ಮಹಾದೇವ ವಡಗಾಂವ
ಆಳಂದ: ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಶಿಗೆ ಬಂದಿದ್ದ ಸೋಯಾಬಿನ್, ಎಳ್ಳು, ಸೂರ್ಯಕಾಂತಿ ಸೇರಿದಂತೆ ಇನ್ನಿತರ ಬೆಳೆ ನೀರಿಗೆ ನೆನೆದು ಲಕ್ಷಾಂತರ ರೂ. ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ, ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಳೆ ನೀರಿನ ರಭಸಕ್ಕೆ ತಾಲೂಕಿನ ಅಲ್ಲಲ್ಲಿನ ರಸ್ತೆಗಳಿಗೆ ಹಾನಿಯಾದರೆ, ಮತ್ತೊಂದೆಡೆ ನಂದಗೂರ ಕೋತನಹಿಪ್ಪರಗಾ ಸೇತುವೆ ರಸ್ತೆ ಕೊಚ್ಚಿ ಸಂಪರ್ಕ ಕಡಿತಗೊಂಡಿದೆ.
ಇನ್ನೊಂದೆಡೆ ಕಣಮಸ್ ತಡಕಲ್ ಮಾರ್ಗದಲ್ಲಿನ ಎರಡ್ಮೂರು ತಿಂಗಳ ಹಿಂದೆಯೇ ಸೇತುವೆ ಭಾಗಶಃ ಕೊಚ್ಚಿಹೋಗಿ ವಾಹನ ಸಂಪರ್ಕ ಕಡಿತಗೊಂಡಿದ್ದರೂ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.
ಸಂಪರ್ಕ ಕಡಿತದಿಂದ ಪ್ರಯಾಣಿಕರು, ವಾಹನ ಸವಾರರು ಮಾರ್ಗ ಬದಲಿಸಿ ಸಂಚರಿಸುವಂತೆ ಆಗಿದೆ.
ರಾಜ್ಯ ಹೆದ್ದಾರಿ 34 ಪಟ್ಟಣದಿಂದ ವಿ.ಕೆ. ಸಲಗರ ಮಾರ್ಗದಲ್ಲಿನ ಹೊರವಲಯದ ಸೇತುವೆ ಹತ್ತಿರ ಹದಗೆಟ್ಟ ರಸ್ತೆಯ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ. ಇನ್ನೊಂದೆಡೆ ಗಾಣಗಾಪುರ-ಆಳಂದ ಮಾರ್ಗದ ಬಟ್ಟರಗಾ ಮತ್ತು ನಿಂಬರಗಾ ಮಧ್ಯದ ಸೇತುವೆಯಲ್ಲಿ ನೀರಿನ ರಭರಸಕ್ಕೆ ದೊಡ್ಡ ಗಾತ್ರದ ಗುಂಡಿಯೊಂದು ಬಿದ್ದಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ದೂರದ ನೆರೆಹೊರೆ ಪ್ರಯಾಣಿಕರು, ವಾಹನ ಸವಾರರು, ವಿದ್ಯಾರ್ಥಿಗಳು ಇದರಿಂದ ಪರದಾಡುವಂತೆ ಆಗಿದೆ. ರಾಶಿಗೆ ಬಂದಿದ್ದ ಸೋಯಾಬಿನ್, ಸೂರ್ಯಕಾಂತಿ, ಎಳ್ಳನ್ನು ಅನೇಕ ರೈತರು ಕೊಯ್ಲು ಮಾಡಿದ್ದರು. ಆದರೆ ಮಳೆ ನೀರಿಗೆ ಇವುಗಳು ನೆನೆದು ಧಾನ್ಯ ಕೈಗೆ ಬಾರದೆ ನಷ್ಟ ಅನುಭವಿಸುವಂತೆ ಆಗಿದೆ. ಇನ್ನು ಅನೇಕ ಹೊಲಗಳಲ್ಲಿ ಬೆಳೆಯಲ್ಲ ಕೊಳೆತು ನಷ್ಟವಾಗಿದೆ. ಆಳಂದ ಸೇರಿದಂತೆ ಹಳ್ಳದ ದಡದ ಹೊಲಗಳಲ್ಲಿ ನೀರಿನ ಒತ್ತಡಕ್ಕೆ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ, ಬೆಳೆ ಹಾಳಾಗಿದೆ. ಅಲ್ಲದೇ, ಭೂಮಿಯಲ್ಲಿ ತೆಗ್ಗುದಿನ್ನೆಬಿದ್ದು, ಕೃಷಿ ಚಟುವಟಿಕೆಗೆ ಅಡಚಣಿ ಆಗಿದೆ.