ನ್ಯೂಯಾರ್ಕ್: ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಕೂಟದ ಪ್ರಶಸ್ತಿ ಗೆದ್ದಿರುವ ಐಗಾ ಸ್ವಿಯಾಟೆಕ್ ಮತ್ತು ಕಾರ್ಲೋಸ್ ಅಲ್ಕರಾಝ್ ನೂತನ ಟೆನಿಸ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಫೈನಲ್‌ನಲ್ಲಿ ಎರಡನೇ ರ್‍ಯಾಂಕಿನ ಓನ್ಸ್ ಜೆಬ್ಯೂರ್ ಅವರನ್ನು ಕೆಡಹಿದ್ದ ಸ್ವಿಯಾಟೆಕ್ ಚೊಚ್ಚಲ ಯುಎಸ್ ಓಪನ್ ಪ್ರಶಸ್ತಿ ಗೆದ್ದರಲ್ಲದೇ ತನ್ನ ಎದುರಾಳಿಗಿಂತ ಬಹುತೇಕ ಎರಡರಷ್ಟು ಹೆಚ್ಚು ಅಂಕಗಳ ಮುನ್ನಡೆಯೊಂದಿಗೆ ನಂ. ವನ್ ಸ್ಥಾನವನ್ನು ಭದ್ರಪಡಿಸಿಕೊಂಡರು.
ಅಮೆರಿಕದ ಹದಿಹರೆಯದ ತಾರೆ ಕೊಕೊ ಗಾಫ್ ಮೊದಲ ಬಾರಿ ಹತ್ತರೊಳಗಿನ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ನಾಲ್ಕು ಸ್ಥಾನ ಮೇಲಕ್ಕೇರಿದ ಅವರು 8ನೇ ರ್‍ಯಾಂಕ್ ಪಡೆದಿದ್ದಾರೆ. 18 ವರ್ಷ 183 ದಿನ ಪ್ರಾಯದ ಗಾಫ್ ಕಳೆದ 16 ವರ್ಷಗಳಲ್ಲಿ ಅಗ್ರ ಹತ್ತರೊಳಗಿನ ಸ್ಥಾನಕ್ಕೇರಿದ ಅತೀ ಕಿರಿಯ ಆಟಗಾರ್ತಿಯಾಗಿದ್ದಾರೆ.
ಕ್ಯಾರೋಲಿನ್ ಗಾರ್ಸಿಯಾ ಹತ್ತರೊಳಗಿನ ಸ್ಥಾನ ಪಡೆದ ಇನ್ನೋರ್ವ ಯಶಸ್ವಿ ಆಟಗಾರ್ತಿ. ಅವರು 75ನೇ ಸ್ಥಾನದಿಂದ 10ನೇ ಸ್ಥಾನಕ್ಕೇರಿದ್ದಾರೆ. 2018ರ ಅಕ್ಟೋಬರ್ ಬಳಿಕ ಅವರು ಇದೇ ಮೊದಲ ಬಾರಿ ಈ ಸಾಧನೆ ಮಾಡಿದ್ದಾರೆ. ಯುಎಸ್ ಓಪನ್‌ನ ಮೂರನೇ ಸುತ್ತಿನಲ್ಲಿ ಸೆರೆನಾ ಅವರನ್ನು ಕೆಡಹಿದ್ದ ಅಜ್ಲಾ ತೋಮ್‌ಜಾನೋವಿಕ್ ತನ್ನ ಜೀವನಶ್ರೇಷ್ಠ 34ನೇ ಸ್ಥಾನಕ್ಕೇರಿದ್ದಾರೆ.
ಅಲ್ಕರಾಝ್ ಅತೀ ಕಿರಿಯ ನಂ. ವನ್
ಯುಎಸ್ ಓಪನ್‌ನ ಫೈನಲ್‌ನಲ್ಲಿ ಕಾಸ್ಪರ್ ರೂಡ್ ಅವರನ್ನು ಸೋಲಿಸಿದ ಸ್ಪೇನ್‌ನ ಹದಿಹರೆಯದ ಕಾರ್ಲೋಸ್ ಅಲ್ಕರಾಝ್ ಚೊಚ್ಚಲ ಗ್ರ್ಯಾನ್ ಸ್ಲಾಮ್ ಕೂಟದ ಪ್ರಶಸ್ತಿ ಜಯಿಸಿದ್ದರಲ್ಲದೇ ಎಟಿಪಿ ರ್‍ಯಾಂಕಿಂಗ್‌ನಲ್ಲಿ ನಂ. ವನ್ ಸ್ಥಾನವನ್ನು ಪಡೆದರು. 19ರ ಹರೆಯದ ಅವರು ಅಗ್ರಸ್ಥಾನಕ್ಕೇರಿದ ಅತೀ ಕಿರಿಯ ಆಟಗಾರರೆಂಬ ಗೌರವಕ್ಕೆ ಪಾತ್ರರಾದರು. ಪ್ರಮುಖ ಕೂಟದಲ್ಲಿ ಎರಡನೇ ಬಾರಿ ಫೈನಲಿ ಗೇರಿದ್ದ ನಾರ್ವೆಯ ರೂಡ್ ಐದು ಸ್ಥಾನ ಮೇಲಕ್ಕೇರಿ ಎರಡನೇ ಸ್ಥಾನ ಪಡೆದರು.