Advertisement

ಚಿತ್ತಾಪುರದಲ್ಲೂ “ಎಣ್ಣಿ’ಭಾರಿ ತುಟ್ಟಿ!

11:54 AM Dec 14, 2018 | |

ಚಿತ್ತಾಪುರ: ರಾಜ್ಯ ಸರ್ಕಾರವೇನೂ ಸಾರಾಯಿ ಮತ್ತು ಸೇಂದಿ ನಿಷೇಧಿಸಿದೆ. ಆದರೆ ದುಪ್ಪಟ್ಟು ಬೆಲೆಗೆ ಸಿಗುವ ಮದ್ಯ ಮಾರಾಟ ತಡೆಯುವವರ್ಯಾರು ಎಂದು ಮದ್ಯ ಪ್ರಿಯರು ಪ್ರಶ್ನಿಸುತ್ತಾರೆ. ತಾಲೂಕಿನಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಮದ್ಯಪ್ರಿಯರ ಜೇಬಿಗೆ ದಿನನಿತ್ಯ ಕತ್ತರಿ ಹಾಕಲಾಗುತ್ತಿದೆ.

Advertisement

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸಿಎಲ್‌-ಎರಡು ಪರವಾನಗಿ ಪಡೆದ 18, ಸಿಎಲ್‌-ಏಳು, ಪರವಾನಗಿ ಪಡೆದ-ಎರಡು, ಸಿಎಲ್‌-ಒಂಭತ್ತು ಪರವಾನಗಿ ಪಡೆದ-ಒಂಭತ್ತು, ಎಂಎಸ್‌ಐಎಲ್‌ -ಮೂರು ಬಾರ್‌ಗಳಿವೆ. ಬಹುತೇಕ ಮದ್ಯದಂಗಡಿಗಳಲ್ಲಿ ಅಬಕಾರಿ ನಿಯಮಗಳು ಪಾಲನೆಯಾಗುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿ ಕೇಳಿಬರುತ್ತಿವೆ. ಪ್ರತಿ ಮದ್ಯದ ಬಾಟಲಿಗೆ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವುದು ಮುಂದುವರಿದಿದೆ.

ವೈನ್‌ ಶಾಪ್‌ಗ್ಳಲ್ಲಿ ಸಿಗುವ ಪ್ರತಿ ಬ್ರ್ಯಾಂಡನ‌ ಮದ್ಯ ಬಾಟಲಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಎಂಆರ್‌ಪಿ ಬೆಲೆಗೆ ಕೊಡಿ ಎಂದು ಕೇಳಿದವರಿಗೆ ಅಂಗಡಿಯವರು ಉಡಾಫೆ ಉತ್ತರ ನೀಡುವುದು ಸಾಮಾನ್ಯವಾಗಿದೆ ಎನ್ನುವುದು ಮದ್ಯಪ್ರಿಯರ ಆರೋಪ. ಎಂಆರ್‌ಪಿಗೆ ಕೊಡಲು ಆಗೋದಿಲ್ಲ, ಬೇಕಿದ್ರೆ ತಗೋರಿ,
ಇಲ್ಲಾಂದ್ರೆ ಬಿಡಿ ಎನ್ನುವ ಮಾಲಿಕರ ಮಾತಿನ ದಾಟಿಗೆ ಗ್ರಾಹಕರು ಬೇಸತ್ತಿದ್ದಾರೆ. ಪ್ರತಿ ಮದ್ಯದ ಬಾಟಲಿಗೆ 20 ರಿಂದ 30 ಪ್ರತಿಶತ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ಕಿಂಗ್‌μಶರ್‌, ನಾಕೌಟ್‌ ಬಿಯರ್‌ ದರ 125 ರೂ. ಇದ್ದರೆ 150 ರೂ., ಐಬಿಗೆ 138 ರೂ. ಬದಲಿಗೆ 170 ರೂ., ಎಂಸಿ ವಿಸ್ಕಿ 138 ರೂ. ಇದ್ದರೆ 170ರೂ., 8 ಪಿಎಂ 68 ರೂ. ಇದ್ದರೆ 90 ರೂ., ಬಿಪಿ 82 ರೂ. ಇದ್ದರೆ 100ರೂ., ರಾಯಲ್‌ ಸ್ಟಾಗ್‌ 208 ರೂ. ಬದಲಿಗೆ 230 ರೂ. ಸೇರಿದಂತೆ ಪ್ರತಿ ಬ್ರ್ಯಾಂಡ್ ಮದ್ಯಕ್ಕೆ 20ರೂ. ದಿಂದ 30 ರೂ. ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ.

ಪ್ರತಿ ಮದ್ಯದ ಅಂಗಡಿಗಳಲ್ಲಿ ಎಂಆರ್‌ಪಿ ದರದ ಬೋರ್ಡ್‌ ಹಾಕುವಂತೆ ಸೂಚಿಸಿದ್ದರೂ ಯಾವುದೇ ಅಂಗಡಿಗಳು ನಿಯಮ ಪಾಲಿಸುತ್ತಿಲ್ಲ. ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೆ, ಬಿಲ್‌ ಪಡೆದು ತನ್ನಿ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಯಾವುದೇ ಮದ್ಯದಂಗಡಿಯಲ್ಲಿ ಮದ್ಯ ಖರೀದಿಯ ಬಿಲ್‌ ನೀಡುವುದಿಲ್ಲ ಎಂಬುದು ವಾಸ್ತವ. ಅಬಕಾರಿ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ತಾಲೂಕಿನಲ್ಲಿ ಮದ್ಯ ಮಾರಾಟಗಾರರು ಕೇವಲ ಲಾಭದ ಲೆಕ್ಕಾಚಾರದಲ್ಲಿ ಕಾನೂನು ಗಾಳಿಗೆ ತೂರುತ್ತಿದ್ದಾರೆ.

ನಿಯಮದಂತೆ ಸಾಮಾನ್ಯವಾಗಿ ಕೌಂಟರ್‌ ಸೇಲ್‌ ಅನುಮತಿ ಹೊಂದಿದ ಸಿಎಲ್‌-ಎರಡು ಮದ್ಯದ ಅಂಗಡಿಗಳು ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಬೇಕು. ರಾತ್ರಿ 10:30ಕ್ಕೆ ಬಂದ್‌ ಆಗಬೇಕು ಎನ್ನುವ ನಿಯಮವಿದೆ. ಆದರೆ ತಾಲೂಕು ವ್ಯಾಪ್ತಿಯಲ್ಲಿರುವ ಕೌಂಟರ್‌ ಸೇಲ್‌ ಅಂಗಡಿಗಳು ಸೂರ್ಯೋದಯಕ್ಕೆ ಮುಂಚೆಯೇ ತೆರೆದು ರಾತ್ರಿ 12 ಗಂಟೆ ವರೆಗೂ ಮೀರಿ ವ್ಯಾಪಾರ ನಡೆಸುತ್ತಿವೆ. ಆದರೂ ಅಬಕಾರಿ ಅಧಿಕಾರಿಗಳು ಇತ್ತ ಕಣ್ಣು ಹಾಯಿಸುತ್ತಿಲ್ಲ.

Advertisement

ಅಲ್ಲದೇ ಸಿಎಲ್‌-ಎರಡು ಅಂಗಡಿಗಳು ಕೇವಲ ಕೌಂಟರ್‌ ಮಾರಾಟ ಮಾಡಬೇಕು. ಆದರೆ ಅಂಗಡಿಗಳ ಪಕ್ಕದಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯೊಂದಿಗೆ ಕೆಲಸಗಾರರ ಮೂಲಕ ರಾಜಾರೋಷವಾಗಿ ಮದ್ಯದ ಜತೆಯೇ ತಿಂಡಿ, ಸಿಗರೇಟ್‌, ಚಿಪ್ಸ್‌ ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಅಬಕಾರಿ ಇಲಾಖೆಗೆ ಮಾಮೂಲು ನೀಡಲಾಗುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಸಿಎಲ್‌-7, ಸಿಎಲ್‌-9 ಮದ್ಯದ ಅಂಗಡಿಗಳಲ್ಲೂ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.

ಪಟ್ಟಣದಲ್ಲಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಕಲಬೆರೆಕೆ ಮದ್ಯ ಮಾರಾಟ ಜೋರಾಗಿಯೇ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಅಬಕಾರಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕಲಬೆರೆಕೆ ಮದ್ಯ ಮಾರಾಟಗಾರರ ಮೇಲೆ ಹಾಗೂ ಹೆಚ್ಚಿನ ದರ ವಿಧಿಸುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮದ್ಯಪ್ರಿಯರು ಆಗ್ರಹಿಸಿದ್ದಾರೆ.

ದುಪ್ಪಟ್ಟು ಬೆಲೆಗೆ ಕಡಿವಾಣ ಹಾಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಮದ್ಯ ಪ್ರಿಯರಿಂದ ಹಣ ಸಂಗ್ರಹವಾಗುತ್ತದೆ. ಆದ್ದರಿಂದ ಮದ್ಯ ಅಂಗಡಿಯವರು ತಾವು ಏನು ಮಾಡಿದರೂ ನಡೆಯುತ್ತದೆ ಎಂದು ತಿಳಿದು ಮದ್ಯ ಪ್ರಿಯರ ಜೆಬಿಗೆ ಕತ್ತರಿ ಹಾಕುತ್ತಿದ್ದಾರೆ. ಕಡಿಮೆ ಬೆಲೆಗೆ ಸಾರಾಯಿ, ಸೇಂದಿ ಕುಡಿದು ಜೀವನ ಸಾಗಿಸುತ್ತಿದ್ದ ಬಡ
ಕುಟುಂಬದ ಮದ್ಯ ಪ್ರಿಯರು ಇದೀಗ ದುಪ್ಪಟ್ಟು ಬೆಲೆಗೆ ಸಿಗುವ ಮದ್ಯ ಕುಡಿದು ಕೈಸುಟ್ಟುಕೊಳ್ಳುತ್ತಿದ್ದಾರೆ.
ರಮೇಶ ಬಮ್ಮನಳ್ಳಿ , ಸ್ಥಳೀಯ ನಿವಾಸಿ ದರಪಟ್ಟಿ 

ಅಳವಡಿಕೆಗೆ ಸೂಚಿಸುವೆವು ಮದ್ಯದ ಅಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದರೆ, ಗ್ರಾಹಕರು ಮದ್ಯದಂಗಡಿಯಿಂದ ಬಿಲ್‌ ಪಡೆದು ದೂರು ಕೊಟ್ಟರೆ ಮದ್ಯ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮದ್ಯ ಅಂಗಡಿ ಎದುರು ದರ ಪಟ್ಟಿ ಅಳವಡಿಸುವಂತೆ ಸೂಚಿಸಲಾಗುವುದು.
ಕೇದಾರನಾಥ, ಅಬಕಾರಿ ನಿರೀಕ್ಷಕ

„ಎಂ.ಡಿ. ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next