Advertisement

ನಾಳೆ ಕಡಣಿ ಗ್ರಾಮದಲ್ಲಿ ಕನ್ನಡ ಕಂಪು

01:04 PM Dec 27, 2019 | Naveen |

ಆಲಮೇಲ: ಆಲಮೇಲ ಪಟ್ಟಣ ನೂತನ ತಾಲೂಕು ಕೇಂದ್ರವಾದ ನಂತರ ಮೊದಲ ಬಾರಿಗೆ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ತಾಲೂಕಿನ ಕಡಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಡಿ.28ರಂದು ಜರುಗಲಿದೆ.

Advertisement

ಸಮ್ಮೇಳನ ಸರ್ವಾಧ್ಯಕ್ಷರಾಗಿ ಸಾಹಿತಿ ಸಿದ್ದರಾಮ ಉಪ್ಪಿನ ಅವರನ್ನು ಆಯ್ಕೆ ಮಾಡಲಾಗಿದೆ. ಗ್ರಾಮದ ಸದ್ಗುರು ಗುರುಲಿಂಗೇಶ್ವರ ಮಹರಾಜರ ಮಹಾ ಮಂಟಪದಲ್ಲಿ ಗೀಗೀ ಗಾರುಡಿಗ ಕಡಣಿ ಕಲ್ಲಪ್ಪ ವೇದಿಕೆ ಮೇಲೆ ಕಾರ್ಯಕ್ರಮ ಜರುಗಲಿದೆ.

ಕನ್ನಡದ ಕಟ್ಟಾಳು ಗಂಗಾಧರ ಕೋರಳ್ಳಿ, ಶಿಕ್ಷಣ ಪ್ರೇಮಿ ದುಂಡಪ್ಪಜ್ಜ ಲಾಳಸಂಗಿ, ಹಜರತ್‌ ಪೀರ ಗಾಲಿಬಸಾಬ, ಮಹಾಮಹಿಮ ಶ್ರೀ ಹುಚ್ಚಲಿಂಗೇಶ್ವರ, ಶಿಕ್ಷಣ ತಜ್ಞ ವಿ.ಜಿ. ಪಾಟೀಲ, ಗೀಗೀ ಹಾಡುಗಾರ್ತಿ ಭೀಮವ್ವ ಮಡ್ನಳ್ಳಿ ಎಂಬುವರ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ.

ದಾಸೋಹ ಮನೆಗೆ ಶರಣ ಭೋಗೇಶ್ವರ ಹೆಸರು, ಪುಸ್ತಕ ಮಳಿಗೆಗೆ ಸಾಹಿತ್ಯರತ್ನ ಶಿವಣ್ಣ ಕತ್ತಿ, ಚಿತ್ರಕಲಾ ಪ್ರದರ್ಶನ ಮಳಿಗೆಗೆ ಕಲಾನಿ  ಕೈಲಾಸಯ್ಯ ಹಿರೇಮಠ ಹೆಸರು ಇಡಲಾಗಿದೆ.

ಧ್ವಜಾರೋಹಣ: ಅಂದು ಬೆಳಗ್ಗೆ 8 ಗಂಟೆಗೆ ಗ್ರಾಪಂ ಅಧ್ಯಕ್ಷ ಭೋಗಣ್ಣ ಲಾಳಸಂಗಿ ರಾಷ್ಟ್ರಧ್ವಜಾರೋಹಣ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ತಾವರಗೇರಿ ನಾಡಧ್ವಜ ಮತ್ತು ಕಸಾಪ ತಾಲೂಕಾಧ್ಯಕ್ಷ ರಮೇಶ ಕತ್ತಿ ಪರಿಷತ್‌ ಧ್ವಜಾರೋಹಣ ನೆರವೇರಿಸಲಿದ್ದಾರೆ.

Advertisement

ಪುಸ್ತಕ ಮಳಿಗೆಯನ್ನು ಜಿಪಂ ಸದಸ್ಯೆ ವಿಜಯಲಕ್ಷ್ಮೀ ನಾಗೂರ, ದಾಸೋಹ ಮನೆ ಜಿಪಂ ಸದಸ್ಯ ಬಿ.ಐ. ಯಂಟಮಾನ, ಚಿತ್ರಕಲಾ ಮಳಿಗೆಯನ್ನು ತಾಪಂ ಸದಸ್ಯ ಡಾ| ಸಂಜೀವಕುಮಾರ ಯಂಟಮಾನ ಉದ್ಘಾಟಿಸಲಿದ್ದಾರೆ.

ಬೆಳಗ್ಗೆ 10.30ಕ್ಕೆ ಸಮ್ಮೇಳನದ ಉದ್ಘಾಟನೆ ಜರುಗಲಿದ್ದು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ, ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಹಾಗೂ ಆರೂಢಮಠದ ಶಂಕರಾನಂದ ಮಹರಾಜರು ಸಮ್ಮುಖ ವಹಿಸಲಿದ್ದಾರೆ. ಹಾವೇರಿ ಜಿಲ್ಲೆಯ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ| ಡಿ.ಬಿ. ನಾಯಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸ್ಮರಣ ಸಂಚಿಕೆ-ಕೃತಿ ಬಿಡುಗಡೆ: ಶಾಸಕ ಎಂ.ಸಿ. ಮನಗೂಳಿ ಅಧ್ಯಕ್ಷತೆ ವಹಿಸಲಿದ್ದು, ಸ್ಮರಣ ಸಂಚಿಕೆಯನ್ನು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಕಡಣಿ ಕಾವ್ಯಧಾರೆ ಗ್ರಂಥವನ್ನು ಸಂಸದ ರಮೇಶ ಜಿಗಜಿಣಗಿ, ಕನ್ನಡ ದಿನದರ್ಶಿಕೆ ಜಿಪಂ ಅಧ್ಯಕ್ಷ ಶಿವಯೋಗೇಪ್ಪ ನೇದಲಗಿ, ಬದುಕು ಬರಹ ಕೃತಿಯನ್ನು ವಿಪ ಸದಸ್ಯ ಅರುಣ ಶಹಾಪುರ, ಸಮ್ಮೇಳನಾಧ್ಯಕ್ಷರ ನುಡಿ ಪುಸ್ತಕ ಮಾಜಿ ಶಾಸಕ ರಮೇಶ ಭೂಸನೂರ ಬಿಡುಗಡೆಗೊಳಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಸಾಹಿತ್ಯ-ಸಂಸ್ಕೃತಿ ಗೋಷ್ಠಿ ನಡೆಯಲ್ಲಿದ್ದು ಸಾಹಿತಿ ಡಾ| ಸಂಗಮನಾಥ ಲೋಕಾಪುರ ಅಧ್ಯಕ್ಷತೆ ವಹಿಸುವರು. ಸಿಂದಗಿ ಕಸಾಪ ಅಧ್ಯಕ್ಷ ಎಸ್‌.ಬಿ. ಚೌಧರಿ ಅತಿಥಿಗಳಾಗಿ ಭಾಗವಹಿಸುವರು. ಗೋಷ್ಠಿಯಲ್ಲಿ ಮಹಿಳಾ ಸಾಹಿತ್ಯ ಮತ್ತು ದಲಿತ ಸಂವೇದನೆ ಕುರಿತಾಗಿ ಡಾ| ಸುಜಾತಾ ಚಲವಾದಿ, ಜನಪದ ಸಾಹಿತ್ಯದಲ್ಲಿ ಗ್ರಾಮ ಬದುಕು ವಿಷಯ ಕುರಿತು ಪ್ರೊ| ಬಿ.ಎನ್‌.ಪಾಟೀಲ ವಿಷಯ ಮಂಡಿಸಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ತಾಲೂಕು ದರ್ಶನ ಗೋಷ್ಠಿ ನಡೆಯಲಿದ್ದು, ಕಲಬುರ್ಗಿ ಸಾಹಿತಿ ಡಾ| ಶ್ರೀಶೈಲ ನಾಗರಾಳ ಅಧ್ಯಕ್ಷತೆ ವಹಿಸುವರು. ಸಿದ್ದರಾಮ ಉಪ್ಪಿನ ಅವರ ಬದುಕು ಬರಹದ ಕುರಿತಾಗಿ ಸಾಹಿತಿ ಮನು ಪತ್ತಾರ, ಕಡಣಿ ಸಾಹಿತ್ಯ ಸಂಸ್ಕೃತಿ ಕುರಿತಾಗಿ ಗಾಯತ್ರಿ ದೇವಿ ಮಹಾಮನಿ ಹಾಗೂ ಆಲಮೇಲ ತಾಲೂಕು ದರ್ಶನದ ಕುರಿತಾಗಿ ಉಪನ್ಯಾಸಕ ಸಿದ್ದಲಿಂಗ ಕಿಣಗಿ ವಿಷಯ ಮಂಡಿಸಲಿದ್ದಾರೆ.

ಸಂಜೆ 4ಕ್ಕೆ ಕವಿಗೋಷ್ಠಿ ಜರುಗಲಿದ್ದು, ಸಾಹಿತಿ ಡಾ| ಚನ್ನಪ್ಪ ಕಟ್ಟಿ ಅಧ್ಯಕ್ಷತೆ ಹಾಗೂ ಇಂಡಿ ಕಸಾಪ ಅಧ್ಯಕ್ಷ ಡಾ| ಕಾಂತು ಇಂಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕವಿಗೋಷ್ಠಿಯಲ್ಲಿ 30ಕ್ಕೂ ಹೆಚ್ಚು ಕವಿಗಳು ಸ್ವರಚಿತ ಕವನ ಮಂಡಿಸಲಿದ್ದಾರೆ. ಸಂಜೆ 5ಕ್ಕೆ ಆಲಮೇಲ ಕಸಾಪ ಅಧ್ಯಕ್ಷ ರಮೇಶ ಕತ್ತಿ ಅಧ್ಯಕ್ಷತೆಯಲ್ಲಿ ಬಹಿರಂಗ ಸಮಾವೇಶ ಜರುಗಲಿದೆ. ಸಂಜೆ 5.30ಕ್ಕೆ ಸನ್ಮಾನ ಮತ್ತು ಸಮಾರೋಪ ಜರುಗಲಿದ್ದು, ಬೋರಗಿ-ಪುರದಾಳದ ತಪೋರತ್ನ ಮಹಾಲಿಂಗೇಶ್ವರ ಸ್ವಾಮೀಜಿ, ಮುಗಳಿಯ ಸುರಗಿ ಸಂಸ್ಥಾನಮಠದ ಭೋಗೇಶ್ವರ ಸ್ವಾಮೀಜಿ, ಗೋಳಸಾರದ ಅಭಿನವ ಪುಂಡಲಿಂಗ ಮಹರಾಜರು ಹಾಗೂ ರಾಜಯೋಗಿನಿ ಬ್ರಹ್ಮಕುಮಾರಿ ರೇಣುಕಾಜಿ ಸಾನ್ನಿಧ್ಯ ವಹಿಸುವರು.

ಸನ್ಮಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಸಂಜೆ 6.30ಕ್ಕೆ ಸಾಂಸ್ಕೃತಿಕ ಸೌರಭ ಜರುಗಲಿದ್ದು, ಆಲಮೇಲ ಅರ್ಜುಣಗಿ ಮಠದ ಸಂಗನಬಸವ ಶಿವಾಚಾರ್ಯರು, ಆರೂಢಮಠದ ಶರಣಬಸವ ಶರಣರು ಹಾಗೂ ಶ್ರೀಶೈಲ ಅಳ್ಳೋಳ್ಳಿಮಠ ಸಾನ್ನಿಧ್ಯ ವಹಿಸುವರು. ಕಾರ್ಯಕ್ರಮದಲ್ಲಿ ಡಾ| ಸಂದೀಪ ಪಾಟೀಲ ಅಧ್ಯಕ್ಷತೆ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶಕ ಮಹೇಶ ಪೊದ್ದಾರ ಉದ್ಘಾಟಿಸುವರು. ಈ ಸಂಧರ್ಭದಲ್ಲಿ ವಿವಿಧ ಶಾಲಾ ಮಕ್ಕಳು ಹಾಗೂ ಯುವ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಆಲಮೇಲ ತಾಲೂಕಾಧ್ಯಕ್ಷ ರಮೇಶ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next