Advertisement

ಮದ್ಯದಿಂದ ಬರುವುದು ಪಾಪದ ಹಣ

11:52 AM Jan 05, 2017 | Team Udayavani |

ಬೆಂಗಳೂರು: “ಮದ್ಯ ಮಾರಾಟದಿಂದ ಬರುವುದೆಲ್ಲ ಪಾಪದ ಹಣ. ಆ ಪಾಪದ ಹಣದಿಂದ ಆಡಳಿತ ನಡೆಸುವುದು ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಸರಿಯಲ್ಲ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಕರ್ನಾಟಕ ಮದ್ಯಪಾನ ನಿಷೇಧ ಆಂದೋಲನ ಹಾಗೂ ಕರ್ನಾಟಕ ಯೋಗ ಬಸವ ಪ್ರತಿಷ್ಠಾನ ಕರ್ನಾಟಕದಲ್ಲಿ ಸಂಪೂರ್ಣ ಪಾನ ನಿಷೇಧಕ್ಕೆ ಆಗ್ರಹಿಸಿ ಬಸವಕಲ್ಯಾಣದಿಂದ ಬೆಂಗಳೂರುವರೆಗೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದ ಸಮಾಪನ ಸಂದರ್ಭದಲ್ಲಿ ಬುಧವಾರ ನಗರದ ಮೌರ್ಯ ವೃತ್ತದಲ್ಲಿ ಆಯೋಜಿಸಿದ್ದ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದ ಸ್ವಾಸ್ಥ್ಯ ಹಾಗೂ ಕುಟುಂಬಗಳ ನೆಮ್ಮದಿ ಹಾಳು ಮಾಡುವ ಮದ್ಯದಿಂದ ಸಂಗ್ರಹಿಸಿದ ಹಣದಿಂದ ಆಡಳಿತ ನಡೆಸುವುದು ಹಾಗೂ ಅಂತಹ ಹಣದಿಂದ ಜನರ ಕಲ್ಯಾಣದ ಕಾರ್ಯಕ್ರಮಗಳನ್ನು ಮಾಡುವುದು ಸರಿಯಲ್ಲ. ಮದ್ಯಪಾನ ಒಂದು ಸಾಮಾಜಿಕ ಪಿಡುಗು. ಹಾಗಾಗಿ ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ದೊರೆಸ್ವಾಮಿ ಆಗ್ರಹಿಸಿದರು.

ಅಭಿವೃದ್ಧಿಯ ಹೆಸರಲ್ಲಿ ಮದ್ಯದ ಅಂಗಡಿಗಳನ್ನು ಹೆಚ್ಚಿಸುವುದು ಸರಿಯಲ್ಲ. ಜನರನ್ನು ಚಟದ ದಾಸರನ್ನಾಗಿ ಮಾಡಿ ಅವರ ಜೇಬುಗಳನ್ನು ಕತ್ತರಿಸಿ ಆ ಹಣದಿಂದ ಯಾವ ಸರ್ಕಾರಗಳು ಅಭಿವೃದ್ಧಿ ಕಾರ್ಯಗಳನ್ನು ಮಾಡಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುವ ಮೊದಲು ಮದ್ಯಪಾನ ನಿಷೇಧ ಮಾಡುವುದಾಗಿ ಹೇಳಿದ್ದರು. ಆದರೆ, ಈಗ ಮದ್ಯದ ಅಂಗಡಿಗಳನ್ನು ಹೆಚ್ಚಿಸುವ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದರು.

ಕುಡಿತದಿಂದ ಅನೇಕ ಮಾರಕ ರೋಗಗಳು ಬರುತ್ತವೆ. ಹೀಗಾಗಿ ಸರ್ಕಾರ ಆಸ್ಪತ್ರೆಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಮದ್ಯದಿಂದ ಬರುವ ಹಣಕ್ಕಿಂತ ಆಸ್ಪತ್ರೆಗಳಿಗೆ ಖರ್ಚು ಮಾಡುವ ಹಣದ ಪ್ರಮಾಣ ಹೆಚ್ಚಿರುತ್ತದೆ ಅನ್ನುವುದಕ್ಕೆ ಅಂಕಿ-ಅಂಶಗಳ ಸಾಕ್ಷಿ. ಮದ್ಯಪಾನ ನಿಷೇಧ ಆಂದೋಲನ ತೀವ್ರಗೊಳಿಸಬೇಕು.

Advertisement

ಈ ಆಂದೋಲನ ಮೊದಲಿಗೆ ಆರಂಭವಾಗಿದ್ದು ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯಲ್ಲಿ. ಆದ್ದರಿಂದ ಮೊದಲು ಈ ಎರಡು ಜಿಲ್ಲೆಗಳನ್ನು ಮದ್ಯಪಾನ ಮುಕ್ತವನ್ನಾಗಿ ಮಾಡಬೇಕು. ಬಳಿಕ ಆಂದೋಲನವನ್ನು ಉಳಿದ ಜಿಲ್ಲೆಗಳಿಗೆ ವಿಸ್ತರಿಸಬೇಕು ಎಂದು ದೊರೆಸ್ವಾಮಿ ಸಲಹೆ ನೀಡಿದರು.

ನಿಲುವು ಸ್ಪಷ್ಟಪಡಿಸಿ: ಆಂದೋಲನದ ಮುಖಂಡ ಅಭಯಕುಮಾರ್‌ ಮಾತನಾಡಿ, 2018ರ ಚುನಾವಣೆಯ ವೇಳೆಗೆ ಎಲ್ಲಾ ರಾಜಕೀಯ ಪಕ್ಷಗಳು ಮದ್ಯಪಾನ ನಿಷೇಧದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಅದರ ಆಧಾರದ ಮೇಲೆ ಚುನಾವಣಾ ಸಂದರ್ಭದಲ್ಲಿ ಯಾವ ಪಕ್ಷಗಳಿಗೆ ಮತ ಹಾಕಬೇಕು ಎಂದು ನಾವು ಸಾರ್ವಜನಿಕರಲ್ಲಿ ಮನವಿ ಮಾಡುವುದರ ಜೊತೆಗೆ ವ್ಯಾಪಕ ಜಾಗೃತಿ ಮೂಡಿಸುತ್ತೇವೆ ಎಂದರು.

ಶಾಸಕ ಬಿ.ಆರ್‌. ಪಾಟೀಲ, ಸಾಮಾಜಿಕ ಹೋರಾಟಗಾರ ರವಿಕೃಷ್ಣಾರೆಡ್ಡಿ, ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಲಿಬಾಬಾ, ಆಂದೋಲನದ ಮುಖಂಡರಾದ ಸಿ.ಆರ್‌. ಭಾಸ್ಕರ್‌, ಲಿಂಗೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next