Advertisement
ಹೌದು, ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿ, ಸಿದ್ದಾಪುರ ಭಾಗದಲ್ಲಿಗ ಆಲೆಮನೆ ಹಬ್ಬದ ಸುಗ್ಗಿ. ಪ್ರತಿ ಜನವರಿಯಿಂದ ಮಾರ್ಚ್ ಅಂತ್ಯದವರೆಗೂ ಈ ಭಾಗದಲ್ಲಿ ಕಬ್ಬು ಬೆಳೆದ ರೈತರು ಕಟಾವು ಮಾಡಿ ಹಾಲು ಹಿಂಡಿ ಜೋನಿ ಬೆಲ್ಲ ಮಾಡುವ ಸಮಯ. ಪೂರ್ತಿ ಆಲೆಮನೆ ಬೆಲ್ಲದ ವಿಶಿಷ್ಟ ಪರಿಮಳದಿಂದ ಕೂಡಿರುತ್ತದೆ.
Related Articles
Advertisement
ದಿನವಿಡೀ ಕ್ರಶರ್‌ಗಳಲ್ಲಿ ಕಬ್ಬಿನ ಹಾಲು ಹಿಂಡುವುದು, ದೊಡ್ಡ ದೊಡ್ಡ ಕೊಪ್ಪರಿಗೆಯಲ್ಲಿ ಕಬ್ಬಿನಹಾಲು ಕುದಿಸಿ ಜೋನಿ ಬೆಲ್ಲ ತಯಾರಿಸುವುದು, ಬೆಲ್ಲ ಹದಗೊಳ್ಳುವ ಹಂತದಲ್ಲಿ ಕೊಪ್ಪರಿಗೆಯನ್ನು ಉದ್ದನೆಯ ಬಿದಿರಿನ ಬೊಂಬಿನ ಸಹಾಯದಿಂದ ನಾಲ್ಕಾರು ಜನ ಒಟ್ಟಾಗಿ ಒಲೆಯಿಂದ ಇಳಿಸಿ ಪಾಕದ ಮರಿಗೆಗೆ ಸುರಿಯುವುದು, ಎರಡು-ಮೂರು ಗಂಟೆ ಬಳಿಕ ತಣ್ಣಗಾದ ಜೋನಿ ಬೆಲ್ಲವನ್ನು ಡಬ್ಬಗಳಲ್ಲಿ ತುಂಬುವುದು ಹೀಗೆ ಆಲೆಮನೆಯಲ್ಲಿ ವೈವಿಧ್ಯಮಯ ಕೆಲಸ ಕಂಡುಬರುತ್ತದೆ.
ಇಲ್ಲಿ ತರ ತರದ ಕಬ್ಬಿನ ಹಾಲು ಸಹ ಲಭ್ಯವಿರುತ್ತದೆ. ಸಾಂಪ್ರದಾಯಿಕ ಹಾಗೂ ಜೈವಿಕ ಗೊಬ್ಬರದಿಂದ ಕೃಷಿ ಮಾಡಿದ ಕಬ್ಬುಗಳು ಬಲು ರುಚಿಯಾಗಿರುತ್ತದೆ. ಹೀಗಾಗಿ ಕಬ್ಬಿನ ಹಾಲಿನ ಜತೆ ಶುಂಠಿ, ನಿಂಬೆ ಹಣ್ಣು,ನೆಲ್ಲಿಕಾಯಿ ಮಿಶಿತ ಕಬ್ಬಿನ ಹಾಲು, ಪುದೀನ, ಸೊಗದೆ ಬೇರು, ಮಜ್ಜಿಗೆ ಹುಲ್ಲು, ಒಂದೆಲಗ ಹೀಗೆ ಔಷಧೀಯ ಗುಣವಿರುವ ಕಬ್ಬಿನ ಹಾಲು ಸವಿಯಲು ಸಿಗುತ್ತದೆ. ಇದರ ಜತೆ ಮಲೆನಾಡಿನ ಪ್ರಸಿದ್ಧ ಅಪ್ಪೆ ಮಿಡಿ, ಜೀರಿಗೆ ಮಿಡಿ ಮಾವಿನ ಉಪ್ಪಿನ ಕಾಯಿ,ಮಂಡಕ್ಕಿ ಮಿರ್ಚಿ ರುಚಿ ಹೆಚ್ಚಿಸುತ್ತದೆ.
ಇನ್ನು ಕೆಲವು ಸಂಘ- ಸಂಸ್ಥೆಗಳೂ ಸಹ ಆಲೆಮನೆ ಹಬ್ಬವನ್ನು ಏರ್ಪಡಿಸುತ್ತವೆ ಅಲ್ಲಿ ಕಬ್ಬಿನ ಹಾಲಿನ ತರೆಹವಾರಿ ತಿಂಡಿಗಳಾದ ಮಣ್ಣಿ, ತೋಡೆದೇವು ಇನ್ನಷ್ಟು ಬಗೆಯ ಖಾದ್ಯಗಳು ಲಭ್ಯವಿರುತ್ತದೆ. ಆಲೆಮನೆ ತಿಂಡಿಪ್ರಿಯರ ಸ್ವರ್ಗವೆಂದರೆ ತಪ್ಪಾಗಲಾರದು. ಸಂಪೂರ್ಣ ಆಧುನಿಕರಣವಾಗಿರುವ ಕಾಲದಲ್ಲಿಯೂ ಸಹ ಇನ್ನೂ ಕೆಲವು ಕಡೆ ಕೆಲವರು ಸಂಪ್ರದಾಯ ಮರೆಯದೆ ಆಲೆಮನೆ ಏರ್ಪಡಿಸುತ್ತಾರೆ. ಜೀವನದಲ್ಲಿ ಒಮ್ಮೆಯದರೂ ಆಲೆಮನೆಯ ಬಿಸಿ ಬಿಸಿ ನೊರೆ ಬೆಲ್ಲದ ಘಮ, ರುಚಿಯನ್ನು ಸವಿಯಲೇ ಬೇಕು..ಏನಂತೀರಿ?
-ಪೂಜಾ ಆರ್. ಹೆಗಡೆ
ಮೇಲಿನಮಣ್ಣಿಗೆ