ತಿರುವನಂತಪುರಂ: ಮಾಲೀಕನ ಮನೆಯಲ್ಲಿ ಬೆಲೆಬಾಳುವ ಒಡೆವೆಗಳನ್ನು ಕದ್ದುಕೊಂಡು ಹೋದ ಕಳ್ಳ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿ ಕ್ಷಮಾಪಣೆಯ ಪತ್ರ ಬರೆದು ಕದ್ದುಕೊಂಡು ಹೋದ ಚಿನ್ನಾಭರಣಗಳನ್ನು ಮರಳಿಸಿದ ಅಪರೂಪದ ಘಟನೆ ಕೇರಳದ ಅಂಬಾಲಾಪುಝಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ:
ಕಳೆದ ಮಂಗಳವಾರ ಹಿರಿಯ ಅಣ್ಣನ ಮಗನ ಮದುವೆ ಕಾರ್ಯಕ್ರಮಕ್ಕಾಗಿ ಕರುಮಾಡಿಯ ಮಧು ಕುಮಾರ್ ಅವರು ತಮ್ಮ ಕುಟುಂಬ ಸಮೇತ ಕರುವಟ್ಟಾ ಎಂಬಲ್ಲಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯ ಮುಂಭಾಗದ ಗೇಟ್ ನ ಬಾಗಿಲಿಗೆ ಬೀಗ ಹಾಕದೆ ಹೋಗಿದ್ದರು.
ರಾತ್ರಿ 10.30ರ ಸುಮಾರಿಗೆ ಮಧು ಹಾಗೂ ಮನೆಯವರು ಮನೆಗೆ ಬಂದಾಗ, ಮನೆಯ ಬಾಗಿಲನ್ನು ಮುರಿದಿರುವುದು ಗಮನಕ್ಕೆ ಬಂದಿತ್ತು. ಹಿಂದಿನ ಬಾಗಿಲನ್ನು ಕೂಡಾ ತೆರೆದಿಟ್ಟಿದ್ದರು. ಮರುದಿನ ಕುಮಾರ್ ಪೊಲೀಸ್ ಠಾಣೆಗೆ ತೆರಳಿ, ಕಳ್ಳತನವಾಗಿರುವ ಬಗ್ಗೆ ದೂರು ಕೊಟ್ಟಿದ್ದರು.
ಮನೆಯಲ್ಲಿನ ಚಿನ್ನಾಭರಣಗಳ ಕಳ್ಳತನದ ಹಿಂದೆ ಇರುವ ಶಂಕಿತ ವ್ಯಕ್ತಿಯ ಹೆಸರನ್ನು ಕೂಡಾ ಕುಮಾರ್ ಪೊಲೀಸರ ಬಳಿ ಹೇಳಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದರು. ಪೊಲೀಸರು ಶಂಕಿತ ವ್ಯಕ್ತಿಯ ಬಂಧನಕ್ಕಾಗಿ ಬಲೆ ಬೀಸಿದ್ದರು.
ಏತನ್ಮಧ್ಯೆ ಗುರುವಾರ ಬೆಳಗ್ಗೆ ಮನೆಯ ಮುಂಭಾಗದ ಗೇಟಿನೊಳಗೆ ಕದ್ದುಕೊಂಡು ಹೋಗಿದ್ದ ಚಿನ್ನಾಭರಣಗಳನ್ನು ಪೇಪರ್ ನಲ್ಲಿ ಸುತ್ತಿ ತಂದು ಇಟ್ಟು ಹೋಗಿದ್ದರು! ಅಷ್ಟೇ ಅಲ್ಲ ಅದರೊಳಗೊಂದು ಪತ್ರವೂ ಇತ್ತು…
“ದಯವಿಟ್ಟು ನನ್ನ ಕ್ಷಮಿಸಿ, ಹಣಕಾಸಿನ ಅವಶ್ಯಕತೆ ನನಗೆ ತುಂಬಾ ಇತ್ತು. ಇದರಿಂದ ಒತ್ತಡಕ್ಕೊಳಗಾಗಿ ನಾನು ನಿಮ್ಮ ಮನೆಯಲ್ಲಿನ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದೆ. ನಾನು ಇನ್ನೆಂದಿಗೂ ಈ ರೀತಿ ಮಾಡಲ್ಲ. ದಯವಿಟ್ಟು ನನ್ನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಬೇಡಿ” ಎಂದು ಪತ್ರದಲ್ಲಿ ಮನವಿಮಾಡಿಕೊಂಡಿದ್ದ!
ಬಳಿಕ ಈ ಪ್ರಕರಣದ ತನಿಖೆ ಮುಂದುವರಿಸಬೇಡಿ, ತನ್ನ ಚಿನ್ನಾಭರಣ ವಾಪಸ್ ದೊರೆತಿದೆ ಎಂದು ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಮಾಧ್ಯಮದ ವರದಿ ತಿಳಿಸಿದೆ.