ಆಳಂದ: ತಾಲೂಕಿನ ತಡಕಲ್ ಗ್ರಾಪಂ ವ್ಯಾಪ್ತಿಯ ಬಹಿರ್ದೆಸೆ ಮುಕ್ತ ಮಾದರಿ ಗ್ರಾಮ ಶುಕ್ರವಾಡಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಮದ ಕೆರೆ ಬಳಕೆದಾರರ ಸಂಘದ ಆಶ್ರಯದಲ್ಲಿ ರೈತರಿಗೆ ತಮ್ಮ ಜಮೀನುಗಳಿಗೆ ಉಚಿತವಾಗಿ ಕೆರೆ ಹೂಳೆತ್ತುವ 10 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ನಾಗರಾಜ ಶೆಟ್ಟಿ ಮಾತನಾಡಿ, ಕಾಮಗಾರಿಗೆ 10 ಲಕ್ಷ ರೂ. ನೀಡಲಾಗಿದ್ದು, 450 ಗಂಟೆಗಳ ಕಾಲ ಜೆಸಿಬಿ ಮೂಲಕ ಹೂಳೆತ್ತಲಾಗುವುದು. ರೈತರು ಸದ್ಭಳಕೆ ಮಾಡಿಕೊಳ್ಳಬೇಕು. ಅಲ್ಲದೆ ಹೂಳೆತ್ತಿದ ಫಲವತ್ತಾದ ಮಣ್ಣಿನ ಸದುಪಯೋಗವನ್ನು ಪಡೆಯಬೇಕು. ನೀರಿನ ಸಮಸ್ಯೆಗೆ ಇದು ಶಾಶ್ವತ ಪರಿಹಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಮಗಾರಿಗೆ ಚಾಲನೆ ನೀಡಿದ ಗ್ರಾಪಂ ಅಧ್ಯಕ್ಷ ಶಿವುಪುತ್ರ ಬೆಳ್ಳೆ ಗುದ್ದಲಿ ಪೂಜೆ ಮಾಡಿದರು. ನಂತರ ಮಾತನಾಡಿದ ಅವರು, ಕೆರೆಯಿಂದ ಮಣ್ಣನ್ನು ಹೊರಹಾಕಲು ಗ್ರಾಪಂನಿಂದ 60 ಸಾವಿರ ರೂ. ಅನುದಾನ ನೀಡಲಾಗುವುದು. ಇದೊಂದು ಸುವರ್ಣ ಅವಕಾಶ. ಬೇಡಿದವರಿಗೆ ಫಲವತ್ತಾದ ಮಣ್ಣು ಸಿಗೋದಿಲ್ಲ. ಈ ಕೆರೆ ಹೂಳೆತ್ತುವುದರಿಂದ ಸಾಕಷ್ಟು ಫಲವತ್ತಾದ ಮಣ್ಣು ದೊರಕುತ್ತದೆ. ಈ ಮಣ್ಣಿನ ಸದುಪಯೋಗ ಪಡೆಯಬೇಕು. ಕುಡಿಯುವ ನೀರಿನ ಸಮಸ್ಯೆಯೂ ವರ್ಷದಿಂದ ವರ್ಷಕ್ಕೆ ಗಂಭೀರ ಸಮಸ್ಯೆ ಪಡೆದುಕೊಳ್ಳುತ್ತಿದೆ. ಈ ಹೂಳೆತ್ತುವ ಕಾಮಗಾರಿಯನ್ನು ಎಲ್ಲರೂ ನಿಂತು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಪ್ರಾದೇಶಿಕ ನಿರ್ದೇಶಕ ಪ್ರಭು ಶಿವರಾಯ ಮಾತನಾಡಿ, ಬಿಸಿಲು ನಾಡಿನಲ್ಲಿ ನೀರಿನ ಸಮಸ್ಯೆ ತೀವ್ರ ಗತಿಯಲ್ಲಿ ಆಗುತ್ತಿದೆ. ಅದಕ್ಕಾಗಿ ಸರ್ಕಾರದ ಕೆರೆ ಸಂಜೀವಿನಿ ಮತ್ತು ಧರ್ಮಸ್ಥಳ ಸಂಸ್ಥೆಯ ಆಶ್ರಯದಲ್ಲಿ ಈ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಗ್ರಾಮಸ್ಥರು ಈ ಕಾಮಗಾರಿ ಯೋಜನೆಗೆ ಸಹಕರಿಸಬೇಕು. ಹೂಳು ತೆಗೆಯುವುದರಿಂದ ಕೃಷಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅನುಕೂಲವಾಗುತ್ತದೆ ಎಂದರು.
ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಸತೀಶ, ಕೃಷಿ ಅಧಿಕಾರಿ ಹುಚ್ಚಪ್ಪ, ಗ್ರಾಪಂ ಸದಸ್ಯ ಸೈಬಣ್ಣ ಲಾಡಂತಿ ಹಾಗೂ ಗ್ರಾಮಸ್ಥರು ಇದ್ದರು. ರಾಜೇಂದ್ರ ದಾಡಗೆ ಸ್ವಾಗತಿಸಿದರು.