Advertisement

ವ್ಯಾಪಾರ- ವಹಿವಾಟು ನಡೆಸಲು ತೀರ್ಮಾನ

04:05 PM Apr 27, 2020 | Naveen |

ಆಲ್ದೂರು: ಪಟ್ಟಣದಲ್ಲಿ ಅಂಗಡಿಗಳ ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಲು ಆಲ್ದೂರು ಠಾಣೆಯಲ್ಲಿ ಪಿಎಸ್‌ಐ ಸುನಿತಾ ಅವರ ನೇತೃತ್ವದಲ್ಲಿ ಶನಿವಾರ ಸಂಜೆ ವರ್ತಕರ ಸಂಘ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ- ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಕೊರೊನಾ ಸೋಂಕಿನಿಂದ ಮುಕ್ತವಾಗಿರುವ ಹಸಿರು ಪಟ್ಟಿಯಲ್ಲಿರುವ ಜಿಲ್ಲೆಗಳಿಗೆ ಲಾಕ್‌ ಡೌನ್‌ನಿಂದ ವಿನಾಯಿತಿ ನೀಡಿದ್ದು ಶನಿವಾರ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಬಹುತೇಕ ಅಂಗಡಿಗಳು ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದು ಜನದಟ್ಟಣೆ ಹೆಚ್ಚಾಗಿತ್ತು.

ಪೊಲೀಸರು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಅಂಗಡಿಗಳ ಬಾಗಿಲು ಮುಚ್ಚಿಸಿದ್ದರು. ಪಟ್ಟಣದಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ವ್ಯವಹಾರ ಮಾಡಲು ಸಮಯ ನಿಗದಿಗೊಳಿಸುವ ನಿಟ್ಟಿನಲ್ಲಿ ಠಾಣಾಧಿಕಾರಿ ಸುನಿತಾ ಅವರು ಶನಿವಾರ ಸಂಜೆ ವರ್ತಕರ ಸಂಘದವರ ಜೊತೆ ಸಭೆ ನಡೆಸಿ ಹಲವು ವಿಚಾರಗಳನ್ನು ಚರ್ಚಿಸಿ ಕೆಲವು ನಿರ್ಣಯ ಕೈಗೊಂಡರು. ಅಂತಿಮವಾಗಿ ಎಲ್ಲರ ಸಹಮತದೊಂದಿಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ತೀರ್ಮಾನಿಸಲಾಯಿತು.

ಆಲ್ದೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೋಮೇಗೌಡ ,ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಖಜಾಂಚಿ ಮೂರ್ತಿ, ಕಾರ್ಯದರ್ಶಿ ರಾಜೇಶ್‌, ಸದಸ್ಯರಾದ ರವಿಕುಮಾರ್‌, ರಾಜೀವ್‌, ನಾಗೇಂದ್ರ, ಜಯಪ್ರಕಾಶ್‌, ಕೃಷ್ಣ, ರಾಜು, ಚಂದ್ರು, ವಿಜಯ್‌ , ಶಫಿಕ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next