Advertisement

ಪರಿಸರದ ಒಡಲು ಸೇರುತ್ತಿವೆ ಶೇ. 70ರಷ್ಟು ಮದ್ಯದ ಬಾಟಲಿಗಳು!

02:56 PM May 27, 2019 | keerthan |

ಮಹಾನಗರ: ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗುತ್ತಿರುವ ಒಟ್ಟು ಮದ್ಯದ ಬಾಟ ಲಿಗಳ ಪೈಕಿ ಸುಮಾರು ಶೇ. 70ರಷ್ಟು ಖಾಲಿ ಬಾಟಲಿಗಳು ಪರಿಸರದ ಒಡಲು ಸೇರುತ್ತಿವೆ! ವಿಪರ್ಯಾಸವೆಂದರೆ, ರಸ್ತೆ ಬದಿ, ನದಿ, ಸಮುದ್ರ ಗಳಲ್ಲಿ ಇವುಗಳನ್ನು ಬಿಸಾಡುವುದರಿಂದ ಜೀವಿಗಳ ಪ್ರಾಣಕ್ಕೂ ಸಂಚಕಾರವಾಗುತ್ತಿವೆ.
ಪರಿಸರ ಸಂರಕ್ಷಣೆ ಮತ್ತು ಖಾಲಿ ಬಾಟಲಿ ವಿಲೇವಾರಿಗೆ ವ್ಯವಸ್ಥೆ ಮಾಡಬೇಕೆಂದು ರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟದ ಸದಸ್ಯರು ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಮತ್ತು ಅಬಕಾರಿ ಇಲಾಖೆಗೆ ಕಳುಹಿಸಿದ ಪತ್ರದಲ್ಲಿ ಈ ಆಘಾತಕಾರಿ ಅಂಶವನ್ನು ಉಲ್ಲೇಖೀಸಲಾಗಿದೆ.

Advertisement

ರಾಜ್ಯದಲ್ಲಿ ಪ್ರತಿ ವರ್ಷ 16.99 ಲಕ್ಷ ಲೀಟರ್‌ ಕಾಕಂಬಿ, 3668 ಲೀ. ಮದ್ಯಸಾರ, 5067.49 ಲಕ್ಷ ಲೀ. ಜೆಎಂಎಲ್‌, 1907.18 ಲಕ್ಷ ಲೀ. ಬಿಯರ್‌, 67.05 ಲಕ್ಷ ಲೀ. ವೈನ್‌ ಉತ್ಪಾದನೆಯಾಗುತ್ತಿದೆ. ಒಟ್ಟು 101 ಮದ್ಯ ತಯಾರಿಕಾ ಕಂಪೆನಿಗಳಲ್ಲಿ ಉತ್ಪತ್ತಿ ಮಾಡಿದ ಮದ್ಯವನ್ನು 10,188 ಮದ್ಯ ಮಾರಾಟ ಅಂಗಡಿಗಳ ಮುಖಾಂತರ ಮಾರಾಟ ಮಾಡಲಾಗುತ್ತದೆ. ಈ ಪೈಕಿ 72 ಸ್ಟಾರ್‌ ಹೊಟೇಲ್‌, 981 ಹೊಟೇಲ್‌ ಮತ್ತು ವಸತಿಗೃಹ, 3476 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಮದ್ಯ ನೀಡಲು ಅನುಮತಿ ಇದೆ. ಆದರೆ, ಇಲ್ಲಿ ಮದ್ಯವನ್ನು ಹೊಟೇಲ್‌ಗ‌ಳಲ್ಲೇ ತೆಗೆದುಕೊಳ್ಳಬೇಕೇ ಹೊರತು ಹೊರಗಡೆ ಕೊಂಡೊಯ್ಯುವಂತಿಲ್ಲ. ಉಳಿದಂತೆ ಅನುಮತಿ ಪಡೆದ ಚಿಲ್ಲರೆ ಅಂಗಡಿ, ಮದ್ಯ ಮಾರಾಟ ಮಳಿಗೆ, ವೈನ್‌ಶಾಪ್‌ ಸೇರಿದಂತೆ ಸುಮಾರು 5,659ಕ್ಕೂ ಹೆಚ್ಚು ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇವುಗಳನ್ನು ಹೊರಗಡೆ ಕೊಂಡೊಯ್ದು ಬಳಸಲಾಗುತ್ತದೆ. ಹೀಗೆ ಕೊಂಡೊಯ್ದು ಬಳಸುವ ಮದ್ಯದ ಬಾಟಲಿಗಳನ್ನು ಕೆಲವರಷ್ಟೇ ಮನೆಯಲ್ಲಿ ಬಳಸಿಕೊಂಡರೆ, ಬಹುತೇಕ ಬಾಟಲ್‌ಗ‌ಳು ಪರಿಸರಕ್ಕೆ ಮಾರಕವಾಗುತ್ತಿವೆ ಎಂಬುದು ಪರಿಸರವಾದಿಗಳ ಅಳಲು.

ಪ್ರಕೃತಿಯ ಒಡಲಿಗೆ ಬಾಟಲ್‌
ವೈನ್‌ಶಾಪ್‌ ಮತ್ತಿತರ ಮದ್ಯ ಮಾರಾಟ ಅಂಗಡಿಗಳಲ್ಲಿ ಮಾರಾಟ ಮಾಡಿದ ಮದ್ಯವನ್ನು ಬಳಸಿದ ಅನಂತರ ಜನ ಅಲ್ಲಲ್ಲಿ ಬಿಸಾಡುತ್ತಾರೆ. 10,188 ಮದ್ಯ ಮಾರಾಟ ಸಂಸ್ಥೆಗಳ ಪೈಕಿ 5,659ಕ್ಕೂ ಹೆಚ್ಚು ಅಂಗಡಿಗಳಲ್ಲಿ ಖರೀದಿಸಿದ ಮದ್ಯ ಹೊರಗಡೆ ಕೊಂಡೊಯ್ಯುವ ಅವಕಾಶ ಇರುವುದರಿಂದ ಹೀಗೆ ಕೊಂಡೊಯ್ದ ಬಾಟಲಿಗಳನ್ನು ಸಾರ್ವಜನಿಕ ರಸ್ತೆ, ಅರಣ್ಯ ಪ್ರದೇಶ, ತೋಡು, ಚರಂಡಿಗಳಲ್ಲಿ ಬಿಸಾಡಲಾಗುತ್ತಿದೆ.

ಅಂದಾಜು ಸುಮಾರು ಶೇ. 70ರಷ್ಟು ಮದ್ಯ ಬಾಟಲಿಗಳು ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುತ್ತಿರುವುದೇ ಇದಕ್ಕೆ ಸಾಕ್ಷಿ.
ಅಬಕಾರಿ ಇಲಾಖೆಯು ಮದ್ಯ ಮಾರಾಟದಿಂದ ಆದಾಯ ಗಳಿಸುತ್ತಿದೆಯೇ ಹೊರತು, ಪರಿಸರಕ್ಕೆ ಹಾನಿಕಾರಕವಾದ ಆ ಮದ್ಯದ ಬಾಟಲಿಗಳನ್ನು ಮರು ಬಳಕೆ ಬಗ್ಗೆ ಸ್ಪಷ್ಟ ಚಿಂತನೆ ನಡೆಸಿಲ್ಲ ಎನ್ನುತ್ತಾರೆ ರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟದ ಕಾರ್ಯದರ್ಶಿ ಶಶಿಧರ್‌ ಶೆಟ್ಟಿ.

ನದಿಯೊಡಲಲ್ಲಿ 3,000 ಮದ್ಯ ಬಾಟಲ್‌!
ಇತ್ತೀಚೆಗೆ ಯುವಾ ಬ್ರಿಗೇಡ್‌ ವತಿಯಿಂದ ಸುಬ್ರಹ್ಮಣ್ಯ ಕುಮಾರಧಾರಾ ನದಿಯಲ್ಲಿ “ಕುಮಾರ ಸಂಸ್ಕಾರ’ ನದಿ ಸ್ವತ್ಛತಾ ಕಾರ್ಯಕ್ರಮ ನಡೆಸಲಾಗಿತ್ತು. ಈ ವೇಳೆ ಸ್ನಾನಘಟ್ಟದಲ್ಲಿ ನೀರಿನೊಳಗಿಂದ 3,000ಕ್ಕೂ ಅಧಿಕ ಮದ್ಯ ಬಾಟಲ್‌ಗ‌ಳನ್ನು ಹೆಕ್ಕಿ ತೆಗೆಯಲಾಗಿದೆ. ಮದ್ಯದ ಬಾಟಲಿಗಳು ನದಿ, ಪರಿಸರದ ಒಡಲು ಸೇರುತ್ತಿವೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಇನ್ನೇನು ಬೇಕಿದೆ ಎನ್ನುತ್ತಾರೆ ಪರಿಸರವಾದಿಗಳು. ಪಾರ್ಕ್‌, ಕಡಲ ತೀರದಲ್ಲಿ ನಿರಾತಂಕವಾಗಿ ಮದ್ಯದ ಬಾಟಲಿಗಳನ್ನು ಎಸೆದು ಹೋಗಲಾಗುತ್ತಿದೆ.

Advertisement

19943.93 ಕೋಟಿ ರೂ.ಆದಾಯ
1967 -68ರಲ್ಲಿ 7.11 ಕೋ. ರೂ. ಇದ್ದ ಅಬಕಾರಿ ಇಲಾಖೆಯ ಆದಾಯ 2017- 18ನೇ ಸಾಲಿನಲ್ಲಿ 17,948.51 ಕೋ.ರೂ., 2018- 19ರಲ್ಲಿ 19943.93 ಕೋಟಿ ರೂ.ಗಳಷ್ಟಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ 1995.42 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಆದರೆ, ಆದಾಯ ಹೆಚ್ಚಾಗುತ್ತಿದೆಯೇ ಹೊರತು ಅತ್ಯಧಿಕ ಆದಾಯ ಗಳಿಸುವ ಇಲಾಖೆಯು ಖರೀದಿಯಾದ ಮದ್ಯದ ಬಾಟಲಿಗಳನ್ನು ಪುನರ್‌ ಬಳಕೆ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪರಿಸರವಾದಿ ಮುಖಂಡರ ಆರೋಪ.

ಆಲೋಚಿಸಿ ಯೋಜಿಸಲಾಗುವುದು
ಖಾಲಿ ಬಾಟಲಿಯ ಪುನರ್‌ಬಳಕೆ ಸಂಬಂಧ ಸದ್ಯಕ್ಕೆ ಯಾವುದೇ ಯೋಜನೆ ಇರುವುದಿಲ್ಲ. ಇದು ನೀತಿ (ಪಾಲಿಸಿ) ವಿಚಾರವಾದ್ದರಿಂದ ಸ್ಪಷ್ಟ ರೂಪುರೇಖೆ ಅಗತ್ಯ. ಪರಿಸರಕ್ಕೆ ಈ ಬಾಟಲಿಗಳಿಂದಾಗುವ ಹಾನಿ ತಡೆಯುವ ನಿಟ್ಟಿನಲ್ಲಿ ಯೋಚಿಸಿ ಯೋಜಿಸಿ ಸ್ಪಷ್ಟ ರೂಪುರೇಖೆಯೊಂದಿಗೆ ಕ್ರಮ ಕೈಗೊಳ್ಳಲಾಗುವುದು.
ಜಗದೀಶ್‌ ಚಂದ್ರ, ಅಬಕಾರಿ ಅಧೀಕ್ಷಕರು, ರಾಜ್ಯ ಅಬಕಾರಿ ಇಲಾಖೆ ಬೆಂಗಳೂರು

 ಧನ್ಯಾ ಬಾಳೇಕಜೆ

Advertisement

Udayavani is now on Telegram. Click here to join our channel and stay updated with the latest news.

Next