ಬೆಂಗಳೂರು: ರಾಷ್ಟ್ರದ ಮಹಿಳೆಯ ಅಧಿಕಾರದ ಕುರುಹಾಗಿ ಸರ್ಕಾರಿ ಸ್ವಾಮ್ಯದ ಅಲಹಾಬಾದ್ ಬ್ಯಾಂಕ್ ಶುಕ್ರವಾರ ಉಳಿತಾಯ ಖಾತೆಯ ಹೊಸ “ಅಲ್‌ಬ್ಯಾಂಕ್ ಶಕ್ತಿ’ ಉತ್ಪನ್ನವನ್ನು ಬಿಡುಗಡೆ ಮಾಡಿದೆ.
ಶುಕ್ರವಾರ ಕೋರಮಂಗಲದ ಶಾಖೆಯಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶಂಕರ್ ರಾವ್ ಅವರು ನೂತನ ಸೇವಿಂಗ್ಸ್ ಬ್ಯಾಂಕ್ ಉತ್ಪನ್ನವನ್ನು ಅನಾವರಣಗೊಳಿಸಿ ಮಾತನಾಡಿದರು. ಈ ಉತ್ಪನ್ನವು ಮಹಿಳೆಯರಲ್ಲಿ ಉಳಿತಾಯದ ಅಭ್ಯಾಸವನ್ನು ಹುಟ್ಟುಹಾಕುವಂತೆ ಮಾಡುತ್ತದಲ್ಲದೆ, ಲಭ್ಯವಿರುವ ಹೂಡಿಕೆ ಅವಕಾಶಗಳನ್ನು ಒದಗಿಸುತ್ತದೆ ಎಂದರು.
ಅಲ್ ಬ್ಯಾಂಕ್ ಖಾತೆ ತೆರೆಯುವ ಮಹಿಳೆಯರಿಗೆ ಬಹಳಷ್ಟು ಅನುಕೂಲತೆಗಳಿವೆ. ಲಾಕರ್ ಸೌಲಭ್ಯ, ಗೃಹ ಸಾಲ ಬಡ್ಡಿ ದರದಲ್ಲಿ ರಿಯಾಯ್ತಿ, ತಮ್ಮ ಮಕ್ಕಳಿಗೆ ಶಿಕ್ಷಣ ಸಾಲ ಹಾಗೂ ಆರೋಗ್ಯ ರಕ್ಷಣೆ ಉತ್ಪನ್ನ ಪಡೆಯುವ ಅವಕಾಶ ಸಿಗಲಿದೆ. ಅಲ್ಲದೆ, ಈ ಯೋಜನೆಯಲ್ಲಿ ಜಂಟಿ ಖಾತೆ ತೆರೆಯುವ ಅವಕಾಶವುಂಟು ಎಂದು ಆವರು ತಿಳಿಸಿದರು.
ಮುಖ್ಯ ವ್ಯವಸ್ಥಾಪಕ ಎ.ಪಿ. ಶ್ರೀವಾಸ್ತವ ಅವರು ಮಾತನಾಡಿ, ಈ ಉತ್ಪನ್ನದಲ್ಲಿರುವ ಇತರ ಪ್ರಯೋಜನಗಳೆಂದರೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಲಾಂಜ್‌ಗಳನ್ನು ಬಳಸಿಕೊಳ್ಳಬಹುದು. ವಿಶೇಷವಾಗಿ ಪಿಓಎಸ್ ಟರ್ಮಿನಲ್ಸ್ ಮತ್ತು ಆನ್‌ಲೈನ್ ಬಿಲ್ ಪಾವತಿ ಮೇಲೆ ಕ್ಯಾಷ್ ಬ್ಯಾಕ್ ಕೊಡುಗೆ ಕೂಡ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಖ್ಯಾತ ಮಹಿಳಾ ಉದ್ಯಮಿ ಡಾ. ಸೋಮುದತ್ತ, ಶ್ರೀಮತಿ ಜಯಶ್ರಿ ನಾರಾಯಣನ್, ಶ್ರೀಮತಿ ಮಾಬಲ್ ಫಾತಿಮ, ಶಾಖಾ ವ್ಯವಸ್ಥಾಪಕಿ ಶ್ರೀಮತಿ ವಿ.ಎಸ್. ರಾಧಾ ಹಾಗೂ ಶ್ರೀಮತಿ ಹೀನಾ ದಾವೆ ಇತರರು ಉಪಸ್ಥಿತರಿದ್ದರು.