ಬೀದರ್: ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಸಹಿಸದ ಸಂಪತ್ ದೇವಿ ಎಂಬ ದಿಟ್ಟ ಮಹಿಳೆ ಆರಂಭಿಸಿದ್ದ ಹೋರಾಟ ಇಂದು ಬಹುದೊಡ್ಡ “ಗುಲಾಬಿ ಗ್ಯಾಂಗ್’ ಆಗಿ ಬೆಳೆದಿದೆ. ಇಂಥದ್ದೇ ಒಂದು ಮಹಿಳೆಯರ ಗ್ಯಾಂಗ್ ಗಡಿ ತಾಲೂಕು ಔರಾದ್‌ನಲ್ಲಿ ಹುಟ್ಟಿಕೊಂಡಿದೆ. ಕುಡಿದು ಮನೆ ಹತ್ತಿರ ಬರುವವರಿಗೆ ಬೆತ್ತದ ರುಚಿ ತೋರಿಸಿ ನಶೆ ಇಳಿಸುತ್ತಿದೆ!
ಔರಾದ್ ಪಟ್ಟಣದ ಸರ್ವಿಸ್ ಸ್ಟ್ಯಾಂಡ್ ಬಡಾವಣೆಯಲ್ಲಿ ಕುಡುಕರ ಕಾಟದಿಂದ ಬೇಸತ್ತಿದ್ದ ಮಹಿಳಾ ನಿವಾಸಿಗಳೇ “ಗುಲಾಬಿ ಗ್ಯಾಂಗ್’ನಂತೆ ತಂಡ ಮಾಡಿಕೊಂಡಿದ್ದಾರೆ. ಬಡಾವಣೆಯಲ್ಲಿ ಪ್ರತಿ ದಿನ ಕುಡಿದ ಮತ್ತಿನಲ್ಲಿ ಅಡ್ಡಾಡುವುದು, ಪರಸ್ಪರ ಜಗಳ ನಡೆಯುತ್ತಿತ್ತು. ಎಷ್ಟೇ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿರಲಿಲ್ಲ. ಕೊನೆಗೆ ನಾರಿಯರ ಗ್ಯಾಂಗ್ ಈ ಹಿಂಸೆಯ ವಿರುದ್ಧ ಸಿಡಿದೆದ್ದು ಕುಡುಕರಿಗೆ ದೊಣ್ಣೆಯ ರುಚಿ ತೋರಿಸುತ್ತಿದೆ.
ಬುಂದೇಲ್‌ಖಂಡ ಪ್ರಾಂತದಲ್ಲಿ ಒಂದು ದಿನ ಕುಡಿದು ಬಂದು ಪೀಡಿಸುತ್ತಿದ್ದ ತನ್ನ ಗಂಡನಿಗೆ ಸಂಪತ್ ದೇವಿ ಪೊರಕೆ ಸೇವೆ ಮಾಡಿದಕ್ಕೆ ಆತ ಬುದ್ಧಿ ಕಲಿತಿದ್ದನಂತೆ. ಆ ಘಟನೆ ಹಳ್ಳಿಯೆಲ್ಲಾ ಸುದ್ದಿಯಾಗಿ ಆರಂಭವಾದದ್ದೇ ಗುಲಾಬಿ ಗ್ಯಾಂಗ್. ಹುಡುಗಿಯರನ್ನು ಚುಡಾಯಿಸುವವರು, ಪತ್ನಿಯನ್ನು ಹಿಂಸಿಸುವವರ ವಿರುದ್ಧ ಮಹಿಳೆಯರು ಸೆಟೆದು ನಿಲ್ಲುತ್ತಿದ್ದಾರೆ. ಇಂದು ಉತ್ತರ ಪ್ರದೇಶದ ಮೂಲೆ ಮೂಲೆಗಳಲ್ಲಿ ಗುಲಾಬಿ ಕ್ರಾಂತಿ ಹರಡಿದೆ. ಈ ಗ್ಯಾಂಗ್‌ನ ಪ್ರೇರಣೆಯಿಂದ ದೇಶದೆಲ್ಲೆಡೆ ದೌರ್ಜನ್ಯದಿಂದ ಜಾಗೃತರಾಗುತ್ತಿದ್ದಾರೆ. ಅದರ ಪ್ರತಿರೂಪ ಔರಾದ್‌ನಲ್ಲು ಫಲಿಸಿದೆ.
ಬೆನ್ನತ್ತಿ ಹೊಡೆಯುತ್ತಾರೆ!: ಔರಾದ್‌ನ ಸರ್ವಿಸ್ ಸ್ಟ್ಯಾಂಡ್ ಬಡಾವಣೆಯಲ್ಲಿ ಅಂಗಡಿ ಮುಂಗಟ್ಟು ಅಧಿಕ ಸಂಖ್ಯೆಯಲ್ಲಿದ್ದು, 20ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಹನಿ ನೀರಿಗೂ ಇಲ್ಲಿ ಪರದಾಟ ತಪ್ಪಿಲ್ಲ. ಆದರೂ ಎರಡು ಬಾರ್ ಆ್ಯಂಡ್ ರೆಸ್ಟೋರೆಂಟ್ ಭರ್ತಿಯಾಗಿರುತ್ತವೆ! ಪಾನ್ ಶಾಪ್, ಹೊಟೇಲ್‌ಗಳಲ್ಲಿ ಸಹ ಮದ್ಯ ಮಾರಾಟದ ಅಕ್ರಮ ಧಂದೆ ನಡೆಯುತ್ತಿದೆ. ಅಲ್ಲಿ ಕುಡಿದು ಸುತ್ತಲಿನ ಮನೆಗಳ ಹತ್ತಿರ ಬರುತ್ತಿದ್ದ ಕುಡುಕರು ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ, ತಹಶೀಲ್ದಾರ್‌ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮಹಿಳೆಯರು “ಗುಲಾಬಿ ಗ್ಯಾಂಗ್’ನಂತೆ ಹೋರಾಟ ನಡೆಸಿದ್ದಾರೆ.
ದಿಟ್ಟ ಮಹಿಳೆಯೊಬ್ಬಳ ನೇತೃತ್ವದಲ್ಲಿ ಬಡಾವಣೆಯ ನಾರಿಯರು ಒಗ್ಗಟ್ಟಾಗಿ ಕೈಯಲ್ಲಿ ದೊಣ್ಣೆ, ಪೊರಕೆ, ಒಣಕೆ ಹಿಡಿದು ಕುಡಿದು ಬರುವವರಿಗೆ ಎರಡೂ¾ರು ಬಾರಿ ಬೆನ್ನತ್ತಿ ಬೆತ್ತದ ರುಚಿ ತೋರಿಸಿದ್ದಾರೆ. ಇದಕ್ಕೆ ಹೆದರಿ ಹೋಟೆಲ್‌ನ್ನೇ ಬಂದ್ ಮಾಡಿದ್ದರೆ, ಪಾನ್ ಅಂಗಡಿಯಾತ ಮದ್ಯ ಮಾರಾಟ ನಿಲ್ಲಿಸಿದ್ದಾನೆ. ಕೆಲ ತಿಂಗಳ ಹಿಂದೆಯಷ್ಟೇ ಔರಾದ್ ಸಮೀಪದ ಎನಗುಂದಾ ಮತ್ತು ಕೊಳ್ಳೂದನಲ್ಲಿಯೂ ಮಹಿಳೆಯರು ಪೊರಕೆ ಹಿಡಿದು ಅಕ್ರಮ ಮದ್ಯ ಮಾರುವವರಿಗೆ ಎಚ್ಚರಿಕೆ ನೀಡಿದ್ದರು. ಹಾಗಾಗಿ ಎನಗುಂದಾದ ಕೆಲ ಮಹಿಳೆಯರು ಔರಾದ್ ಮಹಿಳೆಯರ ಹೋರಾಟಕ್ಕೆ ಸಾಥ್ ನೀಡಿದ್ದರು.
ಮಹಿಳೆಯರ ಗ್ಯಾಂಗ್‌ನ ದಿಟ್ಟತನದ ಹೋರಾಟದ ಫಲವಾಗಿ ಬಡಾವಣೆಯಲ್ಲಿ ಇಂದು ಅಕ್ರಮ ಮದ್ಯಕ್ಕೆ ಬ್ರೇಕ್ ಬಿದ್ದಿದೆ. ಇನ್ಮುಂದೆ ಪಟ್ಟಣದ ಯಾವುದೇ ಭಾಗದಲ್ಲಿ ಅಕ್ರಮ ಮದ್ಯ ಮಾತ್ರವಲ್ಲ ಮಹಿಳೆಯರಿಗೆ ಹಿಂಸಿಸುವ ಕೃತ್ಯದ ವಿರುದ್ಧ ಬೀದಿಗಳಿದು ಹೋರಾಡಲು ನಾವು ಸಿದ್ಧ ಎಂದು ಗ್ಯಾಂಗ್‌ನ ಮಹಿಳೆಯರು ಹೇಳಿಕೊಂಡಿದ್ದಾರೆ. ಮಹಿಳೆಯರ ಶೋಷಣೆ, ದೌರ್ಜನ್ಯ, ಅತ್ಯಾಚಾರ ಅನಾಚಾರ ಘಟನೆಗಳು ಇಂದು ಹೆಚ್ಚುತ್ತಿವೆ. ಇವುಗಳನ್ನು ನಿಯಂತ್ರಿಸಲು ಎಲ್ಲ ಕಡೆ ಮಹಿಳೆಯರು ಸಂಘಟಿತರಾಗಿ ಹೋರಾಡಿದರೆ ಮಹಿಳೆಯರು ನಿರ್ಭಯದಿಂದ ಜೀವಿಸಬಹುದು.
ಬಡಾವಣೆಯಲ್ಲಿ ಕುಡಿದ ಅಮಲಿನಲ್ಲಿ ಬಂದು ಓಡಾಟ, ಜಗಳದಿಂದ ಮಹಿಳೆಯರು ಹಿಂಸೆ ಅನುಭವಿಸುತ್ತಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಎಲ್ಲ ಮಹಿಳೆಯರು ಸಂಘಟಿತರಾಗಿ ಕುಡಿದು ಬರುವವರಿಗೆ ಬೆನ್ನತ್ತಿ ಚಳಿ ಬಿಡಿಸಿದ್ದೇವೆ. ಈಗ ಅಕ್ರಮ ಮದ್ಯ ಮಾರುತ್ತಿದ್ದ ಅಂಗಡಿಯೇ ಬಂದ್ ಆಗಿದೆ. ಔರಾದ್‌ನಲ್ಲಿ ಮಹಿಳೆಯರನ್ನು ಹಿಂಸುವವರಿಗೆ ಶಿಕ್ಷೆ ನೀಡಲು ನಮ್ಮ ತಂಡ ಸಿದ್ಧವಿದೆ.
– ಚಂಪಾವತಿ (ಹೆಸರು ಬದಲಾಯಿಸಲಾಗಿದೆ), ಮಹಿಳಾ ತಂಡದ ಪ್ರಮುಖರು
– ಶಶಿಕಾಂತ ಬಂಬುಳಗೆ