Advertisement

ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಉದ್ಘಾಟನೆಗೆ ಸಜ್ಜು

09:58 AM Jun 02, 2019 | Naveen |

ಮಹಾದೇವ ವಡಗಾಂವ
ಆಳಂದ:
ತೀರಾ ಹಿಂದುಳಿದ ಭಾಗದಲ್ಲೊಂದು ಸರ್ಕಾರದಿಂದ ನಿರ್ಮಿತವಾದ ವೃಕ್ಷೋದ್ಯಾನವೊಂದು ಗಾಣಗಾಪುರ ರಸ್ತೆ ಮಾರ್ಗದಲ್ಲಿನ ಕೋರಳ್ಳಿ ಹತ್ತಿರದಲ್ಲಿ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

Advertisement

ಪಟ್ಟಣದಿಂದ ಏಳು ಕಿ.ಮೀ. ಅಂತರದ ಕೋರಳ್ಳಿ ಗ್ರಾಮದ ಸೀಮೆಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯ ಬಯಲು ಗುಡ್ಡದಲ್ಲಿ ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಸಾಲುಮರದ ತಿಮ್ಮಕ್ಕನ ವೃಕ್ಷೋದ್ಯಾನ ಹಸಿರಿನಿಂದ ಕಂಗೊಳಿಸತೊಡಗಿದೆ.

ಜೀವಸಂಕುಲಕ್ಕೆ ಸ್ವಚ್ಛ ಪರಿಸರ, ಹಸಿರುವನ ಹಾಗೂ ಪರಿಸರ ಸಂರಕ್ಷಣೆ, ಶುದ್ಧ ಗಾಳಿಯ ವಾತಾವರಣ ಸೃಷ್ಟಿಸುವ ಉದ್ದೇಶದಿಂದ 2018ರಲ್ಲಿ ರಾಜ್ಯ ಸರ್ಕಾರ ಅನೇಕ ತಾಲೂಕುಗಳಲ್ಲಿ ಸಾಲುಮರದ ತಿಮ್ಮಕ್ಕನ ಹೆಸರಿನ ವೃಕ್ಷೋಧ್ಯಾನ ನಿರ್ಮಾಣ ಯೋಜನೆ ಕೈಗೆತ್ತಿಕೊಂಡ ಪರಿಣಾಮ ತಾಲೂಕಿನ ಕೋರಳ್ಳಿ ಗ್ರಾಮದ ಹತ್ತಿರದಲ್ಲಿ ‘ಟ್ರೀ ಪಾರ್ಕ್‌’ ಶೇ 80ರಷ್ಟು ಪೂರ್ಣವಾಗಿ ಪರಿಸರ ಆಸಕ್ತರನ್ನು ಆಕರ್ಷಿಸತೊಡಗಿದೆ.

ಒಟ್ಟು 36 ಹೆಕ್ಟೇರ್‌ ಪ್ರದೇಶದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯು ವೃಕ್ಷೋದ್ಯಾನ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಮೊದಲ ಹಂತದಲ್ಲಿ 36 ಹೆಕ್ಟೇರ್‌ ಪ್ರದೇಶ ಸಂರಕ್ಷಣೆಗಾಗಿ ಸುತ್ತಲೂ ತಂತಿಬೇಲಿ ಹಾಕಲಾಗಿದೆ. ನುರಿತ ಕಲಾವಿದರಿಂದ ವನ್ಯ ಜೀವಿಗಳ ಚಿತ್ರ ಬಿಡಿಸಲಾಗಿದೆ. ಅಲ್ಲದೇ ಆಗಮಿಸುವ ಮಕ್ಕಳಿಗೆ 15 ವಿವಿಧ ಆಟಿಕೆಗಳಿಗಾಗಿ ಪರಿಕರಗಳನ್ನು ಸ್ಥಾಪಿಸಲಾಗಿದೆ. ನಾಗರಿಕರಿಗೆ ಕುಳಿತುಕೊಳ್ಳಲು ಹತ್ತು ಪ್ರತ್ಯೇಕ ಆಸನಗಳು, ಹಸಿರುವನ ಕಂಗೊಳಿಸುವಂತೆ ಮಾಡಲು ಆವರಣದಲ್ಲಿ ಸುಮಾರು 60 ಜಾತಿಯ ನೂರಾರು ಗಿಡ, ಮರಗಳನ್ನು ನೆಟ್ಟು ಬೆಳಸಲಾಗಿದೆ. ಸಾಮೂಹಿಕವಾಗಿ ಕುಳಿತುಕೊಳ್ಳಲು ಮಧ್ಯಭಾಗದಲ್ಲಿ ಪರಗೋಲಾ (ನೆರಳಿಗಾಗಿ) ಸ್ಥಾಪಿಸಲಾಗಿದೆ. ವಿದ್ಯುತ್‌ ಕೊರತೆಯಾಗಬಾರದು ಎನ್ನುವ ಉದ್ದೇಶದಿಂದ ಕಾಯಂ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ. ಆಗಮಿಸುವ ಜನರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆವರಣದಲ್ಲಿ ಕೊಳವೆ ಬಾವಿ ತೋಡಿಸಿದ್ದು, ಈ ನೀರನ್ನೇ ಉದ್ಯಾನವನಕ್ಕೆ ಪೂರೈಕೆ ಮಾಡಲಾಗುತ್ತಿದೆ. ವೃಕ್ಷೋದ್ಯಾನಕ್ಕೆ ಬರುವವರಿಗೆ ಎರಡು ಟಿಕೆಟ್ ಕೌಂಟರ್‌ ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದರವನ್ನು ಅಧಿಕಾರಿಗಳು ನಿಗದಿಪಡಿಸಲಿದ್ದಾರೆ.

ಉದ್ಯಾನವನದ ನಿರ್ವಹಣೆ ಸಾಮಗ್ರಿಗಳನ್ನಿಡಲು ದಾಸ್ತಾನು ಕೋಣೆ ನಿರ್ಮಿಸಲಾಗಿದೆ. ಅಲ್ಲದೇ ಆವರಣದಲ್ಲಿ ಕಸ ಬೀಳದಂತೆ ನೋಡಿಕೊಳ್ಳಲು ಅಲ್ಲಲ್ಲಿ 10 ಕಸದ ತೊಟ್ಟಿಗಳನ್ನು ಇಡಲಾಗಿದೆ. ಇನ್ನು ಮುಂದುವರಿದ ಕಾಮಗಾರಿಗಳ ನಡುವೆ ಉದ್ಘಾಟನೆಗೆ ಸಜ್ಜಾಗಿರುವ ವೃಕ್ಷೋದ್ಯಾನ ಕಾಮಗಾರಿಯನ್ನು ಐದು ವರ್ಷದೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಒದಗಿಸುವ ಉದ್ದೇಶ ಹೊಂದಲಾಗಿದೆ.

Advertisement

ಪ್ರಸಕ್ತ ಜೂನ್‌ ತಿಂಗಳಲ್ಲಿ 1002 ರೀತಿಯ ಸ್ಥಳೀಯ ಮತ್ತು ಹೂವಿನ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಕಾಮಗಾರಿ ಕೈಗೆತ್ತಿಕೊಂಡಂತೆ ಅನುದಾನ ಬಿಡುಗಡೆ ಯಾಗುತ್ತದೆ. ಈಗಾಗಲೇ ಪೂರ್ಣಗೊಂಡಿರುವ ವೃಕ್ಞೋದ್ಯಾನವನ್ನು ಸೂಕ್ತ ದಿನಾಂಕ ನೋಡಿ ಲೋಕಾರ್ಪಣೆ ಮಾಡಲಾಗುವುದು. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಜಗನ್ನಾಥ ಕೋರಳ್ಳಿ ,
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next