ಆಳಂದ: ಮಹಾಮಾರಿ ಕೋವಿಡ್ ಹರಡದಂತೆ ನೋಡಿಕೊಳ್ಳಲು ಲಾಕ್‌ಡೌನ್‌ಗೆ ಸರ್ಕಾರದೊಂದಿಗೆ ನಾಗರಿಕರು ಕೈಜೋಡಿಸುವುದು ಅಗತ್ಯವಾಗಿದೆ ಎಂದು ಬೀದರ ಸಂಸದ ಭಗವಂತ ಖೂಬಾ ಜನರಲ್ಲಿ ಮನವಿ ಮಾಡಿದರು. ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಬಳಿಕ ತಹಶೀಲ್ದಾರ್ ಅವರಿಂದ ಲಾಕ್‌ಡೌನ್ ಸಾಧಕ-ಬಾಧಕ ಕುರಿತು ಮಾಹಿತಿ ಕಲೆಹಾಕಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಈ ಕಾರ್ಯಕ್ಕೆ ಶಾಸಕ ಸುಭಾಷ ಗುತ್ತೇದಾರ ಸೇರಿದಂತೆ ತಾಲೂಕಿನ ಅಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿರ್ಗತಿಕರಿಗೆ ಆಹಾರ ಒದಗಿಸುವುದಾಗಲಿ, ಬಡವರಿಗೆ ದವಸ -ಧಾನ್ಯ ನೀಡುತ್ತಿದ್ದಾರೆ. ಅದೇ ರೀತಿ ವ್ಯಾಪಾರಿಗಳು ಕಿರಾಣಿ ಅಂಗಡಿ ತೆರೆದು ದವಸ-ಧಾನ್ಯ ಒದಗಿಸುತ್ತಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತು ಸಾರ್ವಜನಿಕರು ಮನೆಯಲ್ಲೇ ಸುರಕ್ಷಿತವಾಗಿರಬೇಕು ಎಂದು ಕೋರಿದರು.
ಲಾಕ್‌ಡೌನ್ ಕೇವಲ ಜನತೆಗಷ್ಟೇ ಅಲ್ಲ, ಪೊಲೀಸರು ಸಂಕಷ್ಟದಲಿದ್ದು, ತಾಳ್ಮೆಯಿಂದಿರಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, “ಗರೀಬ್ ಕಲ್ಯಾಣ’ ಯೋಜನೆ ರೂಪಿಸಿ ದೇಶದ 80 ಕೋಟಿ ಜನರಿಗೆ 1 ಲಕ್ಷ 75 ಸಾವಿರ ಕೋಟಿ ರೂ. ಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಜನ್‌ಧನ್ ಖಾತೆಗೆ 500ರೂ. ಬಂದಿದೆ. ಕಿಸಾನ ಸಮ್ಮಾನ ಯೋಜನೆ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತಿದೆ. ಬಡವರಿಗೆ ಎರಡು ತಿಂಗಳ ರೇಷನ್ ಏಕಕಾಲಕ್ಕೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಕಡೆ ಇದರಿಂದ ಜನದಟ್ಟಣೆ ಆಗುತ್ತಿದೆ. ದಟ್ಟಣೆ ಆಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗುವುದು ಎಂದರು. ಶಾಸಕ ಸುಭಾಷ ಗುತ್ತೇದಾರ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಇನ್ನಿತರರು ಇದ್ದರು.