Advertisement

ಶಾಲಾ ಆವರಣದಲ್ಲಿ ಮದ್ಯದ ಬಾಟಲಿ!

03:14 PM Nov 28, 2018 | |

ನಗರ: ಶಾಲಾ ಆವರಣದಲ್ಲಿ ಮದ್ಯದ ಬಾಟಲಿಗಳು ಪತ್ತೆ ಆಗುತ್ತಿವೆ. ಆದ್ದರಿಂದ ರಾತ್ರಿ ವೇಳೆ ಬೀಟ್‌ ಪೊಲೀಸರು ಶಾಲಾ ಆವರಣವನ್ನು ಗಮನಿಸಬೇಕು ಎಂದು ಕುರಿಯ ಶಾಲಾ ವಿದ್ಯಾರ್ಥಿಗಳು ಆಗ್ರಹಿಸಿದರು. ಹಂಟ್ಯಾರು ಶಾಲಾ ನಾಯಕಿ ರಕ್ಷಿತಾ ಪ್ರಭು ಅಧ್ಯಕ್ಷತೆಯಲ್ಲಿ ಶಾಲೆಯಲ್ಲಿ ನ. 27ರಂದು ಜರಗಿದ ಮಕ್ಕಳ ಗ್ರಾಮಸಭೆ ನಡೆಯಿತು.

Advertisement

ಬೆಳಗ್ಗೆ ಶಾಲೆಗೆ ಬರುವಾಗ ಆವರಣದಲ್ಲಿ ಮದ್ಯದ ಬಾಟಲಿಗಳು ಕಾಣಸಿಗುತ್ತಿವೆ. ಶಾಲಾ ಆವರಣವನ್ನೇ ಮದ್ಯ ಸೇವನೆಗೆ ಬಳಸಿಕೊಂಡಂತೆ ಕಂಡುಬರುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ ಅಲ್ಲ. ಆದ್ದರಿಂದ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗೇರು ಸಸಿ ಬೆಳೆಸಿ
ಭದ್ರತೆಯ ದೃಷ್ಟಿಯಿಂದ ಶಾಲೆಗಳಿಗೆ ಸಿಸಿ ಕೆಮರಾ ಅಳವಡಿಸಬೇಕು. ಸೋಲಾರ್‌ ಲೈಟ್‌ಗಳನ್ನು ಅಳವಡಿಸಿದರೆ ಶಾಲಾ ಆವರಣದಲ್ಲಿ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದರು. ಇದರ ಜತೆಗೆ ಶಾಲಾ ಆವರಣದಲ್ಲಿ ಬೆಳೆದು ನಿಂತ ಗಾಳಿ ಮರಗಳನ್ನು ಕಡಿದು, ಗೇರು ಸಸಿ ಬೆಳೆಸಬೇಕು. ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಆಗಬೇಕು. ವಿಜ್ಞಾನ ಬೋಧನ ಉಪಕರಣಗಳಿಗೆ ಅನುದಾನ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು.

ಕುಂಜೂರುಪಂಜ ಅನುದಾನಿತ ಹಿ.ಪ್ರಾ. ಶಾಲಾ ವಿದ್ಯಾರ್ಥಿ ಮಾತನಾಡಿ, ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಿಗೂ ಪ್ರಾಧಾನ್ಯ ನೀಡಬೇಕು. ಶೂ, ಸಮವಸ್ತ್ರ, ಶಿಕ್ಷಕರ ನೇಮಕ ಸಹಿತ ಸರಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು. ರಸ್ತೆಗಳಲ್ಲಿ ಸೂಚನ ಫಲಕಗಳಿಲ್ಲದೆ ಸಮಸ್ಯೆ ಆಗಿದೆ. ಕಬ್ಬಿಣದ ಅಂಶವುಳ್ಳ ಮಾತ್ರೆಗಳನ್ನು ಸಕಾಲದಲ್ಲಿ ನೀಡಬೇಕು. ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ತರಕಾರಿ ತೋಟವನ್ನು ದನಗಳು ಹಾಳು ಮಾಡುತ್ತಿದ್ದು, ಆವರಣ ಅಗತ್ಯ ಎಂದರು. ಇಡ್ಯೊಟ್ಟು ಶಾಲೆ ವಿದ್ಯಾರ್ಥಿ ಮಾತನಾಡಿ, ಶಾಲೆಗೆ ಶಿಕ್ಷಕರ ನೇಮಕ, ಶಾಲೆಯ ಎರಡು ಕೊಠಡಿಗಳ ಮಾಡು ಕುಸಿಯುವ ಹಂತದಲ್ಲಿದ್ದು ಅದರ ದುರಸ್ತಿ ಹಾಗೂ ಶಾಲೆಗೆ ಹೋಗುವ ರಸ್ತೆಯನ್ನು ದುರಸ್ತಿಪಡಿಸುವಂತೆ ಮನವಿ ಮಾಡಿದರು.

ಬೀದಿ ನಾಯಿ ನಿಯಂತ್ರಣಕ್ಕೆ ಕ್ರಮ
ಹಂಟ್ಯಾರು ಶಾಲಾ ವಿದ್ಯಾರ್ಥಿ ಮಾತನಾಡಿ, ಬೀದಿ ನಾಯಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್‌ ಸೇರಿದಂತೆ ಪ್ರಥಮ ಚಿಕಿತ್ಸೆಯ ಸೌಲಭ್ಯ ನಿಗದಿತ ಸಮಯಕ್ಕೆ ನೀಡುವಂತೆ ಮನವಿ ಮಾಡಿದರು. ಹೆದ್ದಾರಿ ದಾಟಲು ಹೋಂ ಗಾರ್ಡ್‌ ನೇಮಿಸಲು ಪಟ್ಟು ಹಿಡಿದರು. ಶಾಲಾ ನೀರಿನ ಪೈಪ್‌, ಕಟ್ಟಡಗಳಿಗೆ ಕಿಡಿಗೇಡಿಗಳು ಹಾನಿ ಎಸಗುತ್ತಿದ್ದಾರೆ. ರಕ್ಷಣೆ ನೀಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ ಅವರು ಮಕ್ಕಳ ಗ್ರಾಮಸಭೆಯ ಮಹತ್ವ ತಿಳಿಸುತ್ತಾ, ಗ್ರಾಮದ ಅಭಿವೃದ್ಧಿಯಲ್ಲಿ ಮಕ್ಕಳ ಪಾತ್ರವೂ ಬೇಕು. ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಮೂಡಿದರೆ, ಸುದೃಢ ದೇಶ ನಿರ್ಮಾಣ ಆಗುತ್ತದೆ. ಇದೇ ಉದ್ದೇಶದಿಂದ ಮಕ್ಕಳ ಗ್ರಾಮಸಭೆಯನ್ನು ಜಾರಿಗೆ ತರಲಾಗಿದೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ಗೀತಾ ಮರಿಕೆ, ಉಪಾಧ್ಯಕ್ಷ ವಸಂತ ಶ್ರೀದುರ್ಗಾ, ಸದಸ್ಯರಾದ ಸರಸ್ವತಿ, ನಳಿನಿ, ವನಿತಾ, ಭಾರತಿ, ವಿಶ್ವನಾಥ ಗೌಡ, ಗಣೇಶ್‌ ರೈ, ವಿಜಯ ಬಿ.ಎಸ್‌., ಪಿಡಿಓ ಜಗದೀಶ್‌ ಉಪಸ್ಥಿತರಿದ್ದರು. ಬಿಆರ್‌ಪಿ ಮರಿಯಮ್ಮ ಪಿ.ಎಸ್‌., ಕಿರಿಯ ಆರೋಗ್ಯ ನಿರೀಕ್ಷಕಿ ಮಾಹಿತಿ ನೀಡಿದರು. ಗ್ರಾ.ಪಂ. ಕಾರ್ಯದರ್ಶಿ ಅನುಷಾ ಡಿ. ವರದಿ ವಾಚಿಸಿದರು. ಹಂಟ್ಯಾರು ಶಾಲಾ ವಿದ್ಯಾರ್ಥಿ ಉಪನಾಯಕ ಆಕಾಶ್‌ ಸ್ವಾಗತಿಸಿ, ವಿದ್ಯಾರ್ಥಿನಿರಾದ ದೀಪ್ತಿ ಕೆ. ಕಾರ್ಯಕ್ರಮ ನಿರೂಪಿಸಿ, ಡಿಂಚಿಲಾಮಿ ವಂದಿಸಿದರು.

ಶಾಲೆ ಪಕ್ಕ ವಿದ್ಯುತ್‌ ಪರಿವರ್ತಕ
ಹಂಟ್ಯಾರು ಶಾಲಾ ವಿದ್ಯಾರ್ಥಿ ಮಾತನಾಡಿ, ಶಾಲೆ ಪಕ್ಕದಲ್ಲಿಯೇ ವಿದ್ಯುತ್‌ ಪರಿವರ್ತಕ ಇದೆ. ಸಿಡಿಲಿನ ಸಂದರ್ಭ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಶಾಲೆಗೆ ಸಿಡಿಲು ನಿರೋಧಕ ಅಳವಡಿಸಿ ಎಂದು ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next