Advertisement

ಬರದಲ್ಲೂ ವರವಾದ ಕೆರೆಗಳನ್ನು ಕಾಪಾಡಿ

09:52 AM Jun 01, 2019 | Team Udayavani |

ಮಹಾದೇವ ವಡಗಾಂವ
ಆಳಂದ:
ಭೀಕರ ಬರದಲೂ ಬತ್ತದೆ ಜನ-ಜಾನುವಾರುಗಳಿಗೆ ವರವಾದ ತಾಲೂಕಿನ ಪ್ರಮುಖ ನಾಲ್ಕು ಕೆರೆಗಳು ಕಾಯಕಲ್ಪಕ್ಕೆ ಎದುರು ನೋಡುತ್ತಿವೆ.

Advertisement

ಸಣ್ಣ ನೀರಾವರಿ ಇಲಾಖೆಯಿಂದ 1972ರ ಬರಗಾಲದಲ್ಲಿ ಅಂದಿನ ಶಾಸಕ ದಿ| ಎ.ವಿ. ಪಾಟೀಲ ಅವರ ಅಧಿಕಾರ ಅವಧಿಯಲ್ಲಿ ನಿರ್ಮಾಣವಾದ ತಾಲೂಕಿನ ಸಾಲೇಗಾಂವ, ಆಳಂದ, ಮಟಕಿ ಸೇರಿ ಇನ್ನಿತರ ಕೆರೆಗಳು ಇಂದಿಗೂ ವರವಾಗಿವೆ.

ಸಾಲೇಗಾಂವ ಗ್ರಾಮದ ಕೆರೆಯಿಂದ ಕೆಳಭಾಗದ ಹತ್ತಾರು ಹಳ್ಳಿಗಳು ಅಂತರ್ಜಲ ಕಾಯ್ದುಕೊಂಡಿವೆ. ಅಲ್ಲದೆ, ಕೆರೆ ಕೆಳಭಾಗದಲ್ಲಿ ತೋಡಿದ ನಾಲ್ಕು ಬಾವಿಗಳಿಂದ ತಾಲೂಕಿನ ಚಿತಲಿ, ಖಜೂರಿ, ಸಾಲೇಗಾಂವ ಗ್ರಾಮಕ್ಕೆ ವರ್ಷವೀಡಿ ನೀರು ಒದಗಿಸಲಾಗುತ್ತಿದೆ. ಚಿತಲಿ ಗ್ರಾಮದಲ್ಲಿ 3000, ಸಾಲೇಗಾಂವ 4000, ಖಜೂರಿ ಗ್ರಾಮದಲ್ಲಿ 7000 ಸಾವಿರ ಜನಸಂಖ್ಯೆ ಸೇರಿ ಜಾನುವಾರುಗಳಿಗೆ ಈ ಕೆರೆ ನೀರೇ ವರವಾಗಿದೆ. ಕಳೆದ 15 ವರ್ಷಗಳ ಹಿಂದೆ ಕೆರೆ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಾಗ ಸ್ಪಂದಿಸಿದ ಅಂದಿನ ಸಚಿವ ರೇವುನಾಯಕ ಬೆಳಮಗಿ ಅವರು, ಸಣ್ಣ ನೀರಾವರಿ ಇಲಾಖೆಗೆ ಸರ್ಕಾರದ ಸುಮಾರು ಒಂದು ಕೋಟಿ ರೂ. ಒದಗಿಸಿದ್ದರಿಂದ ಬದುವಿನ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಪ್ರತಿವರ್ಷ ನೀರಿನ ಒಳಹರಿವಿನಿಂದಾಗಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿದೆ. ಕೆರೆ ಬದುವಿನ ಎತ್ತರ ಇನ್ನಷ್ಟು ಹೆಚ್ಚಿಸಿದರೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿ ಕುಡಿಯಲು ಹಾಗೂ ಕೃಷಿಗೂ ಒದಗಿಸಬಹುದಾಗಿದೆ. ಆದರೆ ಇಂಥ ಕೆರೆಗಳಿಗೆ ಸರ್ಕಾರ ಹುಡುಕಿ ಅಗತ್ಯ ಕಾಮಗಾರಿ ಕೈಗೊಳ್ಳಬೇಕು ಎಂದು ಜೀವ ಮತ್ತು ಜಲ ಪ್ರೇಮಿಗಳು ಒತ್ತಾಯಿಸಿದ್ದಾರೆ.

ತಾಲೂಕು ಕೇಂದ್ರ ಆಳಂದ ಪಟ್ಟಣದ ಉರಮಗಾ ಹೆದ್ದಾರಿ ಮಾರ್ಗದಲ್ಲಿನ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ ಹತ್ತಿರವಿರುವ ಸಣ್ಣ ಕೆರೆಯಿಂದ ಜನರಿಗೆ ದೊಡ್ಡ ಮಟ್ಟದ ಉಪಕಾರವಾಗಿದೆ. ಕೆರೆ ಆವರಣದಲ್ಲೇ ತೆರೆದ ಬಾವಿ ತೋಡಿ ತೆಲಾಕುಣಿ ಹಾಗೂ ಗ್ರಾಪಂ ಕೇಂದ್ರ ಕಿಣ್ಣಿಸುಲ್ತಾನ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ. ಇಂಥ ಕೆರೆ ಒತ್ತುವರಿಯಾಗಿದೆ. ಅಲ್ಲದೆ, ಅಪಾರ ಪ್ರಮಾಣದ ಹೂಳು ತುಂಬಿದ್ದು, ಕೆರೆ ಒಡ್ಡು ಎತ್ತರಿಸುವ ಕೆಲಸ ನಡೆದರೆ ನೀರಿನ ಬರ ದೂರವಾಗಲಿದೆ. ಅಲ್ಲದೇ, ಇಲ್ಲಿ ಉದ್ಯಾನವನ ಮಾಡಬೇಕು ಎನ್ನುವ ಜನರ ಬಹುದಿನದ ಬೇಡಿಕೆ ಕನಸಾಗಿಯೇ ಉಳಿದುಕೊಂಡಿದೆ. ಬಾವಿ ತೋಡಿ ತೀರ್ಥ ತಾಂಡಕ್ಕೂ ಇಲ್ಲಿಂದಲೇ ನೀರು ಒದಗಿಸಲು ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದು, ಕೆಲಸ ಪ್ರಗತಿಯಲ್ಲಿದೆ. ಗಂಡಾಂತರ ಪರಿಸ್ಥಿತಿಯಲ್ಲೂ ನೀರು ಒದಗಿಸುವ ಸಾಮರ್ಥ್ಯ ಹೊಂದಿರುವ ಕೆರೆಗಳ ಅಭಿವೃದ್ಧಿ ಮಾಡಿ ನೀರು ಸಂಗ್ರಹವಾದರೆ ಆಪತ್ಕಾಲದಲ್ಲೂ ಬರ ಹಿಂಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಪ್ರಜ್ಞಾವಂತರು.

ಸಾಲೇಗಾಂವ ಕೆರೆ ಸುಮಾರು 40 ವರ್ಷಗಳಿಂದಲೂ ಮಳೆ ಕೊರತೆ, ಬರದ ಬವಣೆ ನಡುವೆಯೂ ಸಂಗ್ರಹವಾದ ನೀರಿನಲ್ಲೇ ಜೀವ ಸಂಕುಲಕ್ಕೆ ಅನುಕೂಲ ಕಲ್ಪಿಸಿದೆ. ಬರಬಿದ್ದರೂ ಒಮ್ಮೆಯೂ ಬತ್ತದೆ ಇರುವ ಕೆರೆಯಲ್ಲಿ ಈಗ ಸಾಕಷ್ಟು ಹೂಳು ತುಂಬಿದೆ. ಕೆರೆ ಒಡ್ಡಿನ ಎತ್ತರ ಹೆಚ್ಚಿಸಿದರೆ ಕುಡಿಯಲು ಅಷ್ಟೇ ಅಲ್ಲ, ಕೃಷಿಗೂ ವರ್ಷವೀಡಿ ನೀರು ಪೂರೈಸುವ ಸಾಮರ್ಥ್ಯ ಹೊಂದಿದೆ.

Advertisement

ಮಂಟಕಿ, ಬೆಳಮಗಿ ಕೆರೆಯಲ್ಲೂ ಪ್ರಸಕ್ತ ಶೇ. 50ರಷ್ಟು ನೀರಿದೆ. ಅಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮೇಲ್ಮಟ್ಟದಲ್ಲಿದೆ. ಇಂಥ ಕೆರೆಗಳನ್ನು ಅಭಿವೃದ್ಧಿ ಮಾಡಿ ಅನುಕೂಲ ಒದಗಿಸುವುದು ಅಗತ್ಯವಾಗಿದೆ. ಸಂಬಂಧಿತ ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃರ್ತರಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next