Advertisement

ನೀರು ಸಿಕ್ಕರೆ ಯುದ್ದ ಗೆದ್ದ ಭಾವ

11:06 AM May 19, 2019 | Naveen |

ಆಳಂದ: ತಾಲೂಕಿನ ಹಳ್ಳಿಗಳಲ್ಲಿ ಹನಿ ನೀರಿಗೂ ಹಾಹಾಕಾರ ಮುಂದುವರಿದಿದ್ದು, ನೀರಿಗಾಗಿ ನೀರೆಯರು ಹಗಲಿರುಳು ಕೊಡಗಳನ್ನು ಕೈಯಲ್ಲಿಡಿದು ಓಡಾಡುವ ದೃಶ್ಯ ಸಾಮಾನ್ಯವಾಗಿದೆ.

Advertisement

ಮಾಡಿಯಾಳ ಗ್ರಾಮಸ್ಥರಿಗೆ ಕುಡಿಯಲು ಟ್ಯಾಂಕರ್‌ ಮೂಲಕವಾದರು ನೀರು ಒದಗಿಸಬೇಕು ಹಾಗೂ ನಿರಂತರ ವಿದ್ಯುತ್‌ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಒತ್ತಾಯಿಸಿ ವಾರದ ಹಿಂದೆ ಪ್ರತಿಭಟನೆ ನಡೆಸಿದ ಬಳಿಕವೂ ಪರಿಸ್ಥಿತಿ ಇನ್ನೂ ಬದಲಾಗಿಲ್ಲ ಎಂದು ಗ್ರಾಮದ ಭೀಮಾಶಂಕರ ಮಾಡಿಯಾಳ, ಅರ್ಜುನ ಬಂಡೆ, ವಿಠuಲ ಮದರಿ, ಕುಪೇಂದ್ರ ಶ್ರೀಗಣಿ ಆರೋಪಿಸಿದ್ದಾರೆ.

ಮಾಡಿಯಾಳ, ಜಿರಹಳ್ಳಿ, ನಿರಗುಡಿ, ಅಂಬಲಗಾ, ಕವಲಗಾ ಹೀಗೆ ಮತ್ತಿತರ ಹಳ್ಳಿಗಳಲ್ಲಿ ಸುಮಾರು ಎರಡು ತಿಂಗಳಿಂದಲೂ ಸಮಸ್ಯೆ ಎದುರಾಗಿದೆ. ನೀರಿಗಾಗಿ ಬಾವಿ, ಕೊಳವೆ ಬಾವಿಗಳಿಗೆ ಮಹಿಳೆಯರು, ಮಕ್ಕಳು, ವಯೋವೃದ್ಧರು ಕೊಡ ಹಿಡಿದು ಒಂದೇ ಸವನೆ ಅಲೆಯುತ್ತಿದ್ದಾರೆ. ಅಲ್ಲೂ ನೀರು ಸಿಕ್ಕರೆ ಸಿಕ್ಕಿತು. ಇಲ್ಲದಿದ್ದರೆ ಇಲ್ಲ. ಒಂದೊಮ್ಮೆ ನೀರು ಸಿಕ್ಕರೆ ಯುದ್ದವೇ ಗೆದ್ದ ಭಾವ ಮೂಡುತ್ತದೆ ಎನ್ನುತ್ತಾರೆ ಹಳ್ಳಿಗರು.

ಯುವಕರು, ಮಕ್ಕಳು ನೀರಿಲ್ಲದಕ್ಕೆ ಸ್ನಾನ ಮಾಡದೆ ಬರೀ ಕೈಕಾಲು ಮುಖ ತೊಳೆದು ದಿನದೂಡಿದರೆ, ಬಟ್ಟೆ ತೊಳೆಯುಲು ಸಹ ಮೂರ್‍ನಾಲ್ಕು ದಿನಕ್ಕೊಮ್ಮೆ ತೊಳೆಯುವ ಸ್ಥಿತಿ ಎದುರಾಗಿದೆ. ಜಾನುವಾರುಗಳನ್ನು ತೊಟ್ಟಿಗಳಿಗೆ ಕೊಂಡ್ಯೊದು ನೀರು ಕುಡಿಸುವ ಅನಿವಾರ್ಯವಾಗಿದೆ. 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈಗಾಗಲೇ ಟ್ಯಾಂಕರ್‌ ಮೂಲಕ ನೀರು ಒದಗಿಸಿದರೆ, ಇನ್ನೂ 30ಕ್ಕೂ ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್‌ ನೀರಿನ ಬೇಡಿಕೆ ಬಂದಿದೆ. ಸಮಸ್ಯೆ ಕುರಿತು ತಾಲೂಕಿನ ಅಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಜಿಲ್ಲಾಡಳಿತ ಕೂಡಲೇ ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಅಗತ್ಯ ಅನುದಾನ ಒದಗಿಸಿ ಟ್ಯಾಂಕರ್‌, ಕೊಳವೆ ಬಾವಿ, ಜಲ ಮೂಲಗಳಿಂದ ನೀರು ತಂದು ಪೂರೈಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

Advertisement

ಸಹಾಯವಾಣಿ ಕೇಂದ್ರ ಸ್ಥಾಪನೆ
ಕಲಬುರಗಿ:
ಜಿಲ್ಲೆಯ 7 ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿವ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದಲ್ಲಿ ಸಾರ್ವಜನಿಕರು ದೂರು ನೀಡಲು ಕಲಬುರಗಿ ತಾಪಂ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ ಅವರು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ದೂರು ನೀಡಬಹುದಾಗಿದೆ. ಅಫಜಲಪುರ 08470-283024. ಆಳಂದ 08477-202102, ಮೊ. ಸಂಖ್ಯೆ 9742971700 ಹಾಗೂ 9036621394. ಚಿಂಚೋಳಿ 9845598521, 7090372995. ಚಿತ್ತಾಪುರ 08474-236111. ಜೇವರ್ಗಿ 08442-236896. ಕಲಬುರಗಿ 08472-249352. ಸೇಡಂ 08441-276036. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 1077 ಹಾಗೂ 08472-278677ಗೆ ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next