ಆಳಂದ: ತಹಶೀಲ್ದಾರ್ ಕಚೇರಿ ಎದುರು ಭಾರತೀಯ ಖೇತ್ ಮಜ್ದೂರ್ ಯೂನಿಯನ್ ಹಾಗೂ ಅಖೀಲ ಭಾರತ ಕಿಸಾನ್‌ಸಭಾ ಮೂರುದಿನಗಳಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಅಧಿಕಾರಿಗಳು ನೀಡಿದ ಭರವಸೆಯಿಂದಾಗಿ ಮುಖಂಡರು ತಾತ್ಕಾಲಿಕವಾಗಿ ವಾಪಸ್ ಪಡೆದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಬಸವರಾಜ ಎಂ. ಬೆಣ್ಣೆಶಿರೂರ ಅವರು, ಮಳೆ ಮುಂದೂಡಿದರೆ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಅಂತರ್ಜಲ ಹೆಚ್ಚಿಸುವುದು ಹಾಗೂ ನಗರ ಹಾಗೂ ಗ್ರಾಮೀಣ ಜನರಿಗೆ ಕೂಲಿ ಕೆಲಸದ ಬೇಡಿಕೆಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಳೆಗಾಲ ಮಳೆ ಸಕಾಲಕ್ಕೆ ಬರುವ ಲಕ್ಷಣದಿಂದ ಕೃಷಿ ಚಟುವಟಿಕೆ ಚುರುಕಾಗುವ ಲಕ್ಷಣ ಕಂಡುಬರುತ್ತಿದೆ. ಇದರಿಂದ ಇದರಿಂದ ನೀರು, ಮೇವಿನ ಸಮಸ್ಯೆ ಬಗೆ ಹರಿಯಲಿದೆ. ಮಳೆ ಮುಂದೂಡಿದರೆ ನೀರು, ಮೇವು ಒದಗಿಸಲು ವಿಳಂಬ ಮಾಡಬೇಡಿ ಎಂದು ಕಿಸಾನಸಭಾ ಅಧ್ಯಕ್ಷ ಮೌಲಾ ಮುಲ್ಲಾ ಹೇಳಿದರು.
ಬರ ದೇವರು ಸೃಷ್ಟಿಸಿದ ವರವಲ್ಲ. ಬಿದ್ದ ಮಳೆಯಲ್ಲೇ ಅಂತರ್ಜಲ ಹೆಚ್ಚಿಸಿ ಕೃಷಿಗೆ ನೀರು ಒದಗಿಸಲು ಮುಂದಾದರೆ ಬರ ಹಿಂಗುತ್ತದೆ. ಈ ಕೆಲಸ ತಾಲೂಕಿನಾದ್ಯಂತ ಭರದಿಂದ ಸಾಗಲು ಕಾಮಗಾರಿ ನಡೆಯದಿದ್ದರೇ ಮತ್ತೆ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದರು.
ಸ್ಥಳೀಯ ಮಟ್ಟದ ತಾಪಂ, ಪುರಸಭೆ, ಕಂದಾಯ ಅಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುವುದಾಗಿ ತಿಳಿಸಿದ್ದರಿಂದ ಧರಣಿ ಹಿಂದಕ್ಕೆ ಪಡೆಯಲಾಯಿತು.
ರಮೇಶ ಲೋಹಾರ, ಪುರಸಭೆ ಸದಸ್ಯ ಧೋಂಡಿಬಾ ಸಾಳುಂಕೆ, ಫಕ್ರೋದ್ದೀನ ಗೋಳಾ, ದತ್ತಾತ್ರೆಯ ಕಬಾಡೆ, ಕಲ್ಯಾಣಿ ತುಕಾಣಿ ಮತ್ತಿತರು ಪಾಲ್ಗೊಂಡಿದ್ದರು.