ಆಳಂದ: ಪಟ್ಟಣದ ಶರಣನಗರ ಬಡಾವಣೆಯ ಹತ್ತಿರದ ಮನೆಯೊಂದರ 57 ವರ್ಷದ ವ್ಯಕ್ತಿಯೋರ್ವನಿಗೆ ಕೋವಿಡ್ ಸೋಂಕು ತಗುಲಿದ ಕುರಿತು ಜಿಲ್ಲಾಡಳಿತ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಮೂರು ವಾರ್ಡ್‌ಗಳಿಗೆ ಬರುವ ಎಲ್ಲ ಭಾಗದ ಎಂಟು ರಸ್ತೆಗಳನ್ನು ತಾಲೂಕು ಆಡಳಿತ ಕೈಗೊಂಡ ಸೀಲ್‌ಡೌನ್ ಗೆ ಜನ ತತ್ತರಿಸಿ ಹೋಗಿದ್ದಾರೆ. ಸೋಂಕಿತನಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಸುಮಾರು ದಿನಗಳಿಂದಲೂ ಮನೆಯಲ್ಲೇ ಅನಾರೋಗ್ಯದಿಂದ ಬಳಲುತ್ತಿದ ವ್ಯಕ್ತಿ ಹೊರಗೇನು ಓಡಾಡಿಲ್ಲ. ಆದರೂ ಹೇಗೆ ಸೋಂಕು ತಗಲಿದೆ ಎಂದು ಪತ್ತೆ ಹಚ್ಚುವಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಹೆಣಗಾಡುವಂತೆ ಮಾಡಿದೆ.
ಈ ಮೊದಲು ಸೊಲ್ಲಾಪುರ ಮತ್ತು ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಅಲ್ಲದೆ, ಸ್ಥಳೀಯ ಖಾಸಗಿ ವೈದ್ಯರು ಮನೆಗೆ ಬಂದು ತಪಾಸಣೆ ಕೈಗೊಂಡಿದ್ದು, ಸಾಲದಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗಿದ್ದು, ಹೀಗಾಗಿ ಯಾವ ಸ್ಥಳದಲ್ಲಿ ಯಾರಿಂದ ಸೋಂಕು ಬಾಧಿಸಿದೆ ಎಂಬುದು ನಿಗೂಢವಾಗಿರುವುದು ಪತ್ತೆ ಹಚ್ಚುವಲ್ಲಿ ಅ ಧಿಕಾರಿಗಳಿಗೆ ಆತಂಕ ಮೂಡಿಸಿದೆ.
ಆತಂಕದಲ್ಲಿ ಜನರು: ಈ ಮೊದಲೇ ಕಳೆದ ಒಂದೂವರೆ ತಿಂಗಳಿಂದ ವಿಧಿ ಸಿದ ಲಾಕ್ ಡೌನ್‌ನಿಂದಾಗಿ ಜನ ಸಾಮಾನ್ಯರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಲಾಕ್‌ಡೌನ್ ತೆರವುಗೊಳ್ಳಬಹುದು ಎಂದು ನಿರೀಕ್ಷೆಯ ನಡುವೆ ವಾರ್ಡ್ 7ರಲ್ಲಿ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ಇಡೀ ಬಡಾವಣೆಗಳೆಲ್ಲ ಸೀಲ್‌ಡೌನ್ ಆಗಿರುವುದು ಪಟ್ಟಣ ಸೇರಿ ಗ್ರಾಮೀಣ ಭಾಗದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ಇಲ್ಲಿನ 4423 ಜನರನ್ನು ಹೋಂ ಕ್ವಾರಂಟೈನ್ ಇಡಲಾಗಿದೆ. ಪ್ರತಿದಿನ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಿತ್ಯ ಭೇಟಿ ನೀಡಿ ಇಲ್ಲಿನವರ ಆರೋಗ್ಯದ ಏರುಪೇರು ಗಮನಿಸಿ ನಿಗಾ ಇಡುತ್ತಿದ್ದಾರೆ. ಆರೋಗ್ಯದಲ್ಲಿ ಬದಲಾವಣೆ ಕಂಡುಬಂದಲ್ಲಿ ಇಎಸ್‌ಐ ಆಸ್ಪತ್ರೆಗೆ ಕಳುಹಿಸಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕಿತನಿಗೆ ಪ್ರಥಮ ಸಂಪರ್ಕಕ್ಕೆ ಬಂದ 56 ಜನರ ಪೈಕಿ ಖಾಸಗಿ ಹಾಗೂ ಸರ್ಕಾರಿ ವೈದ್ಯರು, ನರ್ಸ್ ಒಳಗೊಂಡು 50 ಜನರನ್ನು ಈಗಾಗಲೇ ಕಲಬುರಗಿ ಇಎಸ್‌ಐ ಆಸ್ಪತ್ರೆಗೆ ಮುಂಜಾಗ್ರತಾ ಕ್ರಮವಾಗಿ ತಪಾಸಣೆಗೆ ದಾಖಲಿಸಲಾಗಿದೆ.
ಪ್ರಥಮ ಸಂಪರ್ಕಕ್ಕೆ ಬಂದ ಇನ್ನೂ ಆರು ಜನರನ್ನು ಪತ್ತೆ ಹಚ್ಚುವಲ್ಲಿ ಆರೋಗ್ಯ ಇಲಾಖೆ ಕಾರ್ಯಾಚರಣೆ ಮುಂದುವರಿಸಿದೆ. ಸೋಂಕಿತನ ಮನೆಯ ಎಂಟು ಜನರು ಸೇರಿ ಬಂಧು ಬಾಂಧವರು ಹೀಗೆ ದ್ವಿತೀಯ ಸಂಪರ್ಕಕ್ಕೆ ಬಂದ ಒಟ್ಟು 192 ಎಂದು ಪ್ರಾಥಮಿಕವಾಗಿ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನೂ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಡಾ| ಜಿ. ಅಭಯಕುಮಾರ ,
ತಾಲೂಕು ಆರೋಗ್ಯಾಧಿಕಾರಿ
ಪಟ್ಟಣದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುವುದು ಅಗತ್ಯವಾಗಿದೆ. ಇದಕ್ಕೆ ನಾಗರಿಕರು ಸಹಕರಿಸಬೇಕು. ಜನರು ಪರಸ್ಪರ ಸಂಪರ್ಕಕ್ಕೆ ಬಾರದಂತೆ ನೋಡಿಕೊಂಡರೆ ಸೋಂಕು ನಿರ್ಮೂಲನೆ ಆಗಲಿದೆ.
ದಯಾನಂದ ಪಾಟೀಲ,
ತಹಶೀಲ್ದಾರ್.