ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬರ ಹಾಗೂ ನೆರೆ ಆವರಿಸಿದ್ದರೂ ಮದ್ಯ ಮಾರಾಟದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮೊದಲಿನಂತೆ ಮದ್ಯ ಮಾರಾಟ ನಡೆ ಯುತ್ತಿದೆ. ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಎಂಎಸ್‌ಐಎಲ್ ಮದ್ಯದಂಗಡಿಗಳನ್ನು ತೆರೆಯಲು ಪರವಾನಿಗೆ ನೀಡಲಾಗುವುದು ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿ, ನೆರೆ ಸಂತ್ರಸ್ತರಿಗೆ ಸಾಕಷ್ಟು ಅನುದಾನ ಬಿಡುಗಡೆ ಆಗಿದೆ. ಪಕ್ಷಪಾತ ಇಲ್ಲದೇ ಸಿಎಂ ಯಡಿಯೂರಪ್ಪ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎಂದರು.
ಜರ್ಮನ್ ಅಧ್ಯಯನ ಪ್ರವಾಸ: ಕೈಗಾರಿಕೆಗಳ ಬಗ್ಗೆ ಅಧ್ಯಯನ ನಡೆಸಲು ರಾಜ್ಯದ ಐಟಿಐ ವಿದ್ಯಾರ್ಥಿಗಳಿಗೆ ಜರ್ಮನ್ ಪ್ರವಾಸ ಅಧ್ಯಯನ ಏರ್ಪಡಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಜರ್ಮನಿಯಲ್ಲಿಯೇ ಉದ್ಯೋಗ ಮಾಡಲು ಐಟಿಐ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಇಚ್ಚಿಸಿದರೆ ಅದಕ್ಕೂ ಸರ್ಕಾರ ಜರ್ಮನ್ ದೇಶದೊಂದಿಗೆ ಮಾತುಕತೆ ನಡೆಸಲಿದೆ ಎಂದರು.
ಇಡೀ ಜಗತ್ತಿನಲ್ಲಿ ಜರ್ಮನ್ ದೇಶ ಕೈಗಾರಿಕಾ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಆ ಕಾರಣಕ್ಕಾಗಿ ಅಲ್ಲಿನ ಕೈಗಾರಿಕೆಗಳ ಕಾರ್ಯ ಚಟುವಟಿಕೆಗಳ ಬಗ್ಗೆ ರಾಜ್ಯದ ಐಟಿಐ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಅಧ್ಯಯನ ಅಗತ್ಯವಾಗಿದೆ. ಅಲ್ಲಿನ ವ್ಯವಸ್ಥೆಯನ್ನು ನೋಡಿ ಕಲಿಯುವುದು, ರೂಢಿಸಿಕೊಳ್ಳುವುದು ತುಂಬ ಅಗತ್ಯ ವಾಗಿದೆ ಎಂದರು.
ರಾಜ್ಯದಲ್ಲಿ 270 ಸರ್ಕಾರಿ ಐಟಿಐ, 300 ಅನುದಾನಿತ ಐಟಿಐ ಹಾಗೂ 1,111 ಖಾಸಗಿ ಐಟಿಐ ಕಾಲೇಜು ಸೇರಿ ಒಟ್ಟು 2,700ಕ್ಕೂ ಅಧಿಕ ಐಟಿಐಗಳಿವೆ. ಪ್ರಸ್ತುತ ರಾಜ್ಯದಲ್ಲಿ ಶೇ.70ರಷ್ಟು ಮಂದಿಯಷ್ಟೇ ಐಟಿಐ ಬಳಿಕ ಉದ್ಯೋಗ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶೇ.100ರಷ್ಟು ಐಟಿಐ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಉದ್ಯೋಗ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಿದೆ ಎಂದು ಭರವಸೆ ನೀಡಿದರು.
ಸುಧಾಕರ್, ನಾನು ತುಂಬ ಆತ್ಮೀಯರು. ಅವರು ಮುಂದಿನ ಚುನಾವಣೆಯಲ್ಲಿ ಗೆದ್ದು ಮಂತ್ರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಂತ್ರಿಯಾಗಿ ನಮ್ಮ ಜೊತೆ ಕ್ಯಾಬಿನೆಟ್‌ನಲ್ಲಿ ಇರುತ್ತಾರೆ.
-ಎಚ್.ನಾಗೇಶ್, ಸಚಿವ