ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನೂತನ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮದ್ಯದ ಹೊಳೆಯೆ ಹರಿದಿದ್ದು, ಕೇವಲ ವರ್ಷಾಂತ್ಯದ ಕೊನೆಯ ಡಿ. 30, 31 ರಂದು 2 ದಿನದಲ್ಲಿ ಬರೋಬ್ಬರಿ 8.63 ಕೋಟಿ ರೂ. ಮೌಲ್ಯದಷ್ಟು ದಾಖಲೆಯ ಮದ್ಯ ಜಿಲ್ಲಾದ್ಯಂತ ಮಾರಾಟಗೊಂಡಿದೆ.
ಹೌದು, 2022ನೇ ಸಾಲಿಗೆ ಹೋಲಿಸಿದರೆ 2023ನೇ ಸಾಲಿನಲ್ಲಿ ಬರೋಬ್ಬರಿ 1 ಕೋಟಿಯಷ್ಟು ಅಧಿಕ ಮದ್ಯ ಹಾಗೂ ಬಿಯರ್ ಜಿಲ್ಲೆಯಲ್ಲಿ ಮಾರಾಟ ಆಗಿದ್ದು,ಜಿಲ್ಲೆಯಲ್ಲಿ ಬಿಯರ್ ಕುಡಿಯುವುದರಗಿಂತ ಮದ್ಯ ಪ್ರಿಯರೇ ಸಂಖ್ಯೆಯೆ ಹೆಚ್ಚಾಗಿರುವುದು ಅಬಕಾರಿ ಇಲಾಖೆ ನೀಡಿರುವ ಅಂಕಿ, ಅಂಶಗಳಿಂದ ದೃಢಪಟ್ಟಿದೆ.
8.63 ಕೋಟಿ ಮದ್ಯ ಮಾರಾಟ: 2023 ನೇ ಸಾಲಿನ ಹೊಸ ವರ್ಷಕ್ಕೆ ಜಿಲ್ಲಾದ್ಯಂತ ಮಾರಾಟಗೊಂಡ ಮದ್ಯದ ಲೆಕ್ಕಾಚಾರ ನೋಡಿದರೆ ಈ ಹಿಂದಿನ ಹಲವು ವರ್ಷಗಳ ದಾಖಲೆಗಳನ್ನು ಮೀರಿ ಈ ಬಾರಿ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮದ್ಯ ಮಾರಾಟಗೊಂಡಿದ್ದು, ಈ ವರ್ಷ ಕೇವಲ 2 ದಿನದಲ್ಲಿ ಒಟ್ಟು 8,63,94,644.8 ರೂ.ಕೋಟಿ ಮೌಲ್ಯದ ಮದ್ಯ ಮಾರಾಟಗೊಂಡಿದೆ. ಕಳೆದ ಬಾರಿ ಇದೇ ಸಮಯದಲ್ಲಿ ಕೇವಲ 7.70 ಕೋಟಿ ಮದ್ಯ ಮಾತ್ರ ಮಾರಾಟಗೊಂಡಿತ್ತು. ಆದರೆ ಈ ವರ್ಷ ಮದ್ಯ ಮಾರಾಟ ಪ್ರಮಾಣ ಹೇರಳವಾಗಿ ಹೆಚ್ಚಾಗಿದೆ. ಆ ಪೈಕಿ ಭಾರತೀಯ ಮದ್ಯ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಗೊಂಡರೆ ಬೀಯರ್ ಕಡಿಮೆ ಪ್ರಮಾಣದಲ್ಲಿ ಮಾರಾಟಗೊಂಡಿರುವುದು ಜಿಲ್ಲೆಯಲ್ಲಿ ಕಂಡು ಬಂದಿದೆ.
ಇನ್ನೂ ಮದ್ಯ ಮಾರಾಟದಲ್ಲಿ ಆಂಧ್ರದ ಗುಡಿಯಲ್ಲಿರುವ ಗೌರಿಬಿದನೂರು ತಾಲೂಕು ಮೊದಲ ಸ್ಥಾನದಲ್ಲಿದ್ದರೆ 2ನೇ ಸ್ಥಾನದಲ್ಲಿ ಅತಿ ಹಿಂದುಳಿದ ತಾಲೂಕಾದ ಬಾಗೇಪಲ್ಲಿ, 3ನೇ ಸ್ಥಾನದಲ್ಲಿ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ, 4ನೇ ಸ್ಥಾನಕ್ಕೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಇದ್ದು ಕೊನೆ ಸ್ಥಾನದಲ್ಲಿ ರೇಷ್ಮೆ ನಗರಿ ಶಿಡ್ಲಘಟ್ಟ ತಾಲೂಕು ಇದೆ.
ಜಿಲ್ಲೆಯಲ್ಲಿ ಈ ವರ್ಷ ಮಳೆ ಬೆಳೆ ಇಲ್ಲದೇ ತೀವ್ರ ಬರಗಾಲ ಇದ್ದು, ರೈತಾಪಿ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೂ ಜಿಲ್ಲೆಯಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಮದ್ಯದ ಹೊಳೆ ಹರಿಯುವುದು ಎದ್ದು ಕಾಣುತ್ತಿದೆ. ಇದರಿಂದ ಎರಡೇ ದಿನದಲ್ಲಿ ಜಿಲ್ಲೆಯ ಮದ್ಯಪ್ರಿಯರಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 8.63 ಕೋಟಿಗೂ ಅಧಿಕ ಮೊತ್ತ ಹರಿದು ಹೋಗಿದೆ.
ಜಿಲ್ಲೆಯಲ್ಲಿ ಹೊಸ ವರ್ಷದ ಹಿನ್ನಲೆಯಲ್ಲಿ ಡಿ.30 ಹಾಗೂ 31 ರಂದು ಒಟ್ಟು 8,63,97,644.8 ಮೌಲ್ಯದಷ್ಟು ಮದ್ಯ ಹಾಗೂ ಬಿಯರ್ ಮಾರಾಟಗೊಂಡಿದೆ. ಆ ಪೈಕಿ ಐಎಂಎಲ್ 16,739 ಬಾಕ್ಸ್ (1,44,624.96 ಲೀ) ಹಾಗೂ ಬಿಯರ್ 6,257 ಬಾಕ್ಸ್ (56,313 ಲೀ) ಮಾರಾಟಗೊಂಡಿದೆ.
●ಆಶಾಲತಾ , ಅಬಕಾರಿ ಉಪಆಯುಕ್ತರು, ಚಿಕ್ಕಬಳ್ಳಾಪುರ ಜಿಲ್ಲೆ
– ಕಾಗತಿ ನಾಗರಾಜಪ್ಪ