾಯದ 12 ಕುಟುಂಬಗಳಿಗೆ 20/30 ಅಳತೆಯ ನಿವೇಶನ ಹಂಚಲು ಕ್ರಮಕೈಗೊಳ್ಳಲಾಗಿದ್ದು, ನಿವೇಶನವನ್ನೂ ಗುರುತಿಸಲಾಗಿದೆ. ಆದರೆ, ಅದು ಈ ವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಹಕ್ಕುಗಳನ್ನು ವಿತರಿಸಿಲ್ಲ. ಮನೆಗಳನ್ನೂ ನಿರ್ಮಿಸಿಕೊಟ್ಟಿಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಂಡು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು. ಶೀಘ್ರ ಸ್ಥಳ ಪರಿಶೀಲನೆ ನಡೆಸಿ ನಿವೇಶನಗಳನ್ನು ಹಂಚಿ, ಹಕ್ಕುಪತ್ರ ನೀಡಬೇಕು. ಸಮುದಾಯಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕಸಾಮಾಜಿಕ ನ್ಯಾಯವನ್ನು ಕಾಪಾಡಬೇಕು. ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡದ ದೌರ್ಜನ್ಯ ಸಮಿತಿಗೆ ಎಸ್ಸಿ,ಎಸ್ಟಿ, ಅಲೆಮಾರಿ ಸಮುದಾಯದ ಇಬ್ಬರನ್ನು ನೇಮಿಸಿಕೊಳ್ಳಬೇಕು. ಹನುಮಾನ್‌ ನಗರದಲ್ಲಿ ವಾಸಿಸುತ್ತಿರುವ ಸುಡುಗಾಡು ಸಿದ್ದರ ಕುಟುಂಬಗಳ ನಿವಾಸಿಗಳಿಗೆ ಜಾತಿಪ್ರಮಾಣ ಪತ್ರ ನೀಡುವಲ್ಲಿ ಆಗುತ್ತಿರುವ ಕಿರುಕುಳವನ್ನು ತಡೆಯಬೇಕು. ಜಾತಿ ಪ್ರಮಾಣ ಪತ್ರ ನೀಡುವಂತೆ ಜಿಲ್ಲೆಯ ಎಲ್ಲ ತಹಸೀಲ್ದಾರರಿಗೆ ನಿರ್ದೇಶನ ನೀಡಬೇಕು. ನಿವೇಶನ ರಹಿತವಾಗಿ ನಗರದಲ್ಲಿ ವಾಸಿಸುತ್ತಿರುವ ಸಿಳ್ಳೆಕ್ಯಾತ, ಕೊರಚ, ಕೊರಮ, ಚೆನ್ನದಾಸರು ಜನಾಂಗದವರಿಗೆ ಸರ್ಕಾರ ಜಮೀನು ಅಥವಾ ಖಾಸಗಿ ಜಮೀನು ಗುರುತಿಸಿ ಶೀಘ್ರವೇ ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ವೈ. ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ, ಖಜಾಂಚಿ ಕೆ. ರಂಗಸ್ವಾಮಿ, ಕೆ. ಆನಂದ್‌, ಎಸ್‌.ಬಿ. ಮಂಜಪ್ಪ, ರಮಣಪ್ಪ ಭಜಂತ್ರಿ, ಸಣ್ಣ ಅಂಜಿನಿ, ತಿಮ್ಮಯ್ಯ, ಹನುಮಂತ, ಶ್ರೀನಿವಾಸ್‌ ಸೇರಿದಂತೆ ಸಮುದಾಯದ ನೂರಾರು ಜನರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next