ಆಳಂದ: ಸಭೆ, ಸಮಾರಂಭ, ಪೂಜೆ, ಅರ್ಚನೆ ಮತ್ತು ಮದುವೆ ಸಮಾರಂಭಗಳಂತ ಕಾರ್ಯಕ್ಕೆ ಬಳಕೆ ಆಗುತ್ತಿದ್ದ ಹೂ ಕೋವಿಡ್ ಲಾಕ್‌ಡೌನ್‌ನಿಂದಾಗಿ ಮಾರಾಟವಾಗದೇ ಗಿಡದಲ್ಲೇ ಒಣಗಿ ಹಾಳಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ತಾಲೂಕಿನ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರೈತರು ಸಾಕಷ್ಟು ಖರ್ಚು ಮಾಡಿ ಬೆಳೆದ ಸೇವಂತಿ, ಗುಲಾಬಿ ಹೂವುಗಳು ಗಿಡದಲ್ಲೇ ಒಣಗತೊಡಗಿದೆ.
ಬೇಸಿಗೆಯಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಹೂವಿಗೆ ಬೇಡಿಕೆ ಇರುತ್ತಿತ್ತು. ಆದರೀಗ ಬೇಡಿಕೆ ಸಂಪೂರ್ಣ ಕುಸಿದಿದೆ. ಇನ್ನೊಂದು ವಾರದಲ್ಲಿ ನೀರು ಹಾಯಿಸದೇ ಬಿಟ್ಟರೆ ಸಂಪೂರ್ಣ ಒಣಗಿ ಹೋಗುತ್ತದೆ. ಒಣಗಿದ ಹೂವುಗಳನ್ನು ತೆಗೆಯಲು ಹಣ ಖರ್ಚು ಮಾಡಬೇಕಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ನಷ್ಟದಲ್ಲಿ ತೋಟಗಾರಿಕೆ: ಲಾಕ್ ಡೌನ್ ವಿಸ್ತಾರವಾದ ಪರಿಣಾಮ ಈಗಾಗಲೇ ಮಾರುಕಟ್ಟೆ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ತೋಟಗಾರಿಕೆ ಬೆಳೆಗಾರರು, ತರಕಾರಿ ಬೆಳೆಗಾರರು ಕೃಷಿ ಉತ್ಪನ್ನಗಳಿಗೆ ಆದ ನಷ್ಟದಿಂದ ಬಳಲುತ್ತಿದ್ದಾರೆ. ದ್ರಾಕ್ಷಿ, ದಾಳಿಂಬೆ, ಕುಂಬಳಕಾಯಿ, ಬಾಳೆಹಣ್ಣು, ಪಪ್ಪಾಯಿ, ಕಲ್ಲಂಗಡಿ ಸೇರಿದಂತೆ ಅನೇಕ ಬೆಳೆಗಳು ಈಗ ಮಾರುಕಟ್ಟೆ ಇಲ್ಲದೇ ಕೊಳೆಯುವಂತಾಗಿದೆ. ಅಲ್ಲದೇ, ತರಕಾರಿ ಬೆಳೆಗಳನ್ನು ಸಹ ಮಾರಾಟ ಮಾಡುವುದಕ್ಕೆ ತೀವ್ರ ತೊಂದರೆ ಆಗಿದೆ. ಹೀಗಾಗಿ ತೋಟಗಾರಿಕೆ, ತರಕಾರಿ ಬೆಳೆಗಾರರಿಗೆ ಆಗಿರುವ ನಷ್ಟದ ಕುರಿತು ಸಮೀಕ್ಷೆ ಕೈಗೊಂಡು, ಸೂಕ್ತ ಪರಿಹಾರ ಕೊಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಹೂವುಗಳನ್ನು ಬೆಳೆದ ರೈತರಿಗೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ರೈತರು ಗುಲಾಬಿ, ಮಲ್ಲಿಗೆ, ಚೆಂಡು, ಸೇವಂತಿ ಹೀಗೆ ಮುಂತಾದ ಹೂಗಳನ್ನು ಬೆಳೆಯಲು ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಇಂತಹ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
ಪಂಡಿತ ಶೇರಿಕಾರ, ಹೂ ಬೆಳೆಗಾರ
ಒಟ್ಟು 61 ಎಕರೆ ಪ್ರದೇಶ ಪ್ರದೇಶದಲ್ಲಿ ಸುಮಾರು 25 ಟನ್ ಹೂಗಳನ್ನು ರೈತರು ಬೆಳೆದಿದ್ದಾರೆ. ಅಂದಾಜು 15 ಲಕ್ಷ ರೂ. ಮೌಲ್ಯದ ಸುಗಂಧರಾಜ, ಸೇವಂತಿ, ಚೆಂಡು, ಸೇವಂತಗಿ, ಮಲ್ಲಿಗೆ, ಗುಲಾಬಿ ಹೂ ಬೆಳೆದಿದ್ದಾರೆ. ಈ ಹೂಗಳು ಮಾರಾಟವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ನಷ್ಟವಾದ ಮಾಹಿತಿ ಸಲ್ಲಿಸಲಾಗಿದೆ. ಅಲ್ಲದೇ ತರಕಾರಿಗೆ ಬೆಲೆ ಕಡಿಮೆ ಇದೆ. ಆದರೆ ಮಾರಾಟಕ್ಕೆ ತೊಂದರೆ ಇಲ್ಲ. ಸಾಗಾಣೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಖರೀದಾರರು ಮತ್ತು ರೈತರ ನಡುವೆ ಸಂಪರ್ಕ ಒದಗಿಸಿ ಮಾರಾಟಕ್ಕೆ ಅನುಕೂಲವಾಗಲು ಇಲಾಖೆ ಕ್ರಮ ಕೈಗೊಂಡಿದೆ.
ಸುರೇಂದ್ರನಾಥ ಹೊನ್ನಪ್ಪಗೋಳ,
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು.
ಮಹಾದೇವ ವಡಗಾಂವ