Advertisement

ಅಯ್ಯೋ ಅಂದವರಿಗೆ ಅಮೃತ ಹಸ್ತ

05:58 PM Aug 06, 2019 | Sriram |

ಬಡತನ, ಅದರ ಹಿಂದೆಯೇ ಬಂದ ಕಷ್ಟ ಕೋಟಲೆಗಳನ್ನು ಅವಡುಗಚ್ಚಿ ಸಹಿಸಿಕೊಳ್ಳುತ್ತಿದ್ದಾಗಲೇ ತಂದೆ ತೀರಿ ಹೋದರು. ಆಗ ತಿಪಟೂರಿನ ಆನಂದಯಾದವ್‌ ದಿಕ್ಕು ತೋಚದೆ ಕಂಗಾಲದರು. ಕೊನೆಗೆ ಹೇಗೋ ಮಾಡಿ, ರೈಲ್ವೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡರು. ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತಾ ಹೋದಾಗ ಮನಸ್ಸಿನಲ್ಲಿ ಛಲ ಹುಟ್ಟಿತು. ನನ್ನಂತೆ ಬೇರೆಯವರು ಕಷ್ಟ ಪಡಬಾರದು ಅಂತ ಒಂದಷ್ಟು ಸಮಾನ ಮನಸ್ಕರರನ್ನು ಗುರುತಿಸಿ, 11 ಜನರ ತಂಡ ರೂಪಿಸಿದರು. ಪ್ರತಿ ತಿಂಗಳು ಎಲ್ಲರೂ ತಲಾ 500ರೂ. ಒಟ್ಟು ಗೂಡಿಸಿ ಒಂದು ಕಡೆ ಕೂಡಿಟ್ಟರು. ಈ ಹಣದ ಮೊತ್ತ ದೊಡ್ಡದಾಗುತ್ತಿದ್ದಂತೆ ಸಮಾಜ ಸೇವೆಗೆ ನಿಂತರು.

Advertisement

ಊಟ, ಪುಸ್ತಕ ಸೇವೆಇವತ್ತು, “ಸ್ವಾಮಿ, ನನಗೆ ಕಷ್ಟ ಇದೆ ‘ ಅಂತ ಯಾರಾದರೂ ಬಂದರೆ, ತಮ್ಮ ಜೋಳಿಗೆ ತುಂಬಿದ್ದ ಹಣದಲ್ಲೇ ಕೈಲಾದ ಸಹಾಯ ಮಾಡುತ್ತಿದ್ದಾರೆ ಯಾದವ್‌. ಅಂದಹಾಗೆ, ಇವರ ಸಂಘದ ಹೆಸರು “ಅಮೃತ ಹಸ್ತ ಹೃದಯಸ್ಪರ್ಶಿ ಸಹಾಯ ಸಂಘ’ ಅಂತ.

ಪ್ರತಿದಿನ, ನಮಗೆ ರಕ್ತ ಬೇಕು. ಪ್ಲೀಸ್‌ ಹೆಲ್ಪ್ ಮಾಡಿ ಅಂತ 10-15 ಕರೆ ಬರುತ್ತದಂತೆ. ತುಮಕೂರು, ಶಿರಾ, ಬೆಂಗಳೂರು, ಮೈಸೂರು ಕಡೆಯಿಂದಲೇ ಹೆಚ್ಚು ಕರೆಬರುವುದು. ಇದಕ್ಕಾಗಿ ಒಂದು ಸಾವಿರ ರಕ್ತದಾನಿಗರ ಪಟ್ಟಿ ಮಾಡಿದ್ದಾರೆ. ತಕ್ಷಣ ಅವರಿಗೆ ತಿಳಿಸಿ, ಪೇಷೆಂಟ್‌ ಕಡೆಯವರ ನಂಬರ್‌ ಕೊಟ್ಟು ಸೂಕ್ತ ಸಮಯಕ್ಕೆ ರಕ್ತದಾನಕ್ಕೆ ನೆರವಾಗುತ್ತಿದೆ ಸಂಘ.

ಅಲ್ಲದೆ, ವಿದ್ಯಾ ಜೋಳಿಗೆ ಅಂತ ಹೆಸರಿಟ್ಟು, ಅದರಡಿ ಶಿರಾ ಸುತ್ತಮುತ್ತಲ ಗೊಲ್ಲರಹಟ್ಟಿ, ವಡ್ಡರಟ್ಟಿಗಳಲ್ಲಿರುವ ಒಂದಷ್ಟು ಶಾಲೆಗಳನ್ನು ಗುರುತು ಮಾಡಿ ಅಗತ್ಯ ಪುಸ್ತಕ ಸಾಮಗ್ರಿಗಳನ್ನು ವಿತರಿಸುವ ಪರಿಪಾಠ ಕೂಡ ಇಟ್ಟುಕೊಂಡಿದೆ.

“ಈ ಸಲ ತಿಪಟೂರಿನ ಬಳಿ ಲಂಬಾಣಿ ತಾಂಡ ಹುಡುಕಿದ್ದೀವಿ. ಅಲ್ಲಿನವರಿಗೆ ಮಕ್ಕಳಿಗೆ ಬ್ಯಾಗ್‌ ಕೊಡಿಸುವ ಸಾಮರ್ಥ್ಯ ಇಲ್ಲ. ಅದಕ್ಕಾಗಿ ಪುಸ್ತಕಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಇಟ್ಟುಕೊಂಡು ಶಾಲೆಗೆ ತೆಗೆದುಕೊಂಡು ಹೋಗುತ್ತಾರೆ. ಅವರಿಗೆ ಸಹಾಯ ಮಾಡೋಣ ಅಂತ ಇದ್ದೀವಿ’ ಅಂತ ಹೆಮ್ಮೆ ಇಂದ ಹೇಳುತ್ತಾರೆ ಯಾದವ್‌.

Advertisement

ಹೇಗೆ ತಿಳಿಯುತ್ತೆ?
ಸಂಘದ ಸದಸ್ಯರು ತಾವು ಮಾಡಿದ ಕೆಲಸವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡುತ್ತಾರೆ. ಇದರ ಉದ್ದೇಶ ಪ್ರಚಾರ ಮಾಡುವುದಲ್ಲ. ಆದರೆ, ತಮ್ಮಂತೆಯೇ ಬೇರೆಯವರೂ ಏನಾದರು ಜನೋಪಯೋಗಿ ಕೆಲಸ ಮಾಡಲಿ ಎಂದು. ಹೀಗೆ ಮಾಡಿದ ಪೋಸ್ಟ್‌ ನೋಡಿ, ಒಂದಷ್ಟು ಜನ ತಮ್ಮ ಕೈಲಾದ ಹಣದ ನೆರವು ನೀಡುತ್ತಾರೆ. ಅಲ್ಲದೇ, ನೆರವು ಅಗತ್ಯವಿರುವವರು ಫೇಸ್‌ಬುಕ್‌ನಲ್ಲಿ ಮೆಸೇಜ್‌ ಕಳುಹಿಸುತ್ತಾರೆ. ಇದನ್ನು ಸಂಘದ ಸದಸ್ಯರು ಫಾಲೋ ಮಾಡಿ, ಅವರು ನಿಜಕ್ಕೂ ನೆರವಿಗೆ ಅರ್ಹರೇ, ಅವರ ಸ್ಥಿತಿಗತಿ ಹೇಗಿದೆ ಅನ್ನುವುದನ್ನೆಲ್ಲಾ ಪರಿಶೀಲಿಸಿ ನೆರವು ನೀಡುತ್ತಾರಂತೆ.

ಇವೆಲ್ಲ ಕಾರ್ಯದ ನಡುವೆ, ವಾರಕ್ಕೆ ಎರಡು ದಿನ ಶಿರಾ ಬಸ್ಟಾಂಡ್‌, ಸರ್ಕಾರಿ ಕಚೇರಿಗಳ ಕೈಸಾಲೆಯಲ್ಲಿ ಮಲಗಿರುವ ಭಿಕ್ಷುಕರಿಗೆ ಊಟದ ಭರ್ತಿ ಭೋಜನ ವ್ಯವಸ್ಥೆ ಮಾಡುತ್ತಿದೆ ಸಂಘ.

ಹೀಗೆ, ತಾವಾಯ್ತು ತಮ್ಮ ಬದುಕಾಯ್ತು ಅಂತ ಇರದೇ, ನೆರವಿನ ಎರಕ ಹೊಯ್ತುತ್ತಾ ಪರರ ಬದುಕನ್ನು ಅಮೃತವಾಗಿಸುತ್ತಿದೆ ಈ ಸಂಘ.
ಮಾಹಿತಿಗೆ:7019951821

ಯೋಗೇಶ್‌

Advertisement

Udayavani is now on Telegram. Click here to join our channel and stay updated with the latest news.

Next