Advertisement

ಬೇಸಾಯಕ್ಕೆ ಮಾಗಿ ಉಳುಮೆ ಮದ್ದು

10:22 AM Apr 27, 2019 | Naveen |

ಆಳಂದ: ರೈತರು ಮುಂಗಾರು ಬಿತ್ತನೆ ಸಿದ್ಧತೆಗಾಗಿ ಮಾಗಿ ಉಳುಮೆಯತ್ತ ಮುಖಮಾಡಿದ್ದಾರೆ. ಹೊತ್ತೇರುವ ಮುನ್ನ ಹಾಗೂ ಇಳಿ ಹೊತ್ತಿನ ನಡುವೆ ಕುಂಟಿ (ಗಳ್ಯಾ) ಹೊಡೆದು ಭೂಮಿ ಸಾಗ ಮಾಡುವಲ್ಲಿ ಮಗ್ನವಾಗಿದ್ದಾರೆ.

Advertisement

ಮಾಗಿ ಉಳುಮೆ ಕೈಗೊಂಡರೆ ಮಾತ್ರ ಬಿತ್ತನೆಗೆ ಭೂಮಿ ಹದವಾಗುವ ಹಿನ್ನೆಲೆಯಲ್ಲಿ ಮತ್ತು ಇದರಿಂದ ಬೆಳೆಗೆ ವೈಜ್ಞಾನಿಕ ಲಾಭ ಆಗುವುದರಿಂದ ರೈತರು ಪ್ರತಿ ವರ್ಷ ಭೂಮಿಯನ್ನು ಕನಿಷ್ಠ ಎರಡ್ಮೂರು ಬಾರಿಯಾದರೂ ಉಳುಮೆ ಮಾಡಿ ಸ್ವಚ್ಛಗೊಳಿಸುತ್ತಾರೆ.

ಎತ್ತುಗಳ ಅವಲಂಬಿತ ಕೃಷಿ ವರ್ಷ ಕಳೆದಂತೆ ಕ್ಷೀಣಿಸುತ್ತಿದ್ದರಿಂದ ಈಗ ಟ್ರ್ಯಾಕ್ಟರ್‌ಗಳ ಮೂಲಕವೇ ಭೂಮಿಯನ್ನು ಸಾಗ ಮಾಡುತ್ತಿರುವುದು ಹೆಚ್ಚಾಗತೊಡಗಿದೆ.

ಬರ ಆವರಿಸಿದ್ದರಿಂದ ಅಷ್ಟಕ್ಕಷ್ಟೇ ಬೆಳೆ ಕೈಗೆ ಬಂದಿತ್ತು. ಸೂಕ್ತ ಬೆಲೆಯೂ ಸಿಕ್ಕಿರಲಿಲ್ಲ. ಖಾಸಗಿ ಮಾರುಕಟ್ಟೆಯಲ್ಲಿ ತೊಗರಿಗೆ ಬೆಲೆಯಿಲ್ಲ. ಸರ್ಕಾರದ ಖರೀದಿ ಮೂಲಕ ಕೇವಲ 10 ಕ್ವಿಂಟಲ್ ಖರೀದಿಗೆ ಅವಕಾಶವಿದೆ. ಈ 10 ಕ್ವಿಂಟಲ್ ಮಾರಾಟ ಮಾಡಿದ ರೈತರ ಕೈಗೆ ಹಣ ಸೇರಿಲ್ಲ. ಸೇರಿದ ಹಣ ಸಾಲ ಮುಟ್ಟಿಸಲಿಕ್ಕೇ ಸಾಕಾಗುತ್ತಿದೆ. ಸದ್ಯ ಕೈಯಲ್ಲಿ ಕಾಸಿಲ್ಲ. ಸಾಲದ ಹೊರೆ ಸಾಮಾನ್ಯವಾಗಿದೆ. ಕೃಷಿ ಬಿಟ್ಟರೆ ಬೇರೆನೂ ಕೆಲಸ ಮಾಡುವಂತಿಲ್ಲ. ಅನ್ನದ ಉತ್ಪಾದನೆ ಜವಾಬ್ದಾರಿ ನಮ್ಮ ಮೇಲಿದೆ ಎನ್ನುತ್ತಾರೆ ರೈತರು.

ಏಪ್ರಿಲ್- ಮೇ ತಿಂಗಳು ಕಳೆಯುವುದು ಹೇಗಪ್ಪ ಎನ್ನುತ್ತಲೇ ಜೂನ್‌ ಸಮೀಪಿಸಿ ಮಳೆ ಬಂದರೆ ಬಿತ್ತನೆ ಹೇಗಪ್ಪ ಮಾಡಬೇಕು ಎನ್ನುವ ಸ್ಥಿತಿಯಲ್ಲಿ ರೈತರಿದ್ದಾರೆ. ಇದ್ದ ಎತ್ತುಗಳನ್ನು ಬರಲಗಾದಿಂದ ಮಾರಿಕೊಂಡು ಬಿಟ್ಟಿದ್ದಾರೆ. ಬಿತ್ತನೆ ಮಾಡಲು ಮುಂದಾದರೆ ಬೀಜ, ಗೊಬ್ಬರ ಖರೀದಿಗೂ ಹಣವಿಲ್ಲ. ಸಕಾಲಕ್ಕೆ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಸಾಹುಕಾರಿ ಸಾಲ ಈ ಬಾರಿ ದೊರೆಯದ ಪರಿಸ್ಥಿತಿ ಉಂಟಾಗಿದೆ. ರೈತರಿಗೆ ಬರದ ಹಸಿವಿನ ನಡುವೆ ಮುಂಗಾರು ಹಂಗಾಮಿನ ಸಿದ್ಧತೆಯ ಹೋರಾಟ ಮಾಡುವ ಅನಿವಾರ್ಯತೆಯೂ ಬಂದೊದಗಿದೆ.

Advertisement

ಸಕಾಲಕ್ಕೆ ಬೀಜ ಒದಗಿಸಿ: ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯೂ ಈ ಭಾಗದ ರೈತರ ಬೀಜದ ಬೇಡಿಕೆಯನ್ನು ಸಕಾಲಕ್ಕೆ ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಂಡು ಉದ್ದು, ಹೆಸರು, ತೊಗರಿ, ಶೇಂಗಾ, ಸೂಯಾಬಿನ್‌, ಸಜ್ಜೆ, ಸೂರ್ಯಕಾಂತಿ, ಎಳ್ಳು ಮತ್ತಿತರ ಬೀಜಗಳ ಬೇಡಿಕೆ ಇದೆ. ಮಳೆ ಬಿದ್ದ ಮೇಲೆ ಬೀಜ, ಗೊಬ್ಬರಕ್ಕಾಗಿ ಅಲೆದಾಡಿ ದಿನದೊಡುವಂತೆ ಆಗಬಾರದು. ಇಲಾಖೆಯಲ್ಲಿ ಈಗಾಗಲೇ ಮೊದಲೆ ಬೀಜಗಳ ದಾಸ್ತಾನು ಆಗಬೇಕು ಎನ್ನುತ್ತಾರೆ ರೈತರು.

ಸಬ್ಸಿಡಿ ನಾಮಕೆವಾಸ್ತೆ ಬೇಡ: ಬಿತ್ತನೆ ಬೀಜವನ್ನು ಕೃಷಿ ಇಲಾಖೆಗೆ ಪೂರೈಸುವಾಗ ಕಂಪನಿಗಳು ಬೆಲೆ ಹೆಚ್ಚಿಸುತ್ತವೆ. ಕಂಪನಿಗಳಿಂದ ಖರೀದಿಸುವ ಬೀಜಗಳಿಗೆ ಕೃಷಿ ಇಲಾಖೆ ಶೇ. 50ಷ್ಟು ಸಬ್ಸಿಡಿ ಕಡಿತ ಮಾಡಿ ವಿತರಿಸಿದ ಮೇಲೂ ಹೊರಗೆ ಸಿಗುವ ಬೀಜದ ಬೆಲೆಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಈ ರೀತಿಯ ನಾಮಕಾವಾಸ್ತೆ ಸಬ್ಸಿಡಿ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸುತ್ತಾರೆ ರೈತರು.

ಬೆಳೆ ಕಟಾವು ಆದ ಮೇಲೆ ಮಾಗಿ ಉಳುಮೆ ನಿರಂತರವಾಗಿ ಮಾಡಬೇಕು. ಅಂದರೆ ಮೂರು ರೀತಿ ಲಾಭವಾಗುತ್ತದೆ. ಹೊಲದಲ್ಲಿ ಬಿದ್ದ ಹುಲ್ಲು, ಕಸ ಕಣಿಕೆ ಮಣ್ಣಿನಲ್ಲಿ ಸಿಕ್ಕು ಮಳೆ ಬಂದಾಗ ಕೊಳೆತು ಗೊಬ್ಬರವಾಗಿ ಪರಿಣಮಿಸುತ್ತದೆ. ನೆಟೆ ರೋಗ ನಿರ್ವಹಣೆ, ಉಳಿಮೆಯಿಂದ ಭೂಮಿ ನೀರು ಇಂಗಿಸಿಕೊಳ್ಳುತ್ತದೆ. ಅಲ್ಲದೆ, ರೋಗಾಣು ಜೀವಿಗಳು ಬಿಸಿಲಿಗೆ ಬಿದ್ದಾಗ ಪಕ್ಷಿಗಳು ತಿಂದುಹಾಕುತ್ತಿವೆ. ಅಲ್ಲದೆ, ಕೆಲವೊಂದು ಸತ್ತು ಹೋಗುವುದರಿಂದ ರೋಗವು ನಿರ್ವಹಣೆಯಾಗಿ ಬೆಳೆಗೆ ಅನುಕೂಲವಾಗುತ್ತದೆ ಎಂದು ಕೃಷಿ ತಜ್ಞರು ಮತ್ತು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next