ಆಳಂದ: ಬೇಸಿಗೆ ಬವಣೆಗೆ ತಾಲೂಕಿನ 33 ಕೆರೆಗಳ ಪೈಕಿ 29 ಕೆರೆಗಳು ಸಂಪೂರ್ಣ ನೀರಿಲ್ಲದೆ ಬತ್ತಿ ಹೋಗಿದ್ದು, ಈ ಭಾಗದ ಜೀವ ಸಂಕುಲ ಒದ್ದಾಡುವಂತೆ ಆಗಿದೆ.
ಬೇಸಿಗೆ ಬಂದರೆ ಗ್ರಾಮೀಣ ಭಾಗದಲ್ಲಿ ಕೆರೆ ನೀರನ್ನೇ ಆಶ್ರಯಿಸುತ್ತಿದ್ದ ಜನ ಹಾಗೂ ಜಾನುವಾರುಗಳಿಗೆ ಇತ್ತೀಚೆಗೆ ಪ್ರತಿ ಬೇಸಿಗೆಯಲ್ಲಿಯೂ ಕೆರೆಗಳು ಒಣಗುತ್ತಿರುವ ಸನ್ನಿವೇಶ ಎದುರಾಗುತ್ತಿದ್ದು, ಇದರಿಂದ ಕೆರೆ ಸುತ್ತಮುತ್ತಲಿನ ಪ್ರದೇಶ ಹಾಗೂ ಕೆಳಭಾಗದಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದು ನೀರಿನ ದಾಹ ಹೆಚ್ಚತೊಡಗಿದೆ.
ಎರಡು ದಶಕಗಳ ಹಿಂದೆ ಜಿಲ್ಲೆಗೆ ನೀರಾವರಿ ಕ್ಷೇತ್ರದಲ್ಲಿ ಮುನ್ನುಡಿ ಬರೆದಿದ್ದ ತಾಲೂಕು ಈಗ ನೀರಿಲ್ಲದೆ ಕೃಷಿ ಕ್ಷೇತ್ರ ಕುಗ್ಗಿ ಹೋಗಿದೆ. ನೀರಾವರಿ ಕಲ್ಪಿಸುವ ಉದ್ದೇಶದಿಂದ ಹುಟ್ಟಿಕೊಂಡ ಅಮರ್ಜಾ ಅಣೆಕಟ್ಟು ಈಗ ಕುಡಿಯುವ ನೀರು ಪೂರೈಕೆಗೆ ಸೀಮಿತವಾಗಿ ಬಿಟ್ಟಿದೆ. ಹೀಗಾಗಿ ಮಳೆ ಕೊರತೆಯಿಂದ ಬತ್ತುತ್ತಿರುವ ಕೆರೆ-ಗೋಕಟ್ಟೆಗಳಿಂದ ಕುಡಿಯುವ ನೀರಿಗಷ್ಟೇ ಅಲ್ಲದೆ, ನೀರಾವರಿ ಕೃಷಿಗೆ ಪೆಟ್ಟು ಬಿದ್ದಿದ್ದು, ಶಾಶ್ವತ ಪರಿಹಾರ ದೊರೆಯದೆ ಬೇಸಿಗೆ ಬಂದರೆ ಕುಡಿಯಲು ನೀರು ಸಿಕ್ಕರೆ ಸಾಕಪ್ಪ ಎನ್ನುವ ಮಟ್ಟಕ್ಕೆ ಪರಿಸ್ಥಿತಿ ಬಂದೊದಗಿದೆ.
ತಾಲೂಕಿನ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 33 ಕೆರೆಗಳ ಪೈಕಿ ಆಳಂದ, ಸಾಲೇಗಾಂವ, ಬೆಳಮಗಿ, ಮಟಕಿ, ಹಡಲಗಿ, ನಿಂಬಾಳ, ಕೆರೂರ, ನರೋಣಾ, ಬೆಳಮಗಿ ಈ ಎಂಟು ಕೆರೆಗಳಲ್ಲಿ ಶೇ. 50ರಷ್ಟು ಮಾತ್ರ ನೀರು ಸಂಗ್ರಹವಿದೆ. ಇಲ್ಲಿನ ಹಳ್ಳಿಗರ ಪ್ರಾಣಿ, ಪಕ್ಷಿಗಳಿಗೆ ಕೊಂಚ ನೆಮ್ಮದಿ ಇದೆ. ಆದರೆ ಆರಂಭದಲ್ಲಿ ಈ ಕೆರೆಗಳ ಉದ್ದೇಶವೇ ರೈತರ ಜಮೀನುಗಳಿಗೆ ನೀರೊದಗಿಸುವ ಉದ್ದೇಶವಾಗಿತ್ತು. ಆದರೆ ಯಾವ ಕೆರೆಯ ಕಾಲುವೆಯೂ ಇಂದು ಜೀವಂತವಿಲ್ಲ. ಇತ್ತ ವರ್ಷ ಕಳೆದಂತೆ ಬೇಸಿಗೆಯಲ್ಲಿ ನೀರು ಉಳಿಯುತ್ತಿಲ್ಲ. ಹೀಗಾಗಿ ಕೆರೆಗಳಿಗೆ ಮಳೆಗಾಲದಲ್ಲಿ ಒಂದೊಮ್ಮೆ ಹೆಚ್ಚಿನ ಮಳೆ ಬಂದು ಅಧಿಕ ಪ್ರಮಾಣದ ನೀರು ಸಂಗ್ರಹಿಸಿಕೊಳ್ಳಲು ಕಾಯಕಲ್ಪದ ಕೆಲಸ ನಡೆದರೆ, ಪ್ರತಿ ಬೇಸಿಗೆಯಲ್ಲಿಯೂ ಉಂಟಾಗುವ ನೀರಿನ ತಾಪತ್ರಯ ತಪ್ಪಿಸುವ ಕೆಲಸ ಮಾಡಬೇಕಾಗಿರುವುದು ಅತ್ಯಂತ ಜರೂರಿಯಾಗಿದೆ.
ಮತ್ತೂಂದೆಡೆ ಇನ್ನುಳಿದ 25 ಕೆರೆಗಳಲ್ಲಿ ಸೆಪ್ಟೆಂಬರ್ ಹಾಗೂ ಕೆಲವು ಡಿಸೆಂಬರ್ ತಿಂಗಳಲ್ಲೇ ಸಂಪೂರ್ಣ ಬತ್ತಿ ಹೋಗಿದ್ದು, ಕೆಲವು ಕೆರೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲದೇ 2012ರಲ್ಲಿ ತಾಲೂಕಿನ ಪಡಸಾವಳಿ ಕೋತನಹಿಪ್ಪರಗಾ ಮತ್ತು ನಿಂಬರಗಾ ಗ್ರಾಮಕ್ಕೆ ಹೊಸ ಕೆರೆ ನಿರ್ಮಾಣಕ್ಕೆ ಮಂಜೂರಾತಿ ದೊರೆತರೂ ಅಧಿಕಾರಿಗಳ ನಿರಾಸಕ್ತಿಯಿಂದ ಇದುವರೆಗೂ ಕಾಮಗಾರಿ ಆರಂಭಕ್ಕೆ ಚಾಲನೆ ದೊರೆತಿಲ್ಲ. ಹೆಚ್ಚೆಚ್ಚು ಕೆರೆ, ಗೋಕಟ್ಟೆಗಳ ನಿರ್ಮಾಣ ಮತ್ತು ಇದ್ದ ಕೆರೆಗಳಿಗೆ ನಿರ್ವಹಣೆ ಕೆಲಸ, ಮಳೆಗಾಲದಲ್ಲಿ ಕೆರೆಗಳ ನೀರು ವ್ಯಯವಾಗದಂತೆ ನೋಡಿಕೊಂಡರೆ ಬೇಸಿಗೆಯಲ್ಲಿ ಜೀವಜಲಕ್ಕೆ ಪರದಾಟ ತಪ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಆಳುವ ಜನ ಪ್ರತಿನಿಧಿಗಳು ಹೆಜ್ಜೆ ಹಾಕುವರೆ ಎನ್ನುವುದನ್ನು ಕಾಯ್ದುನೋಡಬೇಕಿದೆ.
33 ಕೆರೆಗಳ ಪೈಕಿ 29 ಕೆರೆಗಳು ಬತ್ತಿಹೋಗಿವೆ. ನಾಲ್ಕು ಕೆರೆಗಳಲ್ಲಿ ಅರ್ಧದಷ್ಟು ನೀರಿದ್ದು, ಕೃಷಿ ಪೂರೈಕೆಗೆ ಅವಕಾಶ ನೀಡದೆ, ಜನ ಜಾನುವಾರುಗಳ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಮೂರು ಕೆರೆಗಳು ಮಂಜರಾದರೂ ಸಹಿತ ಭೂಸ್ವಾಧಿಧೀನ ಕೈಗೊಂಡು ಪರಿಹಾರ ಮೊತ್ತ ಪಾವತಿಸುವಲ್ಲಿ ವಿಳಂಬವಾಗಿದ್ದರಿಂದ ಕಾಮಗಾರಿಗೆ ತಡವಾಗಿದೆ. ಕೋತನಹಿಪ್ಪರಗಾ ಮತ್ತು ನಿಂಬರಗಾ ರೈತರಿಗೆ ಭೂಸ್ವಾಧಿಧೀನ ಪರಿಹಾರ ಮೊತ್ತ ಪಾವತಿಯಾಗಿದ್ದು, ಕಾಮಗಾರಿ ನಡೆಯಲಿದೆ. ಪಡಸಾವಳಿಯಲ್ಲಿ ರೈತರು ತಕರಾರೆತ್ತಿದ್ದರಿಂದ ಇನ್ನು ಪ್ರಕ್ರಿಯೆ ಶುರುವಾಗಿಲ್ಲ.
•
ಆನಂದಕುಮಾರ,
ಪ್ರಭಾರಿ ಎಇಇ,
ಸಣ್ಣ ನೀರಾವರಿ ಇಲಾಖೆ, ಕಲಬುರಗಿ
ಮಹಾದೇವ ವಡಗಾಂವ