ಆಳಂದ: ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಈ ತಿಂಗಳ 25ರಿಂದ ಆರಂಭಗೊಳ್ಳಲಿರುವುದರಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಸುಭಾಷ ಗುತ್ತೇದಾರ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ ಸ್ಯಾನಿಟೈಸರ್ ಮಾಡಿಸಬೇಕು ಎಂದು ಹೇಳಿದರು.
ಪರೀಕ್ಷಾ ಕೇಂದ್ರಕ್ಕೆ ಬರುವಾಗ ವಿದ್ಯಾರ್ಥಿಗಳು ಕಾಯಿಸಿ ಆರಿಸಿದ ನೀರನ್ನು ತರಲು ಮತ್ತು ಪರೀಕ್ಷಾ ಕೇಂದ್ರದಲ್ಲಿ ಆಹಾರ ವಿತರಿಸುವ ವ್ಯವಸ್ಥೆಯನ್ನು ದಾನಿಗಳಿಂದ ಅಥವಾ ಪಾಲಕರಿಂದ ಮಾಡಿಸಲು, ಪರೀಕ್ಷಾ ಅವಧಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಹಕರಿಸುವುದು, ಪರೀಕ್ಷಾ ಕೇಂದ್ರದಲ್ಲಿ ಕಲಂ 144ನೇ ಜಾರಿಗೊಳಿಸುವುದು, ಮಹಾರಾಷ್ಟ್ರದಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಯಲ್ಲಿ ವ್ಯವಸ್ಥೆ ಮಾಡುವುದು ಸೇರಿದಂತೆ ಪರೀಕ್ಷೆ ಬರೆಯಲಿರುವ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಕರು ಮೊಬೈಲ್ ಮೂಲಕ ಕರೆ ಮಾಡಿ ಆತ್ಮಸ್ಥೈರ್ಯ ತುಂಬಬೇಕು ಎಂದು ಸೂಚಿಸಿದರು.
ಪರೀಕ್ಷಾ ಭಯ ನಿವಾರಿಸುವ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣಿ ಆರಂಭಿಸಿ ಅದಕ್ಕೆ ಮರೇಪ್ಪ ಬಡಿಗೇರ, ಶರಣಯ್ಯ ಸ್ವಾಮಿ ಅವರನ್ನು ನೇಮಿಸಲಾಯಿತು. ಮಾಸ್ಕ್ ಮತ್ತು ಸ್ಯಾನಿಟೈಸರ್ ಸರ್ಕಾರದಿಂದ ಬಂದಿವೆ. ಅಗತ್ಯ ಬಿದ್ದಲ್ಲಿ ದಾನಿಗಳಿಂದ ಪಡೆಯಲು ಸಭೆಯಲ್ಲಿ ಸಲಹೆ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರೀಕ್ಷೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರವಹಿಸಬೇಕು. ಕೋಣೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಿಗಾವಹಿಸಬೇಕು. ಸಾರಿಗೆ ಇಲಾಖೆಯವರು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್
ಓಡಿಸಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಸಲಹೆ ನೀಡಲಾಯಿತು.
ಸಹಾಯಕ ಆಯುಕ್ತ ರಾಮಚಂದ್ರ ಗಡದೆ, ತಹಶೀಲ್ದಾರ್ ದಯಾನಂದ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಪ್ಪ ನೇರಡಗಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಸಂಜಯರೆಡ್ಡಿ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ್ ವಿಭೂತೆ, ಟಿಎಚ್‌ಒ ಡಾ| ಅಭಯಕುಮಾರ, ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ ಫುಲಾರ್, ಪರೀಕ್ಷಾ ನೋಡಲ್ ಅಧಿಕಾರಿ ಮರೆಪ್ಪ ಎನ್. ಬಡಿಗೇರ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಇದ್ದರು.