ಆಳಂದ: ಖಜೂರಿ ಮತ್ತು ಆಳಂದ ವಲಯದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ತಡಕಲ್ ಮಾರ್ಗದ ಹೆದ್ದಾರಿ ರಸ್ತೆ ಸೇತುವೆ ಕೊಚ್ಚಿಹೋಗಿ ಸಂಚಾರ ಸ್ಥಗಿತಗೊಂಡು ವಾಹನ ಹಾಗೂ ಜನ ಸಂಚಾರ ಸ್ಥಗಿತಗೊಂಡು ಪರದಾಡುವಂತಾಗಿದೆ.
ಬುಧವಾರ, ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಪಟ್ಟಣದ ಎಚ್‌ಕೆಇ ಪದವಿ ಕಾಲೇಜು ಹಾಗೂ ತಡಕಲ್ ಮಾರ್ಗದ ದಬದಬಿ ಹಳ್ಳ ಉಕ್ಕಿ ಹರಿದು ಸಂಚಾರಕ್ಕೆ ತಡೆಯಾಗಿ ತೊಂದರೆಯಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಇದೇ ಮಾರ್ಗದ ಗುತ್ತೇದಾರ ಹೊಲದ ಬಳಿಯ ಹೆದ್ದಾರಿಯ ಸೇತುವೆ ಮತ್ತೂಮ್ಮೆ ಕೊಚ್ಚಿಹೋಗಿ ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ. ಸಾರಿಗೆ ಸಂಸ್ಥೆಯ ಬಸ್‌ಗಳು, ಲಾರಿ, ಜೀಪುಗಳು ಮಾರ್ಗಬದಲಿಸಿ ಸಂಚರಿಸುತ್ತಿವೆ. ಶಾಲಾ, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೂಲಕ ಪ್ರಯಾಣಿಸುತ್ತಿದ್ದಾರೆ.
ಹೆಚ್ಚಿನ ಮಳೆಯಿಂದ ಆಳಂದ, ಖಜೂರಿ, ನರೋಣಾ, ಕೊರಳ್ಳಿ ಭಾಗದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಮಳೆ ನೀರಿಗೆ ತೊಗರಿ, ಸೂರ್ಯಕಾಂತಿ, ಸೋಯಾಬಿನ್ ಬೆಳೆ ನಷ್ಟವಾಗುವ ಆಂತಕ ಮೂಡಿಸಿದೆ.
ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ವರೆಗೆ ಆಳಂದ ವಲಯದಲ್ಲಿ 67 ಮಿ.ಮೀ, ಖಜೂರಿ 70.2 ಮಿ.ಮೀ, ನರೋಣಾ 13.2 ಮಳೆಯಾದರೆ, ಸರಸಂಬಾ 31 ಮಿ.ಮೀ, ಕೊರಳ್ಳಿ 7 ಮಿ.ಮೀ ಮಳೆಯಾದರೆ, ನಿಂಬರಗಾ ಮತ್ತು ಮಾದನಹಿಪ್ಪರಗಾ ವಲಯದಲ್ಲಿ ಮಳೆಯಾಗಿಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ತಹಶೀಲ್ದಾರ ಭೇಟಿ: ವಳವಂಡವಾಡಿ, ತಡಕಲ್ ಮಾರ್ಗದ ರಸ್ತೆ ಸೇತುವೆ ಕೊರೆದು ಸಂಚಾರ ಕಡಿತಗೊಂಡ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ತಾತ್ಕಾಲಿಕವಾಗಿ ಸಂಚಾರ ಆರಂಭಕ್ಕೆ ಸೇತುವೆ ದುರಸ್ತಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.