Advertisement

ಮದ್ಯ ನಿಷೇಧ; ನಾಳೆಯಿಂದ ಹೋರಾಟ

12:31 PM Jan 26, 2020 | Suhan S |

ಬಾಗಲಕೋಟೆ: ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಜಿಲ್ಲೆಯ ಕೂಡಲಸಂಗಮದಲ್ಲಿ ಜ. 27ರಿಂದ ವಿವಿಧ ಹಂತದ ಹೋರಾಟ ನಡೆಸಲಾಗುವುದು ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕದ ಕಾರ್ಯಕರ್ತೆ ಮುತ್ತಮ್ಮ ಬಂಗಿ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಸೇವನೆಯಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಇದಕ್ಕಾಗಿ ಕಳೆದ ಐದು ವರ್ಷಗಳಿಂದ ಹೋರಾಟ ನಿರಂತರವಾಗಿ ನಡೆದಿದ್ದು, ಕಳೆದ ವರ್ಷ ಚಿತ್ರದುರ್ಗದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಕೂಡ ಮಾಡಿದ್ದೇವು. ಆಗ ರೇಣುಕಮ್ಮ ಎಂಬ ಮಹಿಳೆ ಮೃತಪಟ್ಟಿದ್ದರು. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಆಗ ಡಿಸಿಎಂ ಅಶ್ವತ್ಥನಾರಾಯಣ ನೀಡಿದ್ದ ಭರವಸೆ ಈವರೆಗೂ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜ. 27ರಂದು ಕೂಡಲಸಂಗಮದಲ್ಲಿ 10 ಜನ ಮಹಿಳೆಯರು ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ಜ. 28 ಮತ್ತು 29ರಂದು ರಾಜ್ಯದ 30 ಜಿಲ್ಲೆಗಳ ಮಹಿಳೆಯರು ಕೂಡಲಸಂಗಮಕ್ಕೆ ಆಗಮಿಸಲಿದ್ದು, ಅಂದು ಜಲ ಧರಣಿ ನಡೆಸುವರು. ಇಡೀ ದಿನ ನೀರಿನಲ್ಲಿ ನಿಂತು, ಮದ್ಯ ನಿಷೇಧಕ್ಕಾಗಿಒತ್ತಾಯಿಸುತ್ತೇವೆ. ಜ. 30ರಂದು ನಾಡಿನ ವಿವಿಧ ಮಠಾಧೀಶರು, 54 ಪ್ರಗತಿಪರ ಸಂಘಟನೆಗಳಕಾರ್ಯಕರ್ತರು, ಸಾವಿರಾರು ಮಹಿಳೆಯರು ಆಗಮಿಸಲಿದ್ದು, ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ಸಮಾವೇಶ ನಡೆಸಲಾಗುವುದು. ಜ.30ರೊಳಗಾಗಿ ಸರ್ಕಾರ ಸ್ಪಂದಿಸದಿದ್ದರೆ, ಮುಂದಿನ ಹೋರಾಟದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

10 ಜನ ಮಹಿಳೆಯರು ಜ.27ರಿಂದ 30ರವರೆಗೆ ನಿರಂತರ ಉಪವಾಸ ಕೈಗೊಳ್ಳಲಿದ್ದಾರೆ. ಉಪವಾಸ, ಜಲಧರಣಿ, ಸಮಾವೇಶದ ಮೂಲಕ ಮದ್ಯ ನಿಷೇಧಕ್ಕೆ ಒತ್ತಾಯಿಸುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯ ರಾಜ್ಯ ಸಂಚಾಲಕ ಅಭಯ ಮಾತನಾಡಿ, ಮದ್ಯ ನಿಷೇಧಕ್ಕಾಗಿ ಸರ್ಕಾರದ ಎದುರು ನಾಲ್ಕು ಪ್ರಮುಖ ಬೇಡಿಕೆ ಇಡುತ್ತೇವೆ. ಸಂವಿಧಾನದ ಕಲಂ 47ರ ಪ್ರಕಾರ ಮದ್ಯ ಸೇವನೆ ಕಡಿಮೆ ಮಾಡಲು ಸರ್ಕಾರ ನಿಗದಿತ ನೀತಿ ರೂಪಿಸಬೇಕು. ಕಲಂ 73ರ ಪ್ರಕಾರ, ಆಯಾ ಗ್ರಾಮ, ನಗರ ಪಟ್ಟಣಗಳಲ್ಲಿ ಮದ್ಯದ ಅಂಗಡಿ ಬೇಡ ಎಂದು ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಂಡರೆ, ಅಲ್ಲಿ ಮದ್ಯದ ಅಂಗಡಿಗೆ ಪರವಾನಗಿ ಕೊಡಬಾರದು. ಕುಡಿತದಿಂದ ಮೃತಪಟ್ಟವರ ಕುಟುಂಬದ ಜವಾಬ್ದಾರಿ ಸರ್ಕಾರ ಪಡೆಯಬೇಕು. ಎಲ್ಲೆಡೆ ಮದ್ಯ ಸೇವನೆ ಕಡಿಮೆ ಮಾಡಲು ಮಹಿಳೆಯರು ಒಳಗೊಂಡ ಸಮಿತಿ ರಚಿಸಬೇಕು. ಈ ಪ್ರಮುಖ ಬೇಡಿಕೆಗಳೊಂದಿಗೆ ನಮ್ಮ ಹೋರಾಟ ನಡೆಯಲಿದೆ. 30 ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಲಿದ್ದು, 54 ವಿವಿಧ ಸಂಘಟನೆಗಳ ಪ್ರಮುಖರು ಬೆಂಬಲಿಸಿ, ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಯಮನಮ್ಮ ಪೂಜಾರಿ, ಮಹಾದೇವಿ ಹಡಪದ, ಗಂಗಮ್ಮ ಕಾರಿಕಂಠಿ, ಶಾಂತಾ ಗೌಡರ, ಶಂಕರ ಹೂಗಾರ, ಮಹಾಂತೇಶ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next